ಜಿ-20 ಏಳನೇ ಶೃಂಗಸಭೆ: ಆರ್ಥಿಕ ಬಿಕ್ಕಟ್ಟು, ಭ್ರಷ್ಟಾಚಾರ ವಿರುದ್ಧ ಸಮರ

7

ಜಿ-20 ಏಳನೇ ಶೃಂಗಸಭೆ: ಆರ್ಥಿಕ ಬಿಕ್ಕಟ್ಟು, ಭ್ರಷ್ಟಾಚಾರ ವಿರುದ್ಧ ಸಮರ

Published:
Updated:
ಜಿ-20 ಏಳನೇ ಶೃಂಗಸಭೆ: ಆರ್ಥಿಕ ಬಿಕ್ಕಟ್ಟು, ಭ್ರಷ್ಟಾಚಾರ ವಿರುದ್ಧ ಸಮರ

ಲಾಸ್ ಕಾಬೋಸ್ (ಪಿಟಿಐ): ಜಾಗತಿಕ ಆರ್ಥಿಕ ಬಿಕ್ಕಟ್ಟು ನಿವಾರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ನಿರ್ಣಯವನ್ನು ಇಲ್ಲಿ ಬುಧವಾರ ಮುಕ್ತಾಯಗೊಂಡ `ಜಿ-20~ ಏಳನೇ ಶೃಂಗಸಭೆ ಕೈಗೊಂಡಿದೆ.ಆರ್ಥಿಕ ಹಿನ್ನಡೆಯು ಮತ್ತಷ್ಟು ಘಾಸಿ ಉಂಟುಮಾಡುವ ಸಾಧ್ಯತೆ ಇದೆ. ಆದರೆ, ಇದರಿಂದ ಹೊರಬರಲು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ಸ್ಥಾಪಿಸಲು ಉದ್ದೇಶಿಸಿರುವ 450 ಶತಕೋಟಿ ಡಾಲರ್ ಸಂಕಷ್ಟ ನಿಧಿ ನೆರವಿಗೆ ಬರಲಿದೆ ಎಂದು `ಜಿ-20~ ಸದಸ್ಯ ರಾಷ್ಟ್ರಗಳ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.`ಜಾಗತಿಕ ಆರ್ಥಿಕತೆ ಸುಸ್ಥಿರವಾಗಿರುವಂತೆ ನೋಡಿಕೊಳ್ಳಲು `ಜಿ-20~ ಮತ್ತು ಅಂತರರಾಷ್ಟ್ರೀಯ ಸಮುದಾಯ ಬದ್ಧವಾಗಿದೆ. ಈ ಉದ್ದೇಶದಿಂದಲೇ ಸಂಕಷ್ಟ ನಿಧಿಯನ್ನು ಸ್ಥಾಪಿಸಲು ಮುಂದಾಗಿದೆ. ಜೊತೆಗೆ ಬಿಕ್ಕಟ್ಟು ನಿವಾರಣೆ ಮತ್ತು ಆರ್ಥಿಕ ಪುನಶ್ಚೇತನದ ವಿಚಾರದಲ್ಲಿ ಐಎಂಎಫ್ ವಿಸ್ತೃತ ಪಾತ್ರ ನಿರ್ವಹಿಸಲಿದೆ~ ಎಂದು `ಜಿ- 20~ ಶೃಂಗಸಭೆಯು ಕೈಗೊಂಡ ನಿರ್ಣಯದಲ್ಲಿ ಹೇಳಲಾಗಿದೆ.

`ಆರ್ಥಿಕ ಕುಸಿತವು ಜನರ ನಿತ್ಯದ ಬದುಕಿನ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದರ ಛಾಯೆ ಉದ್ಯೋಗ, ವ್ಯಾಪಾರ, ಅಭಿವೃದ್ಧಿ ಮತ್ತು ಪರಿಸರದ ಮೇಲೂ ಆವರಿಸಿದೆ. ವಿಶ್ವ ಹಣಕಾಸಿನ ಮಾರುಕಟ್ಟೆ ಎದುರಿಸುತ್ತಿರುವ ತಲ್ಲಣಗಳನ್ನು ನಿಭಾಯಿಸಲು ಮತ್ತು ವ್ಯಾಪಾರ- ಅಭಿವೃದ್ಧಿ- ಉದ್ಯೋಗಾವಕಾಶ ವೃದ್ಧಿಸಲು ಅಂತರರಾಷ್ಟ್ರೀಯ ಸಮುದಾಯವು ಒಗ್ಗಟ್ಟಿನಿಂದ ಸಮಗ್ರವಾಗಿ ಶ್ರಮಿಸಲಿದೆ~ ಎಂದೂ ನಿರ್ಣಯ ಕೈಗೊಳ್ಳಲಾಗಿದೆ.ವಿಶ್ವವ್ಯಾಪಿ ವ್ಯಾಪಿಸಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಈ ಸಭೆಯೂ ಸೇರಿದಂತೆ ಜಾಗತಿಕ ಮಟ್ಟದ ವಿವಿಧ ವೇದಿಕೆಗಳಲ್ಲಿ ಬಲವಾಗಿ ಪ್ರತಿಪಾದಿಸುತ್ತಿರುವ ಭಾರತದ ಆಶಯಕ್ಕೆ ಏಳನೇ ಶೃಂಗಸಭೆ ಸಕಾರಾತ್ಮಕವಾಗಿ ಸ್ಪಂದಿಸಿದೆ.`ಜಿ-20~ ಸದಸ್ಯ ರಾಷ್ಟ್ರಗಳು ಸೇರಿದಂತೆ ಇನ್ನಿತರ ಅಂತರರಾಷ್ಟ್ರೀಯ ಸಮುದಾಯಗಳು ಭ್ರಷ್ಟಾಚಾರ ನಿವಾರಣೆಗೆ ಕ್ರಿಯಾತ್ಮಕ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿದೆ.
ಭಾರತದ ಪ್ರಸ್ತಾವಕ್ಕೆ ಸಮ್ಮತಿ

ಭಾರತ ಪ್ರಸ್ತಾಪಿಸಿದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ `ಜಿ-20~ ಶೃಂಗಸಭೆ ಸಮ್ಮತಿಸಿದೆ.

`ಪ್ರಗತಿಗೆ ಪೂರಕವಾದ ವಾತಾವರಣ ಸೃಷ್ಟಿಸಲು ಅಗತ್ಯವಾದ ನೆರವು ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆಗೆ ಆದ್ಯತೆ ಮತ್ತು ಉತ್ತೇಜನ ನೀಡಲು ಈ ಸಭೆ ಒಪ್ಪಿದೆ~ ಎಂದು `ಜಿ- 20~ ಶೃಂಗಸಭೆಯಲ್ಲಿ ಕೈಗೊಳ್ಳಲಾದ `ಲಾಸ್ ಕಾಬೋಸ್~ ನಿರ್ಣಯಗಳ 14 ಪುಟದ ಹೇಳಿಕೆ ತಿಳಿಸಿದೆ.ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ಮನಮೋಹನ್ ಸಿಂಗ್, `ಈ ಸಭೆಯ ಬಗ್ಗೆ ಒಟ್ಟಾರೆ ಹೇಳುವುದಾದರೆ ಅಭಿವೃದ್ಧಿಯೇ ಪ್ರಧಾನ, ಈ ನಿಟ್ಟಿನಲ್ಲಿ ರಾಷ್ಟ್ರದ ನೀತಿ- ನಿಲುವುಗಳು ಇರಬೇಕು ಎಂಬ ಆಶಯ ಎಲ್ಲ ರಾಷ್ಟ್ರಗಳಿಂದ ವ್ಯಕ್ತವಾಯಿತು. ಜೊತೆಗೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಯುರೊ ವಲಯದ ನೆರವಿಗೆ ತುರ್ತಾಗಿ ಧಾವಿಸಬೇಕು ಎಂಬ ನಿಲುವು ಎಲ್ಲ ರಾಷ್ಟ್ರಗಳ ಮುಖಂಡರಲ್ಲೂ ಇತ್ತು ಎಂಬುದು ನನ್ನ ಗ್ರಹಿಕೆ~ ಎಂದರು.ಮುಕ್ತ ಮಾರುಕಟ್ಟೆ ಕಲ್ಪಿಸಲು ಮನವಿ: ಜಾಗತಿಕ ಮಟ್ಟದ ಬೇಡಿಕೆ ಮತ್ತು ಸುಸ್ಥಿರವಾದ ಅಭಿವೃದ್ಧಿಯನ್ನು ಸಾಧಿಸಬೇಕಿದ್ದರೆ ದೇಶಿಯ ಮಾರುಕಟ್ಟೆಯನ್ನು ಮುಕ್ತವಾಗಿ ಇರಿಸಿ, ವಿದೇಶಿ ಸರಕುಗಳ ಮೇಲಿನ ಆಮದು ಸುಂಕದ ನೀತಿಯನ್ನು ನಿಯಂತ್ರಿಸಿ ಎಂದು `ಜಿ- 20~ ಶೃಂಗಸಭೆ ತನ್ನ ಸದಸ್ಯ ರಾಷ್ಟ್ರಗಳೂ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯವನ್ನು ವಿನಂತಿಸಿಕೊಂಡಿದೆ.ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಗಾಗಿ ಶೃಂಗಸಭೆಯು ಅಂಗೀಕರಿಸಿರುವ ಕ್ರಿಯಾಯೋಜನೆಯಲ್ಲಿ ಈ ಮನವಿ ಮಾಡಿಕೊಳ್ಳಲಾಗಿದೆ.`ಸುಸ್ಥಿರ, ಬಲಿಷ್ಠ ಮತ್ತು ಸಮತೋಲನದ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಸಭೆಯು ಜಾಗತಿಕ ಮಟ್ಟದಲ್ಲಿ ಪರಸ್ಪರ ಸಹಕಾರದ ಆರ್ಥಿಕ ನೀತಿಯನ್ನು ಅಂಗೀಕರಿಸಲು ಒಪ್ಪಿದೆ~ ಎಂದು ಶೃಂಗಸಭೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry