ಜಿಲ್ಲೆ ವಿಭಜನೆ ಆಗಲು ಬಿಡುವುದಿಲ್ಲ: ಮಧು ಬಂಗಾರಪ್ಪ ಹೇಳಿಕೆ
ಸೊರಬ: ಕಲೆ, ಸಂಸ್ಕೃತಿಯ ತವರೂರು ಹಾಗೂ ಮಲೆನಾಡಿನ ಸಿರಿ ಹೊಂದಿರುವ ಶಿವಮೊಗ್ಗ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಆನವಟ್ಟಿ ಹೋಬಳಿಯ ಲಕ್ಕವಳ್ಳಿ ತೋಟದ ಮನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಮತ್ತು ತಾಳಗುಪ್ಪ ಹೋಬಳಿಯ ಗ್ರಾಮ ಪಂಚಾಯ್ತಿ ಮತ್ತು ಸೊರಬ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಯಾರೋ ಒಬ್ಬರ ಸ್ವಾರ್ಥಕ್ಕೆ ಜಿಲ್ಲೆಯನ್ನು ವಿಭಜನೆ ಮಾಡಲು ಹೊರಟಿರುವುದು ಎಷ್ಟು ಸಮಂಜಸ. ತಂದೆ ಎಸ್. ಬಂಗಾರಪ್ಪ ಅವರ ಕಾಲದ ರೈತ ಪರ ಹೋರಾಟವನ್ನು ಎಂದೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ರೈತರ ವಿರುದ್ಧ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ತಾವು ಹೋರಾಟದ ಹಾದಿ ಹಿಡಿಯಲು ಸಿದ್ಧರಿದ್ದೇವೆ ಎಂದು ಅವರುತಿಳಿಸಿದರು.
ಈಚೆಗೆ ತಾಲ್ಲೂಕಿನ ತಾಳಗುಪ್ಪ ಮತ್ತು ಕೆರೆಹಳ್ಳಿ ಗ್ರಾಮದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಕಾನೂನಿಗೆ ಸಂಬಂಧಿಸಿದ್ದು, ಬಗರ್ಹುಕುಂ ಸಾಗುವಳಿದಾರರಿಗೆ ಅನುಕೂಲ ಆಗುವಂತೆ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿದರೆ ಮಾತ್ರ ಜಮೀನನ್ನು ಉಳಿಸಿಕೊಳ್ಳಲು ಸಾಧ್ಯ. ಕಾನೂನು ಚೌಕಟ್ಟಿನಡಿ ಹೋರಾಟ ಮಾಡಬೇಕೆ ಹೊರತು ಯಾರೊಬ್ಬರ ಮೇಲೆ ದೌರ್ಜನ್ಯ ನಡೆಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಎಸ್. ಬಂಗಾರಪ್ಪ ಅವರಂತೆ ನಾವು ಸಹ ಅವರ ಹೋರಾಟವನ್ನು ಮುಂದುವರಿಸಲು ಬದ್ಧರಿದ್ದೇವೆ ಎಂದು ಹೇಳಿದರು.
ತಾಲ್ಲೂಕನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಶಾಸಕ ಹಾಲಪ್ಪ ಈಚೆಗೆ ಆನವಟ್ಟಿಗೆ ಬಂದು ಸಂತೆಯಲ್ಲಿ ಓಡಾಡಿ ಜನರೆದುರು ಶೋಕಿ ಮಾಡಿದ್ದಾರೆ. ಕೇವಲ ಶೋಕಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ನಾಲ್ಕು ವರ್ಷದಲ್ಲಿ ಒಮ್ಮೆಯೂ ಆನವಟ್ಟಿಯ ಸಂತೆ ನೋಡದ ಹಾಲಪ್ಪ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಈಚೆಗೆ ಸಂತೆಯಲ್ಲಿ ಓಡಾಡಿದ್ದಾರೆ. ಇದು ಅವರ ಗಿಮಿಕ್ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರ ಈ ತಂತ್ರ ಇನ್ನು ಮುಂದೆ ಫಲಿಸುವುದಿಲ್ಲ ಎಂದರು.
ಈಗಾಗಲೇ ಸರ್ಕಾರ ಘೋಷಣೆ ಮಾಡಿರುವ ರೈತರ 25 ಸಾವಿರ ಸಾಲ ಮನ್ನಾ ಮಾಡಿದರೆ ಸಾಲದು. ರಾಜ್ಯಾದ್ಯಂತ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸಾಲ ಮನ್ನಾಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಬ್ಲಾಕ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಕುಮಾರ್, ಪಿ.ಎಸ್. ಮಂಜುನಾಥ, ಶ್ರೀಪಾದ ಹೆಗಡೆ ನಿಸರಾಣಿ, ಸುರೇಶ ಒಡೆಯರ್, ಕೆ. ವೀರಪ್ಪ, ನಾಗೇಂದ್ರಪ್ಪ, ಎಂ.ಡಿ. ಶೇಖರ, ಮಧುರಾಯ್ ಶೇಟ್, ಕೆ.ಪಿ. ನಟರಾಜ್, ಸಂಜೀವ ಲಕ್ಕವಳ್ಳಿ, ಗಾಳಿಪುರ ಲೋಕೇಶ, ಜೆ. ಚಂದ್ರಶೇಖರಪ್ಪ, ಶೇಖರಮ್ಮ ಇದ್ದರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.