`ಜೀತದಾಳು ಆಗದೆ ಪಕ್ಷ ಬಿಟ್ಟೆ'

7

`ಜೀತದಾಳು ಆಗದೆ ಪಕ್ಷ ಬಿಟ್ಟೆ'

Published:
Updated:

ಬೆಂಗಳೂರು:  `ಸ್ವಸಾಮರ್ಥ್ಯದ ಮೇಲೆ ನಾನು ಎತ್ತರಕ್ಕೆ ಬೆಳೆಯುವುದನ್ನು ಬಿಜೆಪಿ ವರಿಷ್ಠರು ಸಹಿಸಲಿಲ್ಲ. ಮುಕ್ತವಾಗಿ ಕೆಲಸ ಮಾಡಲು, ಕಾರ್ಯಕ್ರಮಗಳನ್ನು ರೂಪಿಸಲು ಅವಕಾಶವನ್ನೇ ನೀಡಲಿಲ್ಲ. ಉಸಿರುಕಟ್ಟುವ ವಾತಾವರಣವಿತ್ತು. ಜೀತದಾಳಿನ ಹಾಗೆ ಕೆಲಸ ಮಾಡಬೇಕು ಎಂದು ಹೈಕಮಾಂಡ್ ಬಯಸಿತು. ಇದನ್ನು ಸಹಿಸದೆ ಪಕ್ಷ ತೊರೆದಿದ್ದೇನೆ.'-ಇದು, ತಾವೇ ಕಟ್ಟಿ ಬೆಳೆಸಿದ ಬಿಜೆಪಿಯನ್ನು ತೊರೆದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ಕಾರಣ.

ಹಾವೇರಿಯಲ್ಲಿ ಭಾನುವಾರ ನಡೆಯುವ ಕೆಜೆಪಿ ಸಮಾವೇಶದಲ್ಲಿ ಆ ಪಕ್ಷದ ಸಾರಥ್ಯ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ತಮ್ಮ 40 ವರ್ಷಗಳ ರಾಜಕೀಯ ಅನುಭವವನ್ನು ಮೆಲುಕು ಹಾಕಿದರು.`ಅಲ್ಪಸಂಖ್ಯಾತರಿಗೆ, ಪರಿಶಿಷ್ಟಜಾತಿ/ಪಂಗಡದವರಿಗೆ ಬಿಜೆಪಿಯಲ್ಲಿ ಹೆಚ್ಚಿನ ಸ್ಥಾನಮಾನ ನೀಡಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ಆದರೆ, ಹೈಕಮಾಂಡ್ ಹಸ್ತಕ್ಷೇಪದಿಂದಾಗಿ ಆ ವರ್ಗದವರಿಗೆ ಹೆಚ್ಚಿನ ಒತ್ತು ಸಿಗಲಿಲ್ಲ. ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕಾಲೆಳೆಯುವ ಪ್ರವೃತ್ತಿ ಶುರುವಾಯಿತು. ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಿದರು. ಇದನ್ನು ಸಹಿಸದೆ ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಂಡೆ' ಎಂದು ವಿವರಿಸಿದರು.`ಜನಸಂಘದ ಕಾಲದಿಂದಲೂ ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿ ಏಳಿಗೆಗೆ ಹಗಲಿರುಳು ಶ್ರಮಿಸಿದೆ. ಪುರಸಭೆಯಿಂದ ರಾಜ್ಯಮಟ್ಟದವರೆಗೆ ವಿವಿಧ ಸ್ಥಾನಮಾನ, ಹುದ್ದೆಗಳನ್ನು ಅಲಂಕರಿಸಿ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೆ. ಆದರೆ, ನನ್ನ ಏಳಿಗೆ  ಸಹಿಸದ ಪಕ್ಷದ ವರಿಷ್ಠರು, ರಾಜ್ಯ ಘಟಕದ ಮುಖಂಡರೇ ಬೆನ್ನಿಗೆ ಚೂರಿ ಹಾಕಿದರು. ಬಲಿಪಶು ಮಾಡಿದರು' ಎಂದು ಅವರು ಬೇಸರ ವ್ಯಕ್ತಪಡಿಸಿದರು.ಸಿಬಿಐ ಬಲೆಯಿಂದ ಪಾರಾಗಲು ಕಾಂಗ್ರೆಸ್‌ನ ಅಣತಿಯಂತೆ ಕೆಜೆಪಿ ಸ್ಥಾಪಿಸಿದ್ದೀರಿ ಎಂಬ ಆರೋಪ ನಿಜವೇ?

-ಈಗಾಗಲೇ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ನ್ಯಾಯಾಲಯದಲ್ಲಿ ಆರೋಪ ಮುಕ್ತನಾಗುವ ವಿಶ್ವಾಸವಿದೆ. ಇದಕ್ಕೆ ಯಾರ ಸಹಕಾರವೂ ಬೇಕಾಗಿಲ್ಲ.ನಿಮ್ಮ ಆಪ್ತರೊಬ್ಬರು ಕಾಂಗ್ರೆಸ್ ನೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆಯಲ್ಲಾ?

-ನಮಗೆ ಕಾಂಗ್ರೆಸ್‌ನ ಬೆಂಬಲ ಬೇಕಾಗಿಲ್ಲ. ಯಾರೊಂದಿಗೂ  ಮಾತುಕತೆ ನಡೆಸಿಲ್ಲ.ಬೇರೆ ಪಕ್ಷಗಳೊಂದಿಗೆ ಕೆಜೆಪಿ ಚುನಾವಣಾ ಹೊಂದಾಣಿಕೆ  ಮಾಡಿಕೊಳ್ಳಲಿದೆಯೇ?

-ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಸ್ವತಂತ್ರವಾಗಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧೆ ಮಾಡಲಿದೆ. 2008ರಲ್ಲಿ ಶೇ 33ರಷ್ಟು ಇದ್ದ ಬಿಜೆಪಿಯ ಮತಗಳಿಕೆ ಪ್ರಮಾಣವನ್ನು 2009ರ ಲೋಕಸಭಾ ಚುನಾವಣೆಯಲ್ಲಿ ಶೇ 44ಕ್ಕೆ ತೆಗೆದುಕೊಂಡು ಹೋದೆ. ಈ ಬಾರಿ ಪೂರ್ಣ ಬಹುಮತದೊಂದಿಗೆ ಕೆಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ.ಕೆಜೆಪಿಗೆ ನಿರೀಕ್ಷಿತ ಮಟ್ಟದಲ್ಲಿ ಜನಬೆಂಬಲ ಸಿಗದೆ ಇದ್ದರೆ, ಚುನಾವಣೆ ನಂತರ ಬಿಜೆಪಿಗೆ ವಾಪಸ್ ಬರುತ್ತೀರಾ?

-`ಈ ಜನ್ಮದಲ್ಲಿ ಸಾಧ್ಯವಿಲ್ಲ. ಬಿಜೆಪಿಗೆ ಹಿಂತಿರುಗುವ ಪ್ರಶ್ನೆಯೇ ಇಲ್ಲ. ಅಂತಹ ಸಂದರ್ಭ ಬಂದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ನನ್ನ ಜೀವನದಲ್ಲಿ ರಾಜಕೀಯ ಲೆಕ್ಕಾಚಾರಗಳು ಎಂದೂ ತಪ್ಪಾಗಿಲ್ಲ. ವಿರೋಧಿಗಳು ಏನೇ ಅಪಪ್ರಚಾರ ನಡೆಸಿದರೂ ಜನರ ಒಲವು ನನ್ನ ಪರವಾಗಿ ಇದೆ. ಅಧಿಕಾರದಲ್ಲಿ ಇದ್ದಾಗ ಮಾಡಿರುವ ಸಾಧನೆ, ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ.' ಎಲ್ಲ ಲೆಕ್ಕಾಚಾರಗಳನ್ನು ಮೀರಿ, ಆಶ್ಚರ್ಯಕರ ರೀತಿಯಲ್ಲಿ ಕೆಜೆಪಿ ಜಯಭೇರಿ ಬಾರಿಸಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಪ್ರಾದೇಶಿಕ ಪಕ್ಷಗಳು ಅಭಿವೃದ್ಧಿಗೆ ಮಾರಕ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮಾತ್ರ ರಾಜ್ಯದಲ್ಲಿ ಉಳಿಯಬೇಕು ಎಂದು  ಹೇಳಿದ್ದ ನೀವೇ ಈಗ ಪ್ರಾದೇಶಿಕ ಪಕ್ಷ ಕಟ್ಟಿದ್ದೀರಲ್ಲಾ?

-ಹಾಗೆ ಹೇಳಿದ್ದು ನಿಜ. ಆದರೆ, ರಾಷ್ಟ್ರೀಯ ಪಕ್ಷಗಳೇ ಈಗ ಪ್ರಾದೇಶಿಕ ಪಕ್ಷಗಳಾಗುತ್ತಿವೆ. ಪ್ರಾದೇಶಿಕ ಪಕ್ಷಗಳ ಬೆಂಬಲದಿಂದಲೇ ಕೇಂದ್ರ ಸರ್ಕಾರ ಮುನ್ನಡೆಯುತ್ತಿದೆ.ಕೆಜೆಪಿಗೆ ಯಾಕೆ ಮತ ನೀಡಬೇಕು?

-ಸಮಾಜದ ಎಲ್ಲ ವರ್ಗದವರ ಅಭಿವೃದ್ಧಿಗೆ ಕೆಜೆಪಿ ಬದ್ಧವಾಗಿದೆ. ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲು ಪಣತೊಟ್ಟಿದೆ. ಕಲ್ಯಾಣ ಕರ್ನಾಟಕ ಆಗಬೇಕು ಎಂಬ ಆಶಯವಿದೆ. ಮೂರು ವರ್ಷಗಳ ಅಧಿಕಾರ ಅವಧಿಯಲ್ಲಿ ರೂಪಿಸಿದ್ದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದರ ಜತೆಗೆ ಗ್ರಾಮೀಣ ಪ್ರದೇಶಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಒತ್ತು ನೀಡಲಾಗುವುದು. ಪಕ್ಷದ ಪ್ರಣಾಳಿಕೆ ಸಿದ್ಧವಾಗುತ್ತಿದೆ.ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಆದರೆ, ಆಡಳಿತ ಪಕ್ಷದ ಚುಕ್ಕಾಣಿ ಹಿಡಿದಾಗ ಒಳ್ಳೆಯ ಆಡಳಿತ ನೀಡುವಲ್ಲಿ ವಿಫಲರಾದರು ಎಂದು ಜನ ಹೇಳುತ್ತಿದ್ದಾರಲ್ಲಾ?

-ಹಿಂದಿನ ಯಾವ ಮುಖ್ಯಮಂತ್ರಿಗಳೂ ಮಾಡದಷ್ಟು ಸಾಧನೆ, ಅಭಿವೃದ್ಧಿ ಮಾಡಿದ್ದೇನೆ. ಅಂಕಿ ಅಂಶಗಳೇ ಇದನ್ನು ಹೇಳುತ್ತವೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ವಿಶ್ವಕನ್ನಡ ಸಮ್ಮೇಳನ, ಪ್ರತ್ಯೇಕ ಕೃಷಿ ಬಜೆಟ್ ಮಂಡನೆ, ಭಾಗ್ಯಲಕ್ಷ್ಮಿ ಯೋಜನೆ, ಹಜ್ ಭವನ ನಿರ್ಮಾಣ...ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇನೆ.ಇವೆಲ್ಲ ಜನಪ್ರಿಯ ಕಾರ್ಯಕ್ರಮಗಳು ನಿಜ, ಆದರೆ, ನಿಮಗೆ ರಾಜ್ಯದ ಅಭಿವೃದ್ಧಿ ಕುರಿತಾದ ಸ್ಪಷ್ಟ ಮುನ್ನೋಟ ಇಲ್ಲ ಎಂಬ ಭಾವನೆ ಜನರಲ್ಲಿ ಇದೆಯಲ್ಲಾ?

-ಇದು ಸರಿಯಲ್ಲ. ಯಾವುದರಲ್ಲಿ ಹಿಂದೆ ಬಿದ್ದಿದ್ದೇವೆ ಹೇಳಿ. ವಿವಿಧ ಇಲಾಖೆಗಳು ಕೇಂದ್ರದಿಂದ ಪಡೆದುಕೊಂಡಿರುವ ಪ್ರಶಸ್ತಿಗಳೇ ಅಭಿವೃದ್ಧಿಗೆ ಸಾಕ್ಷಿ.ಅಧಿಕಾರಕ್ಕೆ ಬರುವ ಮುನ್ನ ಜನನಾಯಕರಾಗಿದ್ದ ನೀವು, ಮುಖ್ಯಮಂತ್ರಿಯಾದ ನಂತರ ಜಾತಿಯ ನಾಯಕರಾಗಿ ಗುರುತಿಸಿಕೊಂಡಿದ್ದೀರಿ. ಬೇರೆ ವರ್ಗದವರಲ್ಲಿನ ಅಸುರಕ್ಷತೆ ಭಾವನೆ, ಮತ್ತೆ ಅಧಿಕಾರಕ್ಕೆ ಬರುವ ನಿಮ್ಮ ಆಶಯಕ್ಕೆ ಅಡ್ಡಿಯಾಗುವುದಿಲ್ಲವೇ?

-ಜಾತಿಯ ಆಧಾರದ ಮೇಲೆ ಯಾವ ಕಾರ್ಯಕ್ರಮವನ್ನೂ ರೂಪಿಸಿಲ್ಲ. ಎಲ್ಲ ಸಮುದಾಯದ ದೀನ ದಲಿತರು, ಬಡವರು ಕಾರ್ಯಕ್ರಮಗಳ ಉಪಯೋಗ ಪಡೆದಿದ್ದಾರೆ. ಸಾಲ ಮನ್ನಾ, ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹಧನದ ಲಾಭವನ್ನು ಎಲ್ಲ ವರ್ಗದವರೂ ಪಡೆದಿದ್ದಾರೆ. ವಾಲ್ಮಿಕಿ ಜಯಂತಿ, ಕನಕದಾಸರ ಜಯಂತಿಗೆ ರಜೆ ಘೋಷಣೆ ಮಾಡಿದೆ. ಕಾಗಿನೆಲೆ ಅಭಿವೃದ್ಧಿಗೆ 40 ಕೋಟಿ ರೂಪಾಯಿ ನೀಡಿದೆ. ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನೇಕಾರರು, ಭೋವಿ ಜನಾಂಗದವರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ.ನೆಲ, ಜಲ, ಭಾಷೆ ಸೇರಿದಂತೆ ಪ್ರಾದೇಶಿಕ ಆಶೋತ್ತರಗಳಿಗೆ ವಿರುದ್ಧವಾಗಿ ಹಿಂದಿನ ಕೇಂದ್ರ ಸರ್ಕಾರಗಳು ನಡೆದುಕೊಂಡಾಗ ನೀವು ಹೆಚ್ಚು ಮಾತನಾಡಿಲ್ಲ. ಈಗ ರಾಜಕೀಯ ಸ್ವಾರ್ಥಸಾಧನೆಗಾಗಿ ಈ ವಿಷಯವನ್ನು ಬಳಸಿಕೊಳ್ಳುತ್ತೀದ್ದೀರಿ ಎಂದು ನಿಮ್ಮ ವಿರೋಧಿಗಳು ಆರೋಪಿಸುತ್ತಿದ್ದಾರಲ್ಲಾ?

-ಇದರಲ್ಲಿ ಯಾವ ಸ್ವಾರ್ಥವೂ ಇಲ್ಲ. ಕೇಂದ್ರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಬರಗಾಲ, ಪ್ರವಾಹದಂತಹ ಸಂದರ್ಭದಲ್ಲೂ ಕೇಂದ್ರದಿಂದ ರಾಜ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ನೆರವು ಸಿಗುತ್ತಿಲ್ಲ. ಕಾವೇರಿ, ಕಲ್ಲಿದ್ದಲು, ವಿದ್ಯುತ್ ವಿಚಾರದಲ್ಲೂ ಅನ್ಯಾಯವಾಗಿದೆ. ಆದರೆ, ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಸ್ಥಾನದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ನೆರವು ಸಿಗುತ್ತಿದೆ. ಇದನ್ನು ಮನಗಂಡು ಪ್ರಾದೇಶಿಕ ಪಕ್ಷ ಸ್ಥಾಪಿಸಲಾಗಿದೆ. ನಮ್ಮ ಪಕ್ಷದ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದಾಗ ದೆಹಲಿಯಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗುತ್ತದೆ.ಕೆಲವೊಂದು ಪ್ರದೇಶಗಳಲ್ಲಿ ಬಿಟ್ಟರೆ, ಸಮಗ್ರ ಕರ್ನಾಟಕದಲ್ಲಿ ನಿಮ್ಮ ಪ್ರಭಾವ ಕಾಣುತ್ತಿಲ್ಲ?

-ಹಾವೇರಿ ಸಮಾವೇಶವೇ ಇದಕ್ಕೆ ಉತ್ತರ ನೀಡಲಿದೆ. ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತರು ಮತ್ತು ಯುವಜನರು ಕೆಜೆಪಿಯತ್ತ ಒಲವು ತೋರುತ್ತಿದ್ದಾರೆ. ಮೊದಲ ಬಾರಿಗೆ ಎಲ್ಲರನ್ನು ಒಳಗೊಂಡ ಇಂತಹದ್ದೊಂದು ಸಮಾವೇಶ ನಡೆಯುತ್ತಿದೆ. ಎಲ್ಲ ಭಾಗಗಳ ಜನರು ಅದರಲ್ಲಿ ಭಾಗವಹಿಸಲಿದ್ದಾರೆ.4-5 ತಿಂಗಳ ಅಧಿಕಾರ ಬಿಡಲು ಸಿದ್ಧರಿಲ್ಲದ ನಿಮ್ಮ ಬೆಂಬಲಿಗರು, ಅಧಿಕಾರ ಹೋದ ನಂತರ ನಿಜಕ್ಕೂ ನಿಮ್ಮಂದಿಗೆ ಬರುತ್ತಾರಾ?

-ಈಗ ರಾಜೀನಾಮೆ ನೀಡುವುದು ಬೇಡ ಎಂದು ನಾನೇ ಹೇಳಿದ್ದೇನೆ. ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾವೇ. ಅವರು ಅಧಿಕಾರ ಅವಧಿ ಪೂರ್ಣಗೊಳ್ಳಬೇಕು ಎಂಬುದು ನನ್ನ ಆಶಯ.ನಿಮ್ಮ ಪಕ್ಷದಲ್ಲಿ ಎರಡನೇ ಹಂತದ ನಾಯಕರೇ ಕಾಣುತ್ತಿಲ್ಲವಲ್ಲಾ?

-ಸಚಿವರು, ಶಾಸಕರನ್ನು ಅವಲಂಬಿಸಿ ಹೊಸ ಪಕ್ಷ ಕಟ್ಟಿಲ್ಲ. ಚುನಾವಣೆ ವೇಳೆಗೆ 50ರಿಂದ 60 ಜನ ಶಾಸಕರು ಬರುತ್ತಾರೆ. ಹಾವೇರಿ ಸಮಾವೇಶಕ್ಕೆ ಬರುವುದು ಬೇಡ ಎಂದು ನಾನೇ ಹೇಳಿದ್ದೇನೆ. ಸ್ವಯಂ ಪ್ರೇರಣೆಯಿಂದ ಅವರಾಗಿಯೇ ಬಂದರೆ ತಡೆಯಲು ಆಗುವುದಿಲ್ಲ.ಒಂದೆಡೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ ಎನ್ನುತ್ತೀರಿ. ಮತ್ತೊಂದೆಡೆ ಆರು ತಿಂಗಳ ನಂತರ ನಾನೇ ಮುಖ್ಯಮಂತ್ರಿ ಎನ್ನುತ್ತೀರಿ. ಈ ದ್ವಂದ್ವ ಯಾಕೆ?

-ಮುಖ್ಯಮಂತ್ರಿಯಾಗಲು ಪಕ್ಷ ಕಟ್ಟುತ್ತಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿ ಆಗಬೇಕು ಎಂಬುದು ನನ್ನ ಕನಸು. ಅದಕ್ಕಾಗಿ ಈ ಹೋರಾಟ.ಅಧಿಕಾರದಲ್ಲಿ ಇದ್ದಾಗ ಯಾಕೆ ಸಮಗ್ರ ಅಭಿವೃದ್ಧಿ ಮಾಡಲಿಲ್ಲ?

-ಯಾವ ಕ್ಷೇತ್ರ ನಿರ್ಲಕ್ಷ್ಯ ಆಗಿದೆ ಹೇಳಿ ನೋಡೋಣ. ಪರಿಶಿಷ್ಟ ಜಾತಿ/ಪಂಗಡದವರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಮೆಟ್ರೊ ಯೋಜನೆ ಜಾರಿ, ವಿಮಾನ ನಿಲ್ದಾಣಗಳ ನಿರ್ಮಾಣ, ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯಾಗಿದೆ. ಕೃಷಿಕರು ನೆಮ್ಮದಿಯಿಂದ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry