`ಜಿ' ಕೋಟಾ ನಿವೇಶನ ಹಂಚಿಕೆಯಲ್ಲೂ ಅವ್ಯವಹಾರ

7

`ಜಿ' ಕೋಟಾ ನಿವೇಶನ ಹಂಚಿಕೆಯಲ್ಲೂ ಅವ್ಯವಹಾರ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) `ಜಿ' ಕೋಟಾದಡಿ ಬಿಡಿ ನಿವೇಶನಗಳ ಹಂಚಿಕೆ, ಬದಲಿ ನಿವೇಶನಗಳ ಹಂಚಿಕೆ ಮತ್ತು ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.2007-2011ರ ಅವಧಿಯಲ್ಲಿ ವಿವೇಚನಾ (ಜಿ) ಕೋಟಾದಡಿ ಬಿಡಿ ನಿವೇಶನ ಹಂಚಿಕೆಯ ಅಧಿಕಾರವನ್ನು ಗೊತ್ತುಗುರಿ ಇಲ್ಲದೇ ಬಳಸಲಾಗಿದೆ. ಈ ರೀತಿ 438 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಶೇಕಡ 40ರಷ್ಟು ಮಂದಿ ಫಲಾನುಭವಿಗಳು ಮಾತ್ರ ಶಾಸಕರು, ಸಂಸದರು, ಕಲಾವಿದರು ಅಥವಾ ಕ್ರೀಡಾ ಕ್ಷೇತ್ರದ ಸಾಧಕರು. ಉಳಿದ ಶೇ 60ರಷ್ಟು ಮಂದಿ `ಇತರರು' ಎಂಬ ಹೆಸರಿನಡಿ ನಿವೇಶನ ಗಿಟ್ಟಿಸಿದ್ದಾರೆ ಎಂದು ಸಿಎಜಿ ಹೇಳಿದೆ.263 ವ್ಯಕ್ತಿಗಳಿಗೆ `ಇತರರ' ಕೋಟಾದಡಿ ಬಿಡಿ ನಿವೇಶನ ನೀಡಲಾಗಿದೆ. ಈ ಪೈಕಿ 28 ವ್ಯಕ್ತಿಗಳ ಹಿನ್ನೆಲೆಯನ್ನು ಖಚಿತಪಡಿಸುವ ಮಾಹಿತಿ ಮಾತ್ರ ಪ್ರಾಧಿಕಾರದ ಬಳಿ ಇತ್ತು. ಅವರಲ್ಲಿಯೂ 12 ಮಂದಿ ಸರ್ಕಾರಿ ನೌಕರರು ಇದ್ದರು. ಈ ಎಲ್ಲಾ ಪ್ರಕರಣಗಳಲ್ಲೂ ರಾಜ್ಯ ಸರ್ಕಾರದ ಆದೇಶದ ಅನುಸಾರ ಅಕ್ರಮ ನಡೆದಿದೆ ಎಂಬ ಅಭಿಪ್ರಾಯ ವರದಿಯಲ್ಲಿದೆ.ಕಾನೂನಿನ ಪ್ರಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮನೆ ಅಥವಾ ನಿವೇಶನ ಹೊಂದಿರುವವರಿಗೆ ಬಿಡಿಎ ನಿವೇಶನ ನೀಡುವಂತಿಲ್ಲ. ತಮ್ಮ ಬಳಿ ಮನೆ, ನಿವೇಶನ ಇದೆ ಎಂದು ತಾವಾಗಿಯೇ ಘೋಷಿಸಿಕೊಂಡ ಹತ್ತು ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬುದನ್ನು ಈ ವರದಿ ಹೊರಗೆಡವಿದೆ.

ಎಲ್ಲ ಮೂಲೆ ನಿವೇಶನಗಳು ಮತ್ತು ವಾಣಿಜ್ಯ ನಿವೇಶನಗಳನ್ನು ಹರಾಜಿನ ಮೂಲಕ ಮಾರಾಟ ಮಾಡಬೇಕೆಂಬ ನಿಯಮವಿದೆ. ಆದರೆ, 22 ವಾಣಿಜ್ಯ ನಿವೇಶನಗಳು ಮತ್ತು ನಾಲ್ಕು ಮೂಲೆ ನಿವೇಶನಗಳನ್ನು `ಜಿ' ಕೋಟಾದಡಿ ಹಂಚಿಕೆ ಮಾಡಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ 23.67 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಅಂಶ ವರದಿಯಲ್ಲಿದೆ.`ಜಿ' ಕೋಟಾದಡಿ ಬಿಡಿ ನಿವೇಶನ ಹಂಚಿಕೆ ಮಾಡದಂತೆ ಹೈಕೋರ್ಟ್ ಆದೇಶ ನೀಡಿದ ನಂತರವೂ 22 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. `ದಲಿತ ಕ್ರಿಯಾ ಸಮಿತಿ' ಎಂಬ ಸಂಘಟನೆಯ ಹೆಸರಿನಲ್ಲಿ 2004ರಲ್ಲಿ ಆಗಿನ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಸಂಘಟನೆಯ 46 ಕಾರ್ಯಕರ್ತರಿಗೆ 20/30 ಚದರ ಅಡಿ ವಿಸ್ತೀರ್ಣದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಬಿಡಿಎಗೆ ರೂ 11.08 ಕೋಟಿ ನಷ್ಟ ಆಗಿದೆ ಎಂದು ಸಿಎಜಿ ತಿಳಿಸಿದೆ.ಬದಲಿಯಲ್ಲೂ `ಗೋಲ್‌ಮಾಲ್':

ಯಾವುದೇ ಫಲಾನುಭವಿಗೆ ಬದಲಿ ನಿವೇಶನ ಹಂಚಿಕೆ ಮಾಡುವಾಗ ಆತನಿಗೆ ನಿವೇಶನ ಮಂಜೂರು ಮಾಡಿದ ಬಡಾವಣೆಯಲ್ಲೇ ಅಥವಾ ಅದರ ನಂತರ ನಿರ್ಮಿಸಿದ ಬಡಾವಣೆಗಳಲ್ಲಿ ನಿವೇಶನ ಮಂಜೂರು ಮಾಡಬೇಕೆಂಬ ನಿಯಮವಿದೆ. ಆದರೆ, 34 ಪ್ರಕರಣಳಲ್ಲಿ ಹಿಂದೆಯೇ ನಿರ್ಮಾಣವಾಗಿ, ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ್ದ ಬಡಾವಣೆಗಳಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿರುವ ಅಕ್ರಮ ಲೆಕ್ಕ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry