ಶುಕ್ರವಾರ, ಆಗಸ್ಟ್ 23, 2019
21 °C

ಜಿಲ್ಲೆ ಮಕ್ಕಳಿಗೆ`ಕ್ಷೀರಭಾಗ್ಯ' ಯೋಜನೆ

Published:
Updated:

ರಾಯಚೂರು: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುವಾರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ನೀಡುವ ಕ್ಷೀರಭಾಗ್ಯ ಯೋಜನೆ ಅನುಷ್ಟಾನಗೊಳಿಸಲಾಯಿತು.ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಹಾಗೂ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಹಾಲು ಒಕ್ಕೂಟ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಸರ್ಕಾರಿ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಹಾಲು ವಿತರಣೆ `ಕ್ಷೀರಭಾಗ್ಯ ಯೋಜನೆ' ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು.ಜನರ ಸಮಸ್ಯೆಗೆ ಎಲ್ಲ ಅಧಿಕಾರಿಗಳು ಸ್ಪಂದನೆ ಮಾಡುಬೇಕು. ಭಷ್ಟರಹಿತ, ಬದ್ಧತೆ  ಹಾಗೂ ಕಾನೂನು ರೀತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಗಳಿಗೆ ಸರ್ಕಾರ ಬೆಂಬಲಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.ಕಳೆದ ಹಲವು ವರ್ಷಗಳಿಂದಲೂ  ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಕ್ಕಳಲ್ಲಿ ಅಪೌಷ್ಟಿಕ ಕೊರತೆ ಹೆಚ್ಚಾಗಿದೆ. ಸರ್ಕಾರ ಜಾರಿಗೊಳಿಸಿದ ಕ್ಷೀರಭಾಗ್ಯ ಯೋಜನೆ ಈ ಭಾಗಕ್ಕೆ ವಿಶೇಷವಾಗಿ ಅನುಕೂಲವಾಗಿದೆ ಎಂದು ಹೇಳಿದರು.ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಿತಾಸಕ್ತಿ ಹಾಗೂ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗಳಾದ ಕ್ಷೀರಭಾಗ್ಯ ಹಾಗೂ ಅನ್ನಭಾಗ್ಯ ಜಾರಿಗೊಳಿಸಿದೆ. ಮಕ್ಕಳು ದೈಹಿಕ, ಮಾನಸಿಕವಾಗಿ ಸದೃಢಗೊಳಿಸುವ ಮಹತ್ವದ ಉದ್ದೇಶ ಈ ಯೋಜನೆದ್ದಾಗಿದೆ ಎಂದು ತಿಳಿಸಿದರು.ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗಾಗಿ ಯುಪಿಎ ಸರ್ಕಾರ ಸಂವಿಧಾನದ 371(ಜೆ) ತಿದ್ದುಪಡಿ ಜಾರಿಗೊಳಿಸಿದೆ. ಈ ಭಾಗದ ಜನರಿಗೆ ಉದ್ಯೋಗ, ಶಿಕ್ಷಣ ಸೇರಿದಂತೆ ಅನೇಕ ಸೌಲಭ್ಯ  ದೊರಕುತ್ತವೆ. ಈ ತಿದ್ದುಪಡಿ ಮಾಡಿದೆ ಇದ್ದರೆ, ಈ ಭಾಗದ ಜನರಿಗೆ ಮೀಸಲಾತಿ ದೊರೆಯುವುದು ಅಸಾಧ್ಯವಾಗುತ್ತಿತ್ತು ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ರಾಮೀಣ ವಿಧಾನ ಸಭಾಕ್ಷೇತ್ರ ಶಾಸಕ ತಿಪ್ಪರಾಜು ಹವಾಲ್ದಾರ ಮಾತನಾಡಿ, ತಾವು ವಿರೋಧ ಪಕ್ಷದ ಶಾಸಕರಾಗಿದ್ದರೂ ಕಳೆದ ಒಂದು ತಿಂಗಳಿಂದ ಅನ್ನಭಾಗ್ಯ ಯೋಜನೆ, ಈಗ ಕ್ಷೀರಭಾಗ್ಯ ಯೋಜನೆ ಜಾರಿಗೆ ಮಾಡಿದ ಸರ್ಕಾರ ಕಾರ್ಯ ಸ್ವಾಗತಿಸುತ್ತೇನೆ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಸಲ್ಲದು ಎಂದು ಹೇಳಿದರು.ಪ್ರಾಸ್ತಾವಿಕ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಮಾತನಾಡಿ, ಜಿಲ್ಲೆಯ 1043 ಶಾಲೆಗಳ 2,69,908 ವಿದ್ಯಾರ್ಥಿಗಳು ಹಾಗೂ 2,654 ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿಯಾದ 2,40,439 ಮಕ್ಕಳು ಈ ಯೋಜನೆ ಉಪಯೋಗಪಡೆಯಲಿದ್ದಾರೆ. ಸರ್ಕಾರ ಜಾರಿಗೊಳಿಸಿದ ಕ್ಷೀರಭಾಗ್ಯ ಯೋಜನೆ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳು ದೇಶದ ಸಂಪತ್ತು ಎಂಬ ಉದ್ದೇಶ ಹಿನ್ನೆಲೆಯಲ್ಲಿ ಈ ಯೋಜನೆ ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದರು.ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು ಪಾಟೀಲ್ ವಹಿಸಿದ್ದರು. ಉಪಾಧ್ಯಕ್ಷ ಕೆ.ಶರಣಪ್ಪ, ರಾಯಚೂರು,ಬಳ್ಳಾರಿ ಮತ್ತು ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷ ಎಂ.ಸತ್ಯನಾರಾಯಣ, ನಿರ್ದೇಶಕರಾದ ಜಿ.ಸತ್ಯನಾರಾಯಣ, ಬಲುಸು ಸೂರ್ಯನಾರಾಯಣ ಮೂರ್ತಿ, ಮನ್ನೆ ತುಳಸಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಿ.ಚಂದ್ರಶೇಖರರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮುದ್ದುಮೋಹನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ ಬಿಸ್ನಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೋಹಿಣಿ ಹಿರೇಮಠ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್ ಪರಮೇಶ ಹಾಗೂ ಇತರ ಅಧಿಕಾರಿಗಳಿದ್ದರು. ಶಿಕ್ಷಕ ದಂಡಪ್ಪ ಬಿರಾದಾರ್ ನಿರೂಪಿಸಿದರು.ದೇವದುರ್ಗ ವರದಿ

ಪಟ್ಟಣದ ಬಸವೇಶ್ವರ ವಾರ್ಡ್‌ನ ಸರ್ಕಾರಿ ಕನ್ಯಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ 1ರಿಂದ 10ನೇ ತರಗತಿ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮವನ್ನು ಕಾಂಗ್ರೆಸ್ ಯುವ ಮುಖಂಡ ಬಿ.ವಿ.ನಾಯಕ ಉದ್ಘಾಟಿಸಿದರು.ಮಕ್ಕಳ ಬೌದ್ದಿಕ ಬೆಳವಣಿಗೆಗೆ ಹಾಲು ಉತ್ತಮ ಆಹಾರವಾಗಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ ಸೇರಿದಂತೆ ಪೌಷ್ಟಿಕಾಂಶ ಸುಧಾರಣೆ ಯೋಜನೆಯಿಂದ ಕಾಣಬಹುದಾಗಿದೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಮಾತನಾಡಿ, ತಾಲ್ಲೂಕಿನಲ್ಲಿ 358 ಸರ್ಕಾರಿ ಶಾಲೆ ಮತ್ತು 3ಅನುದಾನಿತ ಶಾಲೆ ಸೇರಿ ಒಟ್ಟು 361 ಶಾಲೆಗಳ ಮಕ್ಕಳಿಗೆ ವಾರದಲ್ಲಿ ಮೂರು ದಿನ ಪ್ರತಿ ಮಗುವಿಗೆ 18ಗ್ರಾಂ ಸಕ್ಕರೆ ಮಿಶ್ರಿತ ಹಾಲನ್ನು ನೀಡಲಾಗುವುದು ಮತ್ತು ಬಿಸಿಯೂಟದ ಮುಖ್ಯ ಅಡುಗೆದಾರರಿಗೆ ಹೆಚ್ಚುವರಿಯಾಗಿ 100 ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರಕಾಂತ ಹೇಳಿದರು.ಕಾಂಗ್ರೆಸ್ ಪಕ್ಷದ ಮುಖಂಡ ರವಿ ಪಾಟೀಲ, ನಿರಂಜನ ಬಳೆ, ರಾಮನಗೌಡ ಮಸರಕಲ್, ರಂಗಪ್ಪ ಗೋಸಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲಕ್ಷ್ಮೀ ರಾಠೋಡ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಜೀಜ್, ತಾಲ್ಲೂಕು ಅಧ್ಯಕ್ಷ ಗುರುಲಿಂಗಯ್ಯ ಕೋಡಿಮಠ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ನರಸಿಂಗರಾವ ಸರಕೀಲ್, ಶಾಲೆ ಮುಖ್ಯಗುರು ಬಾಲಯ್ಯ ಹಾಗೂ ಇತರರು ಇದ್ದರು.ಕನ್ಯಾ ಮಾದರಿ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶರಣಪ್ಪ ಗೋಳೆದ್ ನಿರೂಪಿಸಿದರು, ಸಿಆರ್‌ಪಿ ಮೌನೇಶ ವಂದಿಸಿದರು.ಸಿಂಧನೂರು ವರದಿ

ತಾಲ್ಲೂಕಿನ ಬಳಗಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರದ ನೂತನ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು.ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ಗುತ್ತೇದಾರ  ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಮಹಾಬಳೇಶ್ವರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ.ಎಸ್.ಎಸ್.ಜಾಗೀರದಾರ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ನಿರಂಜನಮೂರ್ತಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ಡಿಶ್, ಎಸ್‌ಡಿಎಂಸಿ ಅಧ್ಯಕ್ಷ ಅಮರಪ್ಪ ಉದ್ಬಾಳ, ಶ್ರೀಶೈಲ ಸೋಡಾ, ಸಮಾಜ ಸೇವಕ ರಾಘವೇಂದ್ರ ಕವಿತಾಳ, ನಾಗರಾಜಗೌಡ ಪೊಲೀಸ್ ಪಾಟೀಲ್, ಬಿ.ಶಿವರೆಡ್ಡೆಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಸವರಾಜ ನಿರೂಪಿಸಿದರು. ಅರುಂಧತಿ ವಂದಿಸಿದರು.ಮಸ್ಕಿ ವರದಿ

`ಕ್ಷೀರಭಾಗ್ಯ” ಯೋಜನೆಗೆ ಮಸ್ಕಿ ಸರ್ಕಾರಿ ಹಾಗೂ ಅನುಧಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಚಾಲನೆ ನೀಡಲಾಯಿತು.

ಮಲ್ಲಿಕಾರ್ಜುನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಜೊಗೀನ್ ರಾಮಣ್ಣ ಸ್ಮಾರಕ ಪ್ರೌಢ ಶಾಲೆಯ ಸಂಸ್ಥೆಯ ಉಪಾಧ್ಯಕ್ಷ ದಯಾನಂದ ಜೊಗೀನ್ ವಿದ್ಯಾರ್ಥಿಗಳಿಗೆ  ಹಾಲು ಕುಡಿಸುವ ಮೂಲಕ  ಚಾಲನೆ ನೀಡಿದರು. ಆಡಳಿತಾಧಿಕಾರಿ ವೀರೇಶ ಸೌದ್ರಿ, ಸೋಮಣ್ಣ ಸಜ್ಜನ್ ಸೇರಿದಂತೆ ಶಿಕ್ಷಕರು ಪಾಲ್ಗೊಂಡಿದ್ದರು.ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಅಧ್ಯಕ್ಷ ವೀರೇಶ ಹೂವಿನಭಾವಿ, ಬಸನಗೌಡ ಪೊ. ಪಾಟೀಲ ಚಾಲನೆ ನೀಡಿದರು. ಬಾಲಕರ ಪ್ರೌಢ ಶಾಲೆಯಲ್ಲಿ ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ಮಲ್ಲಯ್ಯ ಸಾಲಿಮಠ ಯೋಜನೆಗೆ ಚಾಲನೆ ನೀಡಿದರು. ಮುಖ್ಯಗುರು, ಶಿಕ್ಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಲಿಂಗಸುಗೂರ ವರದಿ

ಶಾಸಕರ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಶಾಸಕ ಮಾನಪ್ಪ ವಜ್ಜಲ ಚಾಲನೆ ನೀಡಿದರು. ಉಪವಿಭಾಗಾಧಿಕಾರಿ ಟಿ. ಯೋಗೇಶ ಮಾತನಾಡಿದರು.ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ಜಯಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಕುಮಾರಸ್ವಾಮಿ ಸಾಲ್ಮನಿ. ತಹಸೀಲ್ದಾರ ಜಿ.ಎಸ್. ಮಹಾಜನ, ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ, ಡಯಟ್‌ನ ನೋಡಲ್ ಅಧಿಕಾರಿ ರಾಮಚಂದ್ರಪ್ಪ. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಬಸವರಾಜ ಚಲವಾದಿ. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಂಬನಗೌಡ ಕಾಚಾಪುರ. ಉರ್ದು ಪ್ರಾಥಮಿಕ ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ಖಾಜಾಹುಸೇನ ಫೂಲ್‌ವಾಲೆ.ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಭುಲಿಂಗ ಗದ್ದಿ. ಜೆಡಿಎಸ್ ಮುಖಂಡ ಗಿರಿಮಲ್ಲನಗೌಡ ಕರಡಕಲ್ಲ. ಶಾಲಾ ಪರಿಷತ್‌ನ ಮುಖ್ಯಮಂತ್ರಿ ಕವಿತಾ, ಶಿಕ್ಷಣ ಮಂತ್ರಿ ಜ್ಯೋತಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಸಬಾಲಿಂಗಸುಗೂರ: ತಾಲ್ಲೂಕಿನ ಕಸಬಾಲಿಂಗಸುಗೂರ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಪುರಸಭೆ ಸದಸ್ಯ ಶಿವಪ್ರಸಾದಸ್ವಾಮಿ ಮಕ್ಕಳಿಗೆ ಹಾಲು ವಿತರಿಸಿ ವಿದ್ಯುಕ್ತ ಚಾಲನೆ ನೀಡಿದರು.ಹಾಲು ವಿತರಿಸಿ ಮಾತನಾಡಿ, ಸರ್ಕಾರ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಜೊತೆಗೆ ಆರೋಗ್ಯದ ಹಿತದೃಷ್ಟಿಯಿಂದ ವೈವಿಧ್ಯಮಯ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳು ಇಂತಹ ಯೋಜನೆ ಸದುಪಯೋಗ ಪಡೆದುಕೊಂಡು ವಿದ್ಯಾವಂತರಾಗುವಂತೆ ಸಲಹೆ ನೀಡಿದರು.ಶಾಲಾ ಮುಖ್ಯೋಪಾಧ್ಯಾಯ ಶಾಶಾವಲಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಚಂದಪ್ಪ. ಮುಖಂಡರಾದ ಮುದಕಪ್ಪ ನಾಯಕ, ರಾಮಯ್ಯ ಗುತ್ತೆದಾರ, ಬಸವರಾಜ, ಕುಪ್ಪಣ್ಣ ಪರಂಗಿ. ಶಿಕ್ಷಕರಾದ ಹನುಮಂತಪ್ಪ, ಶಾರದಾ, ಸಿದ್ಧಪ್ಪ ಮತ್ತಿತರರು ಪಾಲ್ಗೊಂಡಿದ್ದರು.ಜಾಲಹಳ್ಳಿ ವರದಿ

ಗಾಜಲದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಕ್ಷೀರಭಾಗ್ಯ ಯೋಜನೆಗೆ ಶಾಲೆಯ ಮುಖ್ಯಗುರು ಗಂಗಾರೆಡ್ಡಿ ಪಾಟೀಲ್ ಚಾಲನೆ ನೀಡಿದರು.ಕಾರ್ಯಕ್ರಮದ್ಲ್ಲಲಿ ಎಸ್‌ಡಿಎಂಸಿ ಅಧ್ಯಕ್ಷ ಸಾಬಗೌಡ, ಮುಖಂಡರಾದ ಶಾಂತಗೌಡ, ಸಿದ್ದಪ್ಪಗೌಡ, ವೀರನಗೌಡ, ತೇಜಪ್ಪ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪೂರ್ಣಿಮಾ ಜಿ, ಕಮಲಾಕ್ಷಿ, ನಾಗರತ್ನ ಕಾರ್ಯಕ್ರಮ ನಿರ್ವಹಿಸಿದರು.  ಕವಿತಾಳ ವರದಿ

ಶಾಲಾ ಮಕ್ಕಳಿಗೆ ಬಿಸಿ ಬಿಸಿ ಹಾಲು ಕುಡಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ  ಚಾಲನೆ ನೀಡಲಾಯಿತು.ಪಟ್ಟಣದ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಉನ್ನತೀಕರಿಸಿದ ಬಾಲಕರ ಸರ್ಕಾರಿ  ಪ್ರಾಥಮಿಕ ಶಾಲೆ, ಉರ್ದು ಶಾಲೆ, ಕನ್ಯಾಶಾಲೆ, ಅಂಬೇಡ್ಕರ್ ಪ್ರಾಥಮಿಕ ಶಾಲೆ ಮತ್ತು ನವಚೇತನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಮೂಲಕ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಮ್ಮ ಅಮರೇಗೌಡ ಗೂಗೆಬಾಳ ಕ್ಷೀರಭಾಗ್ಯ ಯೋಜನೆಯನ್ನು ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಕರಿಯಪ್ಪ ಅಡ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ, ಸದಸ್ಯ ವಹಾಬ್, ಎಪಿಎಂಸಿ ನಿರ್ದೇಶಕ ಯಮನಪ್ಪ ದಿನ್ನಿ, ಸಂಪನ್ಮೂಲ ವ್ಯಕ್ತಿ ಬಸವರಾಜ ಪಲಕನಮರಡಿ ಮತ್ತು ಆಯಾ ಶಾಲೆಗಳ ಮುಖ್ಯಗುರುಗಳು ಉಪಸ್ಥಿತರಿದ್ದರು. ಸಮೀಪದ ಹಣಿಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಬಸನಗೌಡ ಹಣಿಗಿ, ತೋರಣದಿನ್ನಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ನಾಯಕ, ಹಿರೇದಿನ್ನಿ ಶಾಲೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಮತ್ತು ಪಾಮನಕಲ್ಲೂರು ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಸ್ಸಪ್ಪ ತಳವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಹಟ್ಟಿ ಚಿನ್ನದ ಗಣಿ ರದಿ

ಸ್ಥಳೀಯ ಹಟ್ಟಿ ಚಿನ್ನದ ಗಣಿ ಕ್ಯಾಂಪಿನ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ `ಕ್ಷೀರಭಾಗ್ಯ' ಕಾರ್ಯಕ್ರಮಕ್ಕೆ ಶಾಲೆಯ ಪ್ರಭಾರ ಮುಖ್ಯಗುರುಗಳು ಕೆ. ರಂಗಪ್ಪ ಮಕ್ಕಳಿಗೆ ಹಾಲು ವಿತರಿಸುವುದರ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಈ ಯೋಜನೆ ತುಂಬಾ ಸಹಕಾರಿಯಾಗಲಿದೆ. ಅಲ್ಲದೇ ಮಕ್ಕಳ ಹಾಜರಾತಿಯು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಶಿಕ್ಷಕರಾದ ಮಾನಮ್ಮ, ಶಿವನಗೌಡ, ಪಿ. ಸೆಲ್ವಿ, ವಿಜಯಲಕ್ಷ್ಮೀ, ಕೆ. ಭವಾನಿ, ಶರಣಮ್ಮ, ರೋಜ್ ಮೇರಿ, ದಾನಮ್ಮ, ಅಡುಗೆ ಸಿಬ್ಬಂದಿ ಯಲ್ಲಮ್ಮ, ಅಕ್ಕಮ್ಮ ಇದ್ದರು.ಮಾನ್ವಿ ವರದಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಕ್ಷೀರಭಾಗ್ಯ ಯೋಜನೆಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ  ಚಾಲನೆ ನೀಡಲಾಯಿತು.

ಕಾತರಕಿ: ತಾಲ್ಲೂಕಿನ ಕಾತರಕಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಜಿ.ಹಂಪಯ್ಯ ನಾಯಕ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವಿ.ಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶಾಲೆಯ ಎಸ್‌ಡಿ ಎಂಸಿ ಅಧ್ಯಕ್ಷ ಹಾಗೂ ಸದಸ್ಯರು, ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಹಸೇನಪ್ಪ ಹಾಗೂ ನಾದಿರಾ ಅವರನ್ನು ಸನ್ಮಾನಿಸಲಾಯಿತು.ಗ್ರಾಮದ ಮುಖಂಡರಾದ ಮಹಾಲಿಂಗಪ್ಪಗೌಡ, ನರಸಿಂಹಪ್ಪ ಹೂಗಾರ, ಎ.ಬಾಲಸ್ವಾಮಿ ಕೊಡ್ಲಿ, ಶ್ರೀಶೈಲಗೌಡ, ಸುರೇಸ ಕುರ್ಡಿ, ಅಮರಣ್ಣ ಹೊಸಮನಿ, ಯಲ್ಲಪ್ಪ ಕೋಡಗರ, ಗದ್ದೆಪ್ಪ, ಅಕ್ಷರ ದಾಸೋಹ ಅಧಿಕಾರಿ ಕೊಟ್ರಪ್ಪ, ಜಲಾಲಿ ಸಾಬ್, ರಮೇಶ ತಲ್ಮಾರಿ, ಹನುಮಣ್ಣ ತಲ್ಮಾರಿ, ಶರಣಯ್ಯ ಸ್ವಾಮಿ, ಕಾಶಿನಾಥ ಅಂಗಡಿ, ಗೋವಿಂದಪ್ಪ ಹೊಸಮನಿ ಮತ್ತಿತರರು ಇದ್ದರು. ರೂಪಾ ನಿರೂಪಿಸಿದರು. ಮುಖ್ಯ ಗುರು ಹಂಪಣ್ಣ ಚೆಂಡೂರು ಸ್ವಾಗತಿಸಿದರು. ಸಿದ್ದಣ್ಣ ನಾಯಕ ವಂದಿಸಿದರು.ಕಲ್ಮಠ ಶಾಲೆ: ಪಟ್ಟಣದ ಶ್ರೀಪಂಪಾ ವಿರೂಪಾಕ್ಷೇಶ್ವರ ಕಲ್ಮಠ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಪುರಸಭೆ ಸದಸ್ಯೆ ಶ್ರೀದೇವಿ ಬಳಿಗಾರ, ಕಲ್ಮಠ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಸ್.ಎಸ್.ಪಾಟೀಲ್, ಪದವಿ ಕಾಲೇಜು ಪ್ರಾಚಾರ್ಯ ಕೆ.ವಿ.ರಾಮಕೃಷ್ಣ, ಪ್ರೌಢಶಾಲೆಯ ಮುಖ್ಯಗುರು ಪ್ರಭಯ್ಯ ಸ್ವಾಮಿ, ಪ್ರಾಥಮಿಕ ಶಾಲೆಯ ಮುಖ್ಯಗುರು ಮಂಜುನಾಥ ಕಮತರ, ಶಿಕ್ಷಣ ಸಂಯೋಜಕ ಎಚ್.ಚೆನ್ನಬಸವರಾಜ, ಬಿಆರ್‌ಪಿ ದೇವಯ್ಯ ಸ್ವಾಮಿ ಹಾಗೂ ಸಂಜೀವಪ್ಪ, ಸಿಆರ್‌ಪಿ ಲಕ್ಷ್ಮಣ ವೇದಿಕೆಯಲ್ಲಿದ್ದರು. ಹನುಮಂತರಾವ್ ಕುಲಕರ್ಣಿ ನಿರೂಪಿಸಿದರು. ಶಾಂತಸ್ವಾಮಿ ವಂದಿಸಿದರು.ಉರ್ದು ಪ್ರಾಥಮಿಕ ಶಾಲೆ: ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ ವಿರೋಧ ಪಕ್ಷದ ನಾಯಕ ಶಿವರಾಜ ಜಾನೇಕಲ್ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸೈಯದ್ ಇಕ್ಬಾಲ್ ಅಹ್ಮದ್, ಮುಖ್ಯೋಪಾಧ್ಯಾಯಿನಿ ಶಹನಾಜ್ ಬೇಗಂ, ಮಹ್ಮದ್ ಇಕ್ಬಾಲ್, ವೀರಭದ್ರಪ್ಪ, ನರಸಿಂಹಲು ಮತ್ತಿತರರು ಇದ್ದರು.ಉರ್ದು ಪ್ರೌಢ ಶಾಲೆ: ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಶಾಲೆಯ ಮುಖ್ಯ ಗುರು ಶೇಖ್ ಮಹ್ಮದ್ ರಫಿ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸೈಯದ್ ಇಕ್ಬಾಲ್ ಅಹ್ಮದ್, ಸದಸ್ಯ ಶೇಖ್ ಬಾಬಾ ಹುಸೇನ್, ರಸೂಲ್ ಖುರೇಷಿ, ಎಸ್‌ಡಿಎಂಸಿ ಉಪಾಧ್ಯಕ್ಷ ಮೆಹಬೂಬ, ಪಿಕಾರ್ಡ್ ಬ್ಯಾಂಕ್ ಸದಸ್ಯ ಸಮದಾನಿ ನಾಯ್ಕ, , ಜಮೀಲ್ ಅಹ್ಮದ್ ಮತತ್ತಿರರು ಇದ್ದರು. ಅಹ್ಮದಿ ಬೇಗಂ ನಿರೂಪಿಸಿದರು. ಕಮಲಾ ವಂದಿಸಿದರು.ಇಂದಿರಾ ನಗರ: ಪಟ್ಟಣದ ಇಂದಿರಾ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪುರಸಭೆ ಸದಸ್ಯ ಸಬ್ಜಲಿ ಸಾಬ್ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ದೇವಯ್ಯ ಸ್ವಾಮಿ, ಮೂಕಪ್ಪ ಕಟ್ಟಿಮನಿ, ಸಂಜೀವಪ್ಪ, ಶಾಲೆಯ ಮುಖ್ಯ ಗುರು ಶ್ರೀನಿವಾಸ್ ವೈ, ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್ ಇದ್ದರು. ಶರಣಮ್ಮ ನಿರೂಪಿಸಿದರು. ಶ್ರೀನಿವಾಸ ಆಚಾರಿ ಪ್ರಾರ್ಥನೆ ಗೀತೆ ಹಾಡಿದರು. ಅನುರಾಧ ವಂದಿಸಿದರು.ಆದಾಪುರಪೇಟೆ: ಪಟ್ಟಣದ ಆದಾಪುರಪೇಟೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಎಸ್‌ಡಿ ಎಂಸಿ ಅಧ್ಯಕ್ಷೆ ಗೋಪಿಕಾ ಶ್ರೀನಿವಾಸರಾವ್ ಚಾಲನೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶಿವಲಿಂಗಮ್ಮ ಕಟ್ಟಿಮನಿ, ಖಾಜಾ ಹುಸೇನ್, ಎಸ್‌ಡಿಎಂಸಿ ಉಪಾಧ್ಯಕ್ಷ ರಾಜಣ್ಣ ಸಾ ಮತ್ತಿತರರು ಇದ್ದರು. ಬಸಪ್ಪ ನಿರೂಪಿಸಿದರು. ಕೆ.ಲಕ್ಷ್ಮೀ ವಂದಿಸಿದರು.ರಾಜೀವ್ ಗಾಂಧಿ ಕಾಲೋನಿ: ಪಟ್ಟಣದ ರಾಜೀವ್ ಗಾಂಧಿ ಕಾಲೋನಿಯಲ್ಲಿ ಪುರಸಭೆ ಸದಸ್ಯ ಎಸ್.ಚಂದ್ರಶೇಖರ್ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಯಂಕಮ್ಮ ವೆಂಕೋಬ, ನಾಗರಾಜ, ಕುಬೇರಪ್ಪ, ಯುವರಾಜ ಭೋವಿ, ಡಿ.ಲಕ್ಷ್ಮಣ, ವೆಂಕಟೇಶ, ಈಶಪ್ಪ ಮತ್ತಿತರರು ಇದ್ದರು.

Post Comments (+)