ಶುಕ್ರವಾರ, ಏಪ್ರಿಲ್ 23, 2021
31 °C

ಜಿಲ್ಲೆಯ ಸಾಧಕರಿಗೆ ರಾಜ್ಯೋತ್ಸವ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲೆಯ ಅಂಧ ಕಲಾವಿದ, ಖ್ಯಾತ ವಯೊಲಿನ್ ವಾದಕ ಹನುಮಂತಪ್ಪ ತಿಮ್ಮಾಪುರ ಹಾಗೂ ಯೋಗ ಶಿಕ್ಷಕ ಆರ್.ಎಸ್. ಪಾಟೀಲ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಅಂಧತ್ವವನ್ನು ಮೆಟ್ಟಿನಿಂತು ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ತಿಮ್ಮಾಪುರ, 30 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಅವಿರತವಾಗಿ ವಾಯಲಿನ್ ವಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ 60ರ ವಸಂತಕ್ಕೆ ಕಾಲಿಟ್ಟಿದ್ದಾರೆ.ಪಂಡಿತ್ ಡಾ. ಪುಟ್ಟರಾಜ ಗವಾಯಿಗಳವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಹನುಮಂತಪ್ಪ ಬಸಪ್ಪ ತಿಮ್ಮಾಪುರ (ಕಾಮನಹಳ್ಳಿ) ಇವರ ತಂದೆ ಬಸಪ್ಪ, ತಾಯಿ ಪಾರ್ವತೆಮ್ಮ. ಅಂಧರಾಗಿ ಹುಟ್ಟಿದ್ದರೂ ಸಂಗೀತ ಕ್ಷೇತ್ರಕ್ಕೆ ಬೆಳಕಾಗಿ ಬೆಳೆದವರು.ಬಾಲ್ಯದಿಂದ ಅಂಟಿಸಿಕೊಂಡು ಬಂದ ಸಂಗೀತದ ಗೀಳು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂ. ಪುಟ್ಟರಾಜ ಗವಾಯಿಗಳ ಮಡಿಲಲ್ಲಿ ಬೀಳುವಂತೆ ಮಾಡಿತು. ಇವರ ಪ್ರಾರಂಭಿಕ ಗುರುಗಳು ವಾಯಲಿನ್ ವಾದಕರಾದ ರೇವಣಪ್ಪ ಕುಂಕಮಗಾರ ಮತ್ತು ಬಿ.ಎಸ್. ಮಠರವರು. ನಂತರ ಪಂ. ಪುಟ್ಟರಾಜ ಗವಾಯಿಗಳವರ ಕೃಪಾಶೀರ್ವಾದದಿಂದ ಹನುಮಂತಪ್ಪ ನವರು ಒಬ್ಬ ಶ್ರೇಷ್ಠ ವಾಯಲಿನ್ ಕಲಾವಿದರಾಗಿ ರೂಪಗೊಂಡರು.ಇವರ ವಾಯಲಿನ್ ಕಲಾ ಪ್ರತಿಭೆಯನ್ನು ಗುರುತಿಸಿ `ಕಲಾ ಕೋವಿದ~, `ಕಲಾ ಕುಶಲ~, `ತಂತೀವಾದ್ಯ ಪ್ರವೀಣ~, `ಕಲಾ ಚೇತನ~ ಹಾಗೂ `ಪಿಟೀಲು ವಾದನ ಚತುರ~ ಎಂಬ ಬಿರುದುಗಳನ್ನು ಹಾಗೂ ಅನೇಕ ಪ್ರಶಸ್ತಿಯನ್ನು ನೀಡಿ ನಾಡಿನ ಅನೇಕ ಮಠ ಮಾನ್ಯಗಳು, ಸಂಗೀತ ಸಂಸ್ಥೆಗಳು ಸನ್ಮಾನಿಸಿವೆ.ಹಿಂದುಸ್ತಾನಿ ಸಂಗೀತ ಕ್ಷೇತ್ರದ ಅಪರೂಪದ ಕಲಾವಿದರು ಹಾಗೂ ಉತ್ತರ ಕರ್ನಾಟಕದ ಪ್ರತಿಭಾನ್ವಿತ ಸಂಗೀತ ಕ್ಷೇತ್ರದ ಕೊಡುಗೆ. ಇಂಥ ಮಹಾನ್ ಕಲಾವಿದನಿಗೆ ಈಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಜಿಲ್ಲೆಯ ಸಂಗೀತ ಕ್ಷೇತ್ರ ಸಂದ ಗೌರವವಾಗಿದೆ.ಜಿಲ್ಲೆಯ ಇನ್ನೊಬ್ಬ ಸಾಧಕ ಆರ್.ಎಸ್.ಪಾಟೀಲರು ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಪಾಟೀಲರು, 41 ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡಿ ಜನರಿಗೆ ಆರೋಗ್ಯ ಕಾಪಾಡಿಕೊಳ್ಳುವ ಸರಳ ಸೂತ್ರಗಳನ್ನು ತಿಳಿಸಿಕೊಟ್ಟಿದ್ದಾರೆ. ಸರ್ಕಾರದ ಆಯುಷ್ ಚಿಕಿತ್ಸಾ ವಿಭಾಗದಲ್ಲಿಯೂ ಉಚಿತವಾಗಿ ಯೋಗ ತರಬೇತಿ, ರಾಜ್ಯದಾದ್ಯಂತ 2500 ಆಯುಷ್ ಕಾರ್ಯಕರ್ತರಿಗೆ ಉಚಿತ ಯೋಗ ತರಬೇತಿ ನೀಡಿ ಸಾಧನೆ ಮಾಡಿದ್ದಾರೆ.ಸಂತಸ ತಂದಿದೆ: ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ತಮಗೆ ತೀವ ಸಂತಸ ತಂದಿದೆ. ಇದು ಯೋಗಕ್ಕೆ ಸಂದ ಗೌರವವಾಗಿದೆ ಎಂದು ರಾಮನಗೌಡ ಪಾಟೀಲರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.