ಜಿ-8 ರಾಷ್ಟ್ರಗಳ ನಾಯಕರ ಶೃಂಗಸಭೆ

7

ಜಿ-8 ರಾಷ್ಟ್ರಗಳ ನಾಯಕರ ಶೃಂಗಸಭೆ

Published:
Updated:

ಕ್ಯಾಂಪ್ ಡೇವಿಡ್, ಅಮೆರಿಕ (ಪಿಟಿಐ): ಸಾಲಬಾಧೆಯಲ್ಲಿರುವ ಗ್ರೀಸ್ ಸೇರಿದಂತೆ `ಪ್ರಬಲ ಮತ್ತು ಏಕತೆಯ~ ಐರೋಪ್ಯ ವಲಯಕ್ಕಾಗಿ ಕರೆ ನೀಡಿರುವ ಪ್ರಭಾವಿ ಜಿ-8 ರಾಷ್ಟ್ರಗಳ ನಾಯಕರು, ಜಾಗತಿಕ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಮೂಲಕ ತಮ್ಮ ಹಣಕಾಸು ಪರಿಸ್ಥಿತಿಯನ್ನು ಸುಧಾರಣೆಗೊಳಿಸಲು ಹಾಗೂ ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಪ್ರಥಮ ಆದ್ಯತೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.ಇಲ್ಲಿ ಶುಕ್ರವಾರ ಮತ್ತು ಶನಿವಾರ ನಡೆದ ಎರಡು ದಿನಗಳ ಶೃಂಗಸಭೆಯ ಕೊನೆಯಲ್ಲಿ ಜಿ-8 ಗುಂಪಿನ ಎಂಟು ಪ್ರಮುಖ ಆರ್ಥಿಕಶಕ್ತಿಯ ರಾಷ್ಟ್ರಗಳಾದ ಅಮೆರಿಕ, ಜಪಾನ್, ಬ್ರಿಟನ್, ಜರ್ಮನಿ, ಫ್ರಾನ್ಸ್, ಇಟಲಿ, ಕೆನಡಾ ಹಾಗೂ ರಷ್ಯಾದ ನಾಯಕರು, ತಮ್ಮ ಪ್ರಥಮ ಆದ್ಯತೆಯನ್ನು ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ನೀಡಲು ಒಪ್ಪಿದರು.ಆರ್ಥಿಕ ಮತ್ತು ರಚನಾತ್ಮಕ ಸುಧಾರಣೆಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಮತ್ತು ಉದ್ಯೋಗಗಳ ಸೃಷ್ಟಿಯನ್ನು  ಹೆಚ್ಚಿಸಲು  ಜಿ-8 ನಾಯಕ ರಲ್ಲಿ ಒಮ್ಮತಾಭಿ ಪ್ರಾಯ  ಮೂಡಿತು. ಪ್ರಗತಿಯನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಒಪ್ಪಿದ್ದಾರೆ ಎಂದು ಶೃಂಗಸಭೆ ಆಯೋಜಿಸಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸುದ್ದಿಗಾರರಿಗೆ ತಿಳಿಸಿದರು.ಭವಿಷ್ಯದಲ್ಲಿ ತಮ್ಮ ಆರ್ಥಿಕತೆಯನ್ನು ಸ್ಥಿರಗೊಳಿಸಲು ಮತ್ತು ಬಲಪಡಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ಧಿ ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಬದ್ಧವಾಗುವ ಬಗ್ಗೆ ಜಿ-8 ನಾಯಕರು ಚರ್ಚಿಸಿರುವುದಾಗಿ ಅವರು ಹೇಳಿದರು.ಇದರ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿರುವ ಐರೋಪ್ಯ ವಲಯದ ಪುನಶ್ಚೇತನದ ಕುರಿತು ಕೂಡ ಜಿ-8 ನಾಯಕರು ಸಮಾಲೋಚಿಸಿರುವುದಾಗಿಯೂ ವಿವರಿಸಿದರು.ಇರಾನ್ ಮೇಲೆ ಜಿ-8 ಒತ್ತಡ: ಅಣ್ವಸ್ತ್ರ ಕಾರ್ಯಕ್ರಮಕ್ಕೆ ಅಂಟಿಕೊಂಡಿರುವ ಇರಾನ್ ಮೇಲೆ ಒತ್ತಡತಂತ್ರ ಹೇರಲು ಮುಂದಾಗಿರುವ ಜಿ-8 ರಾಷ್ಟ್ರಗಳ ನಾಯಕರು, ಆ ದೇಶದ ಮೇಲೆ ದಿಗ್ಬಂಧನ ವಿಧಿಸಿರುವುದರ ನಡುವೆಯೂ ಕಚ್ಚಾ ಮಾರುಕಟ್ಟೆಗೆ `ಪೂರ್ಣವಾಗಿ ಮತ್ತು ಸಕಾಲಿಕವಾಗಿ~ ತೈಲ ಪೂರೈಕೆ ಮಾಡುವ ಶಪಥ ಮಾಡಿದ್ದಾರೆ.ಇದರೊಂದಿಗೆ ಸಿರಿಯಾಕ್ಕೆ ಸಂಬಂಧಿಸಿದ ಕೋಫಿ ಅನ್ನಾನ್ ಅವರ ಪರಿಹಾರ ಪ್ರಸ್ತಾವನೆ, ಉತ್ತರ ಕೊರಿಯಾದ ಅಣ್ವಸ್ತ್ರ ಕ್ಷಿಪಣಿ ಕಾರ್ಯಕ್ರಮ ವಿರುದ್ಧ ಎಚ್ಚರಿಕೆ, ಆಫ್ಘಾನಿಸ್ತಾನ ಬದಲಾವಣೆಯಲ್ಲಿ ಆರ್ಥಿಕ ಪರಿಣಾಮ ತಡೆಗೆ ಕ್ರಮ ಮತ್ತಿತರ ವಿಷಯಗಳ ಕುರಿತು ಜಿ-8 ಶೃಂಗಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 

 ನ್ಯಾಟೊ ಶೃಂಗಸಭೆ: ಆಫ್ಘನ್ ಭವಿಷ್ಯ ನಿರ್ಧಾರ

ವಾಷಿಂಗ್ಟನ್ (ಪಿಟಿಐ): ಷಿಕಾಗೊದ ನ್ಯಾಟೊ ಶೃಂಗಸಭೆಯಲ್ಲಿ ಮುಂಬರುವ ವರ್ಷಗಳಲ್ಲಿ ಆಫ್ಘಾನಿಸ್ತಾನದಿಂದ ಭಯೋತ್ಪಾದಕರನ್ನು ಮೂಲೋತ್ಪಾಟನೆ ಮಾಡಲು ನೀಲನಕ್ಷೆ ಸಿದ್ಧಪಡಿಸಲಾಗುವುದು.ಆ ದೇಶದಲ್ಲಿ ರಾಜಕೀಯ ಸ್ಥಿರತೆ ಹೇಗೆ ಸ್ಥಾಪಿಸಬೇಕು, ಆ ದೇಶವನ್ನು ಆರ್ಥಿಕ ಅಭಿವೃದ್ಧಿಯ ಪಥದೆಡೆ ಹೇಗೆ ಕೊಂಡೊಯ್ಯಬೇಕು ಎಂಬುದಷ್ಟೇ ಅಲ್ಲ. ಆ ದೇಶ ಭವಿಷ್ಯದಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗದಂತೆ ನೋಡಿಕೊಳ್ಳಲು ಸಹ ಯೋಜನೆ ಸಿದ್ಧಪಡಿಸಲಾಗುವುದು.

 

ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯ ಯಾವ ಪಾತ್ರ ವಹಿಸಬೇಕು ಎಂಬ ಕುರಿತು ಚರ್ಚಿಸಲಾಗುವುದು ಎಂದು ನ್ಯಾಟೊ ಮಹಾ ಕಾರ್ಯದರ್ಶಿ ಆಂಡರ್ಸ್‌ ಫೊಗ್ ರಾಸ್‌ಮುಸ್ಸೇನ್ ಹೇಳಿದ್ದಾರೆ. ಈ ಶೃಂಗಸಭೆಯಲ್ಲಿ 60ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿವೆ.ಸಭೆ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ ಯುವ ಸಮಾವೇಶದಲ್ಲಿ ಮಾತನಾಡಿದ ರಾಸ್‌ಮುಸ್ಸೇನ್, ಮುಂದಿನ ಎರಡು ದಿನಗಳ ಕಾಲ ನಾವು ಆಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಚರ್ಚಿಸಲಿದ್ದೇವೆ. ಆ ದೇಶದ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸುತ್ತೇವೆ. ಅದು ಉಗ್ರರ ಅಡಗುತಾಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry