ಶುಕ್ರವಾರ, ಏಪ್ರಿಲ್ 16, 2021
31 °C

ಜಿಲ್ಲೆಯ 7 ಗ್ರಾ.ಪಂ.ಗಳಿಗೆ ನಿರ್ಮಲ ಗರಿ

ಪ್ರಜಾವಾಣಿ ವಾರ್ತೆ ಪಿ.ಕೆ.ರವಿಕುಮಾರ್ Updated:

ಅಕ್ಷರ ಗಾತ್ರ : | |

ಜಿಲ್ಲೆಯ 7 ಗ್ರಾ.ಪಂ.ಗಳಿಗೆ ನಿರ್ಮಲ ಗರಿ

ಮೈಸೂರು: ನೈರ್ಮಲೀಕರಣವನ್ನು ಸಾಧಿಸಿದ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಪ್ರತಿ  ವರ್ಷ ನೀಡುವ `ನಿರ್ಮಲ ಗ್ರಾಮ ಪುರಸ್ಕಾರ~ವನ್ನು ಈ ಬಾರಿ (2011 ಸಾಲಿನ) ಮೈಸೂರು ಜಿಲ್ಲೆಯ 7 ಗ್ರಾಮ ಪಂಚಾಯಿತಿಗಳು ತಮ್ಮ ಮಡಿಲಿಗೆ ಹಾಕಿಕೊಂಡಿವೆ.ಮೈಸೂರು ತಾಲ್ಲೂಕಿನ ಧನಗಹಳ್ಳಿ, ಇಲವಾಲ, ಹುಣಸೂರು ತಾಲ್ಲೂಕಿನ ಬಿಳಿಕೆರೆ, ಕೆ.ಆರ್.ನಗರ ತಾಲ್ಲೂಕಿನ ಅಂಕನಹಳ್ಳಿ, ಸಾಲಿಗ್ರಾಮ, ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ, ತಾಂಡವಪುರ, ತಿ.ನರಸೀಪುರ ಸೋಮನಾಥಪುರ ಗ್ರಾಮ ಪಂಚಾಯಿತಿಗಳು 2011 ಸಾಲಿನ `ನಿರ್ಮಲ~ ಕೀರ್ತಿಯನ್ನು ಪಡೆದುಕೊಂಡಿವೆ. 

ಪುರಸ್ಕಾರ ಪಡೆದ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರತಿ ಕುಟುಂಬ, ಶಾಲೆ ಹಾಗೂ ಅಂಗನವಾಡಿಗಳಲ್ಲಿ ಶೌಚಾಲಯಗಳ ನಿರ್ಮಾಣ ಹಾಗೂ ಘನ ಮತ್ತು ದ್ರವ ತ್ಯಾಜ್ಯಗಳನ್ನು ಸಮರ್ಪಕ ನಿರ್ವಹಣೆ ಮಾಡುವ ಮೂಲಕ `ನಿರ್ಮಲ ಗ್ರಾಮ ಪುರಸ್ಕಾರ~ಕ್ಕೆ ಪಾತ್ರವಾಗಿವೆ.ಧನಗಹಳ್ಳಿ ಗ್ರಾ.ಪಂ.ಗೆ ಪುರಸ್ಕಾರ:

ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಜಿಲ್ಲೆಯ 7 ಗ್ರಾಮ ಪಂಚಾಯಿತಿಗಳಲ್ಲಿ ಮೈಸೂರು ತಾಲ್ಲೂಕಿನ `ಧನಗಹಳ್ಳಿ~ ಕೂಡ ಒಂದು. ಇದು ಮೈಸೂರು ನಗರದ ಅನತಿ ದೂರದಲ್ಲೇ ಇರುವುದರಿಂದ ಉತ್ತಮ ನೈರ್ಮಲೀಕರಣವನ್ನು ಹೊಂದಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಧನಗಹಳ್ಳಿ, ಡಿ.ಸಾಲುಂಡಿ, ದೊಡ್ಡಹುಂಡಿ, ಕೆಂಚಲಗೂಡು, ಕೆರೆಹುಂಡಿ, ಯಡಹಳ್ಳಿ ಹಾಗೂ ಕೋಟೆಹುಂಡಿ ಗ್ರಾಮಗಳು ಸೇರುತ್ತವೆ. ಸುಮಾರು 2200 ಕುಟುಂಬಗಳನ್ನು ಹೊಂದಿರುವ ಈ ಪಂಚಾಯಿತಿಯು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಪಂಚಾಯಿತಿಯ ಎಲ್ಲ ಗ್ರಾಮಗಳಲ್ಲಿ ಶೇ. 90 ಕ್ಕೂ ಹೆಚ್ಚು ಕುಟುಂಬಗಳು ಶೌಚಾಲಯಗಳನ್ನು ಹೊಂದಿದೆ. ಈ ಪಂಚಾಯಿತಿ ವ್ಯಾಪ್ತಿ ಪ್ರೌಢಶಾಲೆ ಸೇರಿದಂತೆ 8 ಸರ್ಕಾರಿ ಶಾಲೆ ಹಾಗೂ 8 ಅಂಗನವಾಡಿಗಳಿದ್ದು, ಎಲ್ಲದ್ದರಲ್ಲೂ ಶೌಚಾಲಯಗಳನ್ನು ನಿರ್ಮಿಸಿ ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದೆ.ಸಹಾಯಧನ: ಈ ಯೋಜನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ, ಶಾಲೆಗಳು, ಅಂಗನವಾಡಿಗಳಲ್ಲಿ ಶೌಚಾಲಯ, ಸಮುದಾಯ ಶೌಚಾಲಯ ಹಾಗೂ ಘನ ತ್ಯಾಜ್ಯ ವಿಲೇವಾರಿ  ಘಟಕ ನಿರ್ಮಿಸಲು ಧನ ಸಹಾಯ ಮಾಡಲಾಗುತ್ತದೆ.ಈ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲು ತಲಾ ಕುಟುಂಬಗಳಿಗೆ ರೂ 4,700 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದಲ್ಲದೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 26 ದಿನಗಳ ಕೂಲಿಯನ್ನು (ರೂ 4,500) ಪಡೆಯಬಹುದಾಗಿದೆ. ಇದರೊಂದಿಗೆ ಫಲಾನುಭವಿಗಳು ರೂ 800 ಭರಿಸಬೇಕು. ಒಟ್ಟು ಪ್ರತಿ ಶೌಚಾಲಯ ಘಟಕದ ನಿರ್ಮಾಣಕ್ಕಾಗಿ ರೂ 10,000 ತಲುಗಲಿದೆ.ಶಾಲೆ ಶೌಚಾಲಯಕ್ಕೆ ರೂ 35,000, ಅಂಗನವಾಡಿ ಶೌಚಾಲಯಕ್ಕೆ ರೂ 8,000 ಹಾಗೂ ಸಮುದಾಯ ಶೌಚಾಲಯ (ಬಸ್ ನಿಲ್ದಾಣ, ಮಾರುಕಟ್ಟೆ, ಇತ್ಯಾದಿ ಸ್ಥಳಗಳಲ್ಲಿ) ನಿರ್ಮಿಸಲು ರೂ 2 ಲಕ್ಷ ಧನ ಸಹಾಯ ದೊರೆಯುತ್ತದೆ.

ಎಲ್ಲರ ಸಹಕಾರಕ್ಕೆ ಸಿಕ್ಕ ಗೌರವ

ಧನಗಹಳ್ಳಿ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ `ನಿರ್ಮಲ ಗ್ರಾಮ ಪುರಸ್ಕಾರ~ ಸಿಕ್ಕಿರುವುದು ಸಂತಸ ತಂದಿದೆ. ಈ ಪುರಸ್ಕಾರ ಸಿಗಲು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವದ್ಧಿ ಅಧಿಕಾರಿ (ಪಿಡಿಒ), ಪಂಚಾಯಿತಿ ಕಾರ್ಯದರ್ಶಿ ಹಾಗೂ ಗ್ರಾಮಸ್ಥರು ಕಾರಣರಾಗಿದ್ದಾರೆ.

-ಸೋಮಣ್ಣ, ಧನಗಹಳ್ಳಿ ಗ್ರಾ.ಪಂ. ಅಧ್ಯಕ್ಷ ಮಕ್ಕಳಲ್ಲಿ ಸ್ವಚ್ಛತೆ ಅರಿವು

ಧನಗಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ದೊಡ್ಡಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿನ ಪರಿಸರ ಉತ್ತಮವಾಗಿದೆ. ಇಲ್ಲಿ ಮೂರು ಶೌಚಾಲ ಯಗಳಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡ ಲಾಗುತ್ತಿದೆ. ಮಕ್ಕಳಲ್ಲೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

-ಲಕ್ಷ್ಮೀ ಭಟ್, ಮುಖ್ಯಶಿಕ್ಷಕಿ,ನೈರ್ಮಲ್ಯಕ್ಕೆ ಹಣ ಮೀಸಲು

ಧನಗಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರು ವುದರಿಂದ `ನಿರ್ಮಲ ಗ್ರಾಮ ಪುರಸ್ಕಾರ~ದಲ್ಲಿ 5 ಲಕ್ಷ ರೂಪಾಯಿ ಅನುದಾನ ಲಭಿಸಲಿದೆ. ಈ ಹಣವನ್ನು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನೈರ್ಮಲೀಕರಣಕ್ಕೆ ಬಳಸಲಾಗುವುದು.

-ಕೆ.ಬಿ.ಲಿಂಗಪ್ಪ, ಪಿಡಿಒ

`ನಿರ್ಮಲ ಭಾರತ~

2006ರಲ್ಲಿ ಆರಂಭಗೊಂಡ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು 2012 ಏಪ್ರಿಲ್‌ನಿಂದ  `ನಿರ್ಮಲ ಭಾರತ ಅಭಿಯಾನ~ವೆಂದು ಮರುನಾಮ ಕರಣ ಮಾಡಲಾಗಿದೆ. ಆರಂಭದಲ್ಲಿ ಈ ಯೋಜನೆಯಡಿ ಕೇವಲ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ, ಈ ವರ್ಷದಿಂದ ಈ ಯೋಜನೆಯನ್ನು ಕೆಲವು ನಿಬಂಧನೆಗೊಳಪಟ್ಟು ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕುಟುಂಬಗಳಿಗೂ ವಿಸ್ತರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.