ಬುಧವಾರ, ಮೇ 12, 2021
20 °C

ಜೀತದಿಂದ ಪಾರು ಮಾಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಹೊಸಕೋಟೆ ತಾಲ್ಲೂಕಿನ ಕುಂಬಲಹಳ್ಳಿಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದ ನಿವಾಸಿಗಳಾದ ಮುನಿಶಾಮಿರೆಡ್ಡಿ ಮತ್ತು ಲಕ್ಷ್ಮಿದೇವಿ ಅವರು ತಮ್ಮ ಪ್ರಾಣಕ್ಕೆ ರಕ್ಷಣೆ ನೀಡುವಂತೆ ಕೋರಿ ಉಪವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಜೀತಕ್ಕೆ ಇಟ್ಟುಕೊಂಡ ಮಾಲೀಕರಿಂದ ಮತ್ತು ಇತರರಿಂದ ತಮಗೆ ಬೆದರಿಕೆ ಕರೆಗಳು ಬರುತ್ತಿದ್ದು, ರಕ್ಷಣೆ ನೀಡುವಂತೆ ಇಬ್ಬರೂ ಮೊರೆಯಿಟ್ಟಿದ್ದಾರೆ.ಜೀತ ಪದ್ಧತಿಯಿಂದ ನರಳುತ್ತಿರುವ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಮುನಿಶಾಮಿರೆಡ್ಡಿ ಮತ್ತು ಲಕ್ಷ್ಮಿದೇವಿ ನಗರದ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆಗೆ ಪತ್ರ ಬರೆದು, ಸಂಕಷ್ಟದಿಂದ ಪಾರು ಮಾಡುವಂತೆ ಕೋರಿದ್ದರು. ನಗರಕ್ಕೆ ಬಂದ ಜೀವಿಕ ಸಂಘಟನೆಯ ಸದಸ್ಯರು ಇಬ್ಬರನ್ನೂ ಉಪವಿಭಾಗಾಧಿಕಾರಿಗಳ ಎದುರು ಹಾಜರುಪಡಿಸಿದರು.`ಹೊಸಕೋಟೆಯ ಕುಂಬಲಹಳ್ಳಿಯಲ್ಲಿ ವ್ಯಕ್ತಿಯೊಬ್ಬರಿಂದ ತಂಗಿ ಮದುವೆಗಾಗಿ 30 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದೆ. ಅಲ್ಲಿಯೇ 2008ರಿಂದ ಈವರೆಗೆ ಜೀತದಾಳಾಗಿ ದುಡಿಯುತ್ತಿದ್ದೆ. 8 ತಿಂಗಳ ಹಿಂದೆ ಲಕ್ಷ್ಮಿದೇವಿಯವರನ್ನು ವಿವಾಹವಾದೆ. ಆದರೆ ಅವರನ್ನೂ ಅಲ್ಲಿಯೇ ಕರೆದೊಯ್ದು ಜೀತ ಮಾಡಿಸಬೇಕಾಯಿತು. ಅಲ್ಲಿ ಪಡಬಾರದ ಕಷ್ಟವೆಲ್ಲ ಪಟ್ಟೆವು. ಬೆಳಿಗ್ಗೆ 5 ರಿಂದ ರಾತ್ರಿ 11ರವರೆಗೆ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದೆವು.ಶೌಚಾಲಯದಲ್ಲೇ ಇರಬೇಕಿತ್ತು. ಸರಿಯಾಗಿ ಊಟ ಸಿಗುತ್ತಿರಲಿಲ್ಲ. ತಾಯಿಯನ್ನು ನೋಡಿಕೊಂಡು ಬರಲು ಮನೆಗೂ ಕಳುಹಿಸಲಿಲ್ಲ~ ಎಂದು ಮುನಿಶಾಮಿರೆಡ್ಡಿ ನೊಂದು ನುಡಿದರು.ಜೀವಿಕ ಸಂಘಟನೆಯ ರತ್ನಮ್ಮ ಮಾತನಾಡಿ, `ಮುನಿಶಾಮಿರೆಡ್ಡಿ ಮತ್ತು ಲಕ್ಷ್ಮಿದೇವಿಗೆ ಜೀತದ ಮಾಲೀಕರು ಮತ್ತು ಇತರರು ಪದೇ ಪದೇ ಬೆದರಿಸುತ್ತಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ತಪ್ಪಿಸಿಕೊಂಡು ಬಂದರೂ ಅವರು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ.

 

ಮನೆಗೆ ಬಂದು ಕರೆದೊಯ್ದು ಮತ್ತೆ ಜೀತದ ಕೆಲಸ ಮಾಡಿಸುವುದಾಗಿ ಹೆದರಿಸುತ್ತಿದ್ದಾರೆ. ಇಬ್ಬರೂ ಆತಂಕಗೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರ ಅವರಿಬ್ಬರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.