ಜೀತದಾಳುಗಳ ಪುನರ್ವಸತಿಗೆ ಆಗ್ರಹ

7

ಜೀತದಾಳುಗಳ ಪುನರ್ವಸತಿಗೆ ಆಗ್ರಹ

Published:
Updated:

ತುಮಕೂರು: ಜೀತದಾಳುಗಳ ಬಿಡುಗಡೆ ಮತ್ತು ಪುನರ್ವಸತಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಸಾಂಕೇತಿಕ ಧರಣಿ ನಡೆಯಿತು.ನಗರದಲ್ಲಿ ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಜಿಲ್ಲಾ ಶಾಖೆ, ಕೆ.ನಾಗರಾಜ್ ನೇತೃತ್ವದ ಜೀವಿಕ-ಜೀತ ವಿಮುಕ್ತಿ ಕರ್ನಾಟಕ, ಎನ್‌ಇಎಸ್‌ಎ (ನ್ಯೂ ಎನ್ಟಿಟಿ ಫಾರ್ ಸೋಷಿಯಲ್ ಆಕ್ಷನ್ ಬೆಂಗಳೂರು) ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಯಿತು. ರಾಜ್ಯದಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ. ಜೀತ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.2006-07ರಲ್ಲಿ ಪಾವಗಡ ತಾಲ್ಲೂಕಿನಲ್ಲಿ ತಹಶೀಲ್ದಾರ್ ಗುರುತಿಸಿರುವ 401 ಮಂದಿ ಜೀತದಾಳುಗಳಿಗೆ ಕೂಡಲೇ ಗುರುತಿನ ಪತ್ರ ನೀಡಿ, ಪುನರ್ವಸತಿ ಕಲ್ಪಿಸಬೇಕು; 2000-01ರಲ್ಲಿ ಬಿಡುಗಡೆಗೊಳಿಸಿರುವ ಜೀತ ವಿಮುಕ್ತರಿಗೆ ಸಮಗ್ರ ಪುನರ್ವಸತಿ ಕಲ್ಪಿಸಬೇಕು; ಎಸ್‌ಜೆಎಸ್‌ವೈ ಯೋಜನೆಯಡಿ ಮನೆಗಳನ್ನು ಕಟ್ಟಿಸಿಕೊಡಬೇಕು;ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಜೀತವಿಮುಕ್ತರಿಗೆ ತಲಾ ಎರಡು ಎಕರೆ ಭೂಮಿ ಕೊಡಬೇಕು; ಜೀತ ವಿಮುಕ್ತ ಕುಟುಂಬದ ಮಹಿಳಾ ಸಂಘಗಳಿಗೆ ಸುತ್ತುನಿಧಿ ಮತ್ತು ಸಾಲ ಸೌಲಭ್ಯ ಮಂಜೂರು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿನಿರತರು ಆಗ್ರಹಿಸಿದರು.ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗ, ರಾಜ್ಯಪಾಲರು, ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು, ವಿವಿಧ ಸಂಘಟನೆ ಮುಖಂಡರು, ಬುದ್ದಿಜೀವಿಗಳು, ಕೃಷಿ ಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry