ಜಿ-20 ನಿರ್ಣಯಕ್ಕೆ ಚೀನಾ ಅಸಮಾಧಾನ

7

ಜಿ-20 ನಿರ್ಣಯಕ್ಕೆ ಚೀನಾ ಅಸಮಾಧಾನ

Published:
Updated:

ಪ್ಯಾರಿಸ್ (ಪಿಟಿಐ):  ಜಾಗತಿಕ ಆರ್ಥಿಕ ಅಸಮತೋಲನ  ಸರಿಪಡಿಸಲು ‘ಜಿ-20’ ರಾಷ್ಟ್ರಗಳ ವಾಣಿಜ್ಯ ಸಚಿವರು  ಕೈಗೊಂಡ ನಿರ್ಣಯಕ್ಕೆ ಚೀನಾ  ಅಸಮ್ಮತಿ ವ್ಯಕ್ತಪಡಿಸಿದೆ.ವಿದೇಶಿ ವಿನಿಮಯ ಮೀಸಲು ಮತ್ತು ವಿತ್ತೀಯ ಕೊರತೆ ಸರಿದೂಗಿಸಲು ಪರಸ್ಪರ ಹೊಂದಾಣಿಕೆ ಸೂತ್ರಗಳ ಕುರಿತ ಪ್ರಸ್ತಾವನ್ನು ‘ಜಿ-20’ ವಾಣಿಜ್ಯ ಸಚಿವರುಗಳ ಸಭೆ ಅಂಗೀಕರಿಸಿತ್ತು. ಆದರೆ ಅತಿ ಹೆಚ್ಚು ವಿದೇಶಿ ವಿನಿಮಯ ಮೀಸಲು ಹೊಂದಿರುವ ಚೀನಾ ಈ ಪ್ರಸ್ತಾವ ವಿರೋಧಿಸಿದೆ.‘ಭಾನುವಾರ ಕೈಗೊಳ್ಳಲಾದ ನಿರ್ಣಯದಲ್ಲಿ ಹಲವು ವ್ಯತ್ಯಾಸಗಳಿವೆ. ಆರ್ಥಿಕ ಅಸಮತೋಲನ  ಸರಿಪಡಿಸುವುದು ಸುಲಭದ ವಿಷಯವಲ್ಲ. ಎಲ್ಲ ದೇಶಗಳ ಹಿತಾಸಕ್ತಿ  ಗಮನಿಸಬೇಕಾಗುತ್ತದೆ ಎಂದು ಪ್ರಣವ್ ಹೇಳಿದ್ದಾರೆ.  ‘ಏಪ್ರಿಲ್ ಅಂತ್ಯದ ವೇಳೆಗೆ ರಾಜಿ ಸೂತ್ರದ ಮೂಲಕ  ಆರ್ಥಿಕ ಅಸಮತೋಲನ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಫ್ರಾನ್ಸಿನ ವಾಣಿಜ್ಯ ಸಚಿವೆ ಕ್ರಿಸ್ಟೀನ್ ಲಗಾರ್ಡೆ ಹೇಳಿದ್ದಾರೆ.ಜಾಗತಿಕ ವಾಣಿಜ್ಯ ಅಸಮತೋಲನ ತಗ್ಗಿಸಲು ಈಗಿರುವ ದೋಷಗಳನ್ನು ಸರಿಪಡಿಸಲು ಕೈಗೊಂಡಿರುವ ನಿರ್ಣಯಗಳಲ್ಲಿ ಕೆಲವನ್ನು ಚೀನಾ ವಿರೋಧಿಸಿದೆ. 2.8 ಸಾವಿರ ಶತಕೋಟಿ ಡಾಲರ್ ಗಳಷ್ಟು (ಅಂದಾಜು  ರೂ. 13,800 ಕೋಟಿಗಳಷ್ಟು) ವಿದೇಶಿ ವಿನಿಮಯ ಮೀಸಲನ್ನು ಚೀನಾ ಹೊಂದಿದೆ. ಆಹಾರ ಹಣದುಬ್ಬರ ತಡೆಯಲು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ  ದೀರ್ಘಕಾಲೀನ ಕೃಷಿ ಹೂಡಿಕೆಗೆ ಹೆಚ್ಚಿನ ಗಮನಹರಿಸಬೇಕು ಎನ್ನುವುದು ಈ  ಸಲದ  ಪ್ರಮುಖ ನಿರ್ಣಯವಾಗಿದೆ.  ವಿದೇಶಿ ವಿನಿಮಯದ ಹರಿವನ್ನು ನಿಯಂತ್ರಿಸಲು ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು (ಐಎಂಎಸ್) ರಚಿಸುವ ಕುರಿತೂ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ. 

ತೆರಿಗೆ ಮಾಹಿತಿ ವಿನಿಮಯಕ್ಕೆ ಸಹಿ: ಕಪ್ಪು ಹಣದ ಹರಿವು ಮತ್ತು ತೆರಿಗೆ ವಂಚನೆ  ತಡೆಗಟ್ಟಲು  ವಿವಿಧ ರಾಷ್ಟ್ರಗಳ ನಡುವೆ  500ಕ್ಕೂ ಹೆಚ್ಚು ತೆರಿಗೆ ಮಾಹಿತಿ ವಿನಿಮಯ ಒಪ್ಪಂದಕ್ಕೆ (ಟಿಐಇಎ) ವಾಣಿಜ್ಯ ಸಚಿವರುಗಳ ಸಭೆಯಲ್ಲಿ ಸಹಿ ಹಾಕಲಾಯಿತು ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.‘ಬ್ಯಾಂಕುಗಳ ಮೂಲಕ ನಡೆಯುವ ಕಪ್ಪು ಹಣದ ಹರಿವಿನ ಮೇಲೆ ನಿಗಾ ಇರಿಸಲು ಇಂತಹ ಒಪ್ಪಂದ ಅಗತ್ಯವಾಗಿದೆ. ಭಾರತ ಇಂತಹ 13 ಒಪ್ಪಂದಗಳಿಗೆ ಸಹಿ ಹಾಕಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry