ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು: ನಾಗಶ್ರೀ

7

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು: ನಾಗಶ್ರೀ

Published:
Updated:

ಚಾಮರಾಜನಗರ: `ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಸದಸ್ಯರು ಹಾಗೂ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ಬಗೆಹರಿಸಲು ಪ್ರಥಮ ಆದ್ಯತೆ ನೀಡುತ್ತೇನೆ~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ. ನಾಗಶ್ರೀ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.`ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಹಂತ ಹಂತವಾಗಿ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು. ಅಧಿಕಾರವಹಿಸಿಕೊಂಡ ತಕ್ಷಣವೇ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯ ಸಮಸ್ಯೆ ಕುರಿತು ಚರ್ಚಿಸುತ್ತೇನೆ~ ಎಂದರು.`ಈಗಾಗಲೇ, ಕಬಿನಿ ನದಿ ಮೂಲದಿಂದ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ 297 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 261.05 ಕೋಟಿ ರೂ ಮೊತ್ತದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶಾಸಕರು, ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ತ್ವರಿತವಾಗಿ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸುತ್ತೇನೆ~ ಎಂದು ಹೇಳಿದರು.ಕುಡಿಯುವ ನೀರಿಗಾಗಿ ಕೊರೆದಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್‌ನಿಂದ ವಿಳಂಬವಾಗುತ್ತಿದೆ. ವಿದ್ಯುತ್ ಪರಿವರ್ತಕಗಳ ಪೂರೈಕೆಯ ಕೊರತೆಯಿಂದ ಗ್ರಾಮೀಣರಿಗೆ ನೀರು ಪೂರೈಸಲು ತೊಂದರೆಯಾಗಿದೆ. ಚಾಮರಾಜನಗರ ಮತ್ತು ಕೊಳ್ಳೇಗಾಲದ ಸೆಸ್ಕ್ ವಿಭಾಗದಲ್ಲಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಿ ಶೀಘ್ರವೇ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.ಗ್ರಾಮೀಣರು ಕೂಡ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ತೊಡಕಾಗಿದೆ. ಇದಕ್ಕೆ ನಿರ್ಮಲ ಭಾರತ ಅಭಿಯಾನವೇ ಸಾಕ್ಷಿ. ಈ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶವಿದ್ದರೂ, ಫಲಾನುಭವಿಗಳು ಆಸಕ್ತಿ ತೋರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಆಡಳಿತಗಳು ನಿಗದಿತ ಅವಧಿಯೊಳಗೆ ತೆರಿಗೆ ವಸೂಲಿ ಮಾಡಬೇಕು. ಜತೆಗೆ, ಗ್ರಾಮಾಭಿವೃದ್ಧಿಗೆ ಅದನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿಯೇ ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡಲಾಗುವುದು ಎಂದ ಅವರು, ಸ್ಥಳೀಯ ಆಡಳಿತದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಗ್ರಾಮಾಭಿವೃದ್ಧಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.`ಐಐಎಂನಿಂದ ಯುವ ನಾಯಕತ್ವದ ಬಗ್ಗೆ ತರಬೇತಿ ಪಡೆದಿದ್ದೇನೆ. ಪಕ್ಷದ ವರಿಷ್ಠರ ಸಹಕಾರದಿಂದ ನನಗೆ ಈ ಹುದ್ದೆ ಲಭಿಸಿದೆ. ನನಗೆ ಸಿಕ್ಕಿರುವ ಅವಧಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಲು ಒತ್ತು ನೀಡುತ್ತೇನೆ. ಅಧ್ಯಕ್ಷ ಸ್ಥಾನದ ಜವಾಬ್ದಾರಿಯೊಂದಿಗೆ ವಕೀಲ ವೃತ್ತಿಯನ್ನೂ ಮುಂದುವರಿಸುತ್ತೇನೆ ಎಂದ ಅವರು, ವಿಧಾನಸಭೆಗೆ ಸ್ಪರ್ಧಿಸುವ ಬಗ್ಗೆ ಚುನಾವಣಾ ವೇಳೆಯ ಸ್ಥಿತಿಗತಿ ಅರಿತು ನಿರ್ಧಾರ ಕೈಗೊಳ್ಳುತ್ತೇನೆ~ ಎಂದರು.ಮಾಧ್ಯಮಗಳು ಕೂಡ ವಾಸ್ತವಾಂಶವನ್ನು ಬಿಂಬಿಸಬೇಕು. ಅಧಿಕಾರಸ್ಥರು ತಪ್ಪು ಮಾಡಿದಾಗ ತಿದ್ದಿ ನಡೆಯುವಂತೆ ಮಾರ್ಗದರ್ಶನ ನೀಡಬೇಕು ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry