ಮಂಗಳವಾರ, ಜನವರಿ 21, 2020
28 °C
ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ನಿರ್ಣಯ

ಜಿಲ್ಲೆ ಅಭಿವೃದ್ಧಿಗೆ ₨4,381 ಕೋಟಿ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯ ಜನ ಜೀವನ ಮಟ್ಟ ಸುಧಾರಣೆಗೆ ೨೦೧೬-೧೭ ರವರೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಾದ ₨ ೪೩೮೧ ಕೋಟಿಗಳ ವಿಸ್ತೃತ ಯೋಜನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಯೋಜನಾ ವಿಭಾಗದಿಂದ ತಯಾರಿಸಲಾದ ಜಿಲ್ಲೆಯ ಪ್ರಸಕ್ತ ಸ್ಥಿತಿ ಹಾಗೂ ಮುನ್ನೋಟ ೨೦೨೫ ರ ಕುರಿತು ಯೋಜನೆಗೆ ಸಮಿತಿಯಿಂದ ಸರ್ವಾನುಮತದಿಂದ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಿಕೊಡುವ ನಿರ್ಣಯ ಕೈಗೊಳ್ಳಲಾಯಿತು.ಮುಂದಿನ ೨೦೧೬-೧೭ ರ ವರೆಗಿನ ಪಂಚವಾರ್ಷಿಕ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ಮಾನವ ಸೂಚ್ಯಂಕವನ್ನು ಹೆಚ್ಚಿಸಲು ಜನ ಜೀವನ ಮಟ್ಟ ಸುಧಾರಣೆ, ಆರೋಗ್ಯ, ಕುಡಿಯುವ ನೀರು ಪೂರೈಕೆ, ಉತ್ಪಾದನಾ ವಲಯ ಅಭಿವೃದ್ಧಿ ಕೈಗೊಳ್ಳಲು ವಿವಿಧ ಇಲಾಖೆಗಳಿಗೆ ₨ ೪,೩೮೧ ಕೋಟಿ ಬೇಕಾಗಿದೆ. ಜಿಲ್ಲೆಯ ೧೮೫ ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮಸಭೆ, ೬ ಸ್ಥಳೀಯ ಸಂಸ್ಥೆಗಳಾದ ನಗರ, ಪಟ್ಟಣ ವಾರ್ಡ್‌ಸಭೆ ಆಧರಿಸಿ ವಿಸ್ತೃತ ಯೋಜನೆಯನ್ನು ರೂಪಿಸಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಅನುಷ್ಠಾನ ಮಾಡಬೇಕಾದ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.೨೦೦೯-೧೦ ರ ಜಿಡಿಪಿ ದರದ ಅನ್ವಯ ರಾಜ್ಯದಲ್ಲಿ ₨ ೪೬,೨೮೫ ತಲಾ ಆದಾಯವಿದ್ದರೆ, ಜಿಲ್ಲೆಯಲ್ಲಿ ₨ ೨೪,೫೧೦ ತಲಾ ಆದಾಯವಿದೆ. ಆರ್ಥಿಕ ಅಭಿವೃದ್ಧಿಯಲ್ಲಿ ಜಿಲ್ಲೆಯ ಪ್ರಾಥಮಿಕ ವಲಯದ ಕೊಡುಗೆ ಕಡಿಮೆಯಾಗಿರುತ್ತದೆ. ಆದರೆ ಮಾಧ್ಯಮಿಕ ಹಾಗೂ ತೃತೀಯ ವಲಯಗಳ ಕೊಡುಗೆ ಜಿಲ್ಲೆಯಲ್ಲಿ ಹೆಚ್ಚಿದೆ. ಕೃಷಿ ಉತ್ಪನ್ನದಲ್ಲಿ ರಾಜ್ಯದ ಕೊಡುಗೆ ಶೇ ೧೬.೬ರಷ್ಟಿದ್ದರೆ ಜಿಲ್ಲೆಯಲ್ಲಿ ಇದು ಗಣನೀಯವಾಗಿ ಹೆಚ್ಚಿಳವಾಗಿ ಶೇ ೩೦.೧೭ ರಷ್ಟಿದೆ. ಆದರೆ ಮಾಧ್ಯಮಿಕ ವಲಯದಲ್ಲಿ ರಾಜ್ಯದಲ್ಲಿ ಶೇ ೨೮.೯೪ ರಷ್ಟಿದ್ದರೆ ಜಿಲ್ಲೆಯಲ್ಲಿ ಶೇ ೧೭.೪೮, ಸೇವಾ ವಲಯದಲ್ಲಿ ರಾಜ್ಯದಲ್ಲಿ ಶೇ ೫೪.೪೬ರಷ್ಟಿದ್ದರೆ ಜಿಲ್ಲೆಯಲ್ಲಿ ೫೨.೩೫ ರಷ್ಟಿದೆ. ಆದ್ಯತಾ ವಲಯದಲ್ಲಿ ಬರುವ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಸೇವಾ ವಲಯ ಹಾಗೂ ಉತ್ಪಾದನಾ ವಲಯದಲ್ಲಿ ಬರುವ ಕೃಷಿ, ತೋಟಗಾರಿಕೆ, ಕೈಗಾರಿಕೆಯನ್ನು ಹೆಚ್ಚಿಸಲು ವಿವಿಧ ಇಲಾಖೆಗಳ ಮೂಲಕ ಈಗಿರುವ ಅಭಿವೃದ್ಧಿಯ ಜೊತೆಗೆ ಶೇ ೫ ರಷ್ಟು ಅಭಿವೃದ್ಧಿ ಹೆಚ್ಚಿಸಲು ೨೦೧೬–-೧೭ರವರೆಗೆ ₨ ೪,೩೮೧ ಕೋಟಿಗಳ ವಿಸ್ತೃತ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಅನುದಾನ ಜಿಲ್ಲೆಗೆ ಬರಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿಸಭೆಗೆ ವಿವರಿಸಿದರು.ಬಿ.ಆರ್.ಜಿ.ಎಫ್ ಯೋಜನೆಯಡಿ ೨೦೧೨-೧೩ನೇ ಸಾಲಿನಲ್ಲಿ ₨ ೨೨.೨೭ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳಿಗೆ ₨ ೧೭.೮೧ ಕೋಟಿ ಅನುದಾನ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ₨ ೪.೪೫ ಕೋಟಿ ಹಂಚಿಕೆ ಮಾಡಲಾಗಿದೆ. ಇದನ್ನು ಕಳೆದ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗಿರುತ್ತದೆ. ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆ ಮುಖ್ಯಸ್ಥರು ಅನುದಾನ ಬಳಕೆ ಮಾಡಿಕೊಂಡಿರುವ ಬಳಕೆ ಪ್ರಮಾಣ ಪತ್ರವನ್ನು ೧೫ ದಿನಗಳಲ್ಲಿ ನೀಡಬೇಕೆಂದು ತಿಳಿಸಲಾಯಿತು.೨೦೧೩-೧೪ನೇ ಸಾಲಿನಲ್ಲಿ ಬಿ.ಆರ್.ಜಿ.ಎಫ್.ನಡಿ ₨ ೨೭.೩೩ಕೋಟಿ ಅನುದಾನಕ್ಕೆ ಯೋಜನೆ ತಯಾರಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಇನ್ನೊಂದು ವಾರದಲ್ಲಿ ₨ ೨೩ ಕೋಟಿಯಷ್ಟು ಅನುದಾನ ಬಿಡುಗಡೆಯಾಗಲಿದೆ ಎಂದು ಸಿಇಒ ಸಭೆಗೆ ತಿಳಿಸಿದರು.ನಗರಸಭೆ ಅಧ್ಯಕ್ಷರು ಹಾಗೂ ಯೋಜನಾ ಸಮಿತಿ ಉಪಾಧ್ಯಕ್ಷ  ಬಿ.ಕಾಂತರಾಜ್‌  ಮಾತನಾಡಿ, ೨೦೧೩-೧೪ನೇ ಸಾಲಿಗೆ ಬಿ.ಆರ್.ಜಿ.ಎಫ್.ನಡಿ ಯೋಜನೆಯನ್ನು ತಯಾರು ಮಾಡಲಾಗಿದ್ದು ನಗರಸಭೆ ವ್ಯಾಪ್ತಿಯಲ್ಲಿ ತಯಾರಿಸಿದ ಯೋಜನೆಯ ಬದಲಾವಣೆ ಅಗತ್ಯವಿದ್ದಲ್ಲಿ ಅವಕಾಶ ಮಾಡಿ ಕೊಡಬೇಕೆಂದು ಕೋರಿದರು.ನಗರ, ಪಟ್ಟಣ ಸ್ಥಳೀಯ ಸಂಸ್ಥೆಯಿಂದ ಯೋಜನಾ ಸಮಿತಿಗೆ ಮೂರು ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಒಂದು ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯದ ಕಾರಣ ಸದಸ್ಯರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಮುಂದಿನ ಸಭೆಯ ವೇಳೆಗೆ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಮುಖ್ಯ ಯೋಜನಾಧಿಕಾರಿ ಸಭೆಗೆ ಮಾಹಿತಿ ನೀಡಿದರು.ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎ.ಅನಿಲ್‌ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ನಾರಾಯಣಸ್ವಾಮಿ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಕಿಯೋನಿಕ್ಸ್ ಬಿಲ್ ತಡೆಯಿರಿ

೨೦೧೨-೧೩ನೇ ಸಾಲಿನ ಬಿ.ಆರ್.ಜಿ.ಎಫ್.ನಡಿ ₨ ೫೦ ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯ್ತಿ ಕಟ್ಟಡಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ಕಿಯೋನಿಕ್ಸ್ ಸಂಸ್ಥೆಗೆ ನೀಡಲಾಗಿದೆ. ಆದರೆ ಇವರು ಸರಿಯಾಗಿ ಕೆಲಸ ಮಾಡುವುದಿಲ್ಲ, ಯಾವುದೇ ಕಾಮಗಾರಿಯನ್ನು ಈ ಸಂಸ್ಥೆಗೆ ನೀಡಬಾರದು, ನೀಡಿದ್ದಲ್ಲಿ ಕಿಯೋನಿಕ್ಸ್‌ಗೆ ಬಿಲ್ ಪಾವತಿ ಮಾಡದೆ ತಡೆ ಹಿಡಿಯಬೇಕು ಎಂದು ಸದಸ್ಯರು ಒತ್ತಾಯಿಸಿದರು.  ಗುಂಪು ನಿಧಿಯಡಿ ಜಿಲ್ಲಾ ಪಂಚಾಯ್ತಿಯಿಂದ ೧೧೧ ಲಕ್ಷದಲ್ಲಿ ಕಾಮಗಾರಿ ಕೈಗೊಳ್ಳಬೇಕಾಗಿದ್ದು ಇದನ್ನು ಕೈಗೊಳ್ಳಬಾರದೆಂದು ಸದಸ್ಯರು ತಿಳಿಸಿದರು.

ಪ್ರತಿಕ್ರಿಯಿಸಿ (+)