ಜೀತ ವಿಮುಕ್ತರಿಗೆ ಅಂತ್ಯೋದಯ ಚೀಟಿ ಸೌಲಭ್ಯ

7
ಫಲಾನುಭವಿಗಳನ್ನು ಗುರುತಿಸಲು ಸಮೀಕ್ಷೆ

ಜೀತ ವಿಮುಕ್ತರಿಗೆ ಅಂತ್ಯೋದಯ ಚೀಟಿ ಸೌಲಭ್ಯ

Published:
Updated:
ಜೀತ ವಿಮುಕ್ತರಿಗೆ ಅಂತ್ಯೋದಯ ಚೀಟಿ ಸೌಲಭ್ಯ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅರ್ಹ ನಿವಾಸಿಗಳಿಗೆ ಅಂತ್ಯೋದಯ ಪಡಿತರ ಚೀಟಿಗಳನ್ನು ವಿತರಿ­ಸುವಂತೆ ರಾಜ್ಯ ಸರ್ಕಾರವು ಆದೇಶಿಸಿದ್ದು, ಅದರಂತೆಯೇ ತಾಲ್ಲೂಕಿನಾದ್ಯಂತ ಸಮೀಕ್ಷೆ ನಡೆಸ­ಲಾಗು­ತ್ತಿದೆ. ಅರ್ಹರನ್ನು ಗುರುತಿಸಿ ಅವರಿಗೆ ಕೆಲವೇ ದಿನಗಳಲ್ಲಿ ಅಂತ್ಯೋದಯ ಪಡಿತರ ಚೀಟಿ­ಗಳನ್ನು ವಿತರಿಸಲಾಗು­ವುದು ಎಂದು ತಾಲ್ಲೂಕು ಆಹಾರ ವಿಭಾಗದ ಶಿರಸ್ತೇದಾರ ಸಯ್ಯದ್‌ ನವೀದ್‌ ತಿಳಿಸಿದರು.ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆ ವತಿಯಿಂದ ಸೋಮ­ವಾರ ಆಯೋಜಿಸಿದ್ದ ಜೀತ ಪದ್ಧತಿಯಿಂದ ಮುಕ್ತರಾದ ಕುಟುಂಬ ಸದಸ್ಯರ ಸಭೆಯಲ್ಲಿ ಮಾತನಾಡಿ,  ಜೀತದಾಳುಗಳು ಕಡುಬಡವರ ವಿಭಾಗದ ವ್ಯಾಪ್ತಿಗೆ ಬರುತ್ತಾರೆ ಎಂದರು.ಜೀತ ವಿಮುಕ್ತರ ಕುಟುಂಬಗಳು ಸಾಮಾಜಿಕ ಮತ್ತು ಆರ್ಥಿಕವಾಗಿ ತೀರ ಹಿಂದುಳಿದಿವೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಕುಟುಂಬ­ಗಳಿಗೆ ಅಂತ್ಯೋದಯ ಪಡಿತರ ಚೀಟಿಗಳನ್ನು ಒದಗಿಸುವುದು ತುರ್ತು ಅಗತ್ಯವಿದೆ. ಈ ಕಾರಣದಿಂದಲೇ ಜೀವಿಕ ಸಂಘಟನೆಯ ನೆರವಿನಿಂದ ಆಯಾ ಕುಟುಂಬಗಳನ್ನು ಪತ್ತೆ ಮಾಡಿ, ಅವರಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶಕ್ಕೆ ಒಟ್ಟು 3921 ಅಂತ್ಯೋದಯ ಪಡಿತರ ಚೀಟಿಗಳು ಮಂಜೂರಾಗಿದ್ದು, ಅದಕ್ಕೆ ಇನ್ನೂ 700 ಪಡಿತರ ಚೀಟಿಗಳು ಮಂಜೂರಾಗಲಿವೆ. ನಗರ­ಪ್ರದೇಶಕ್ಕೆ 133 ಪಡಿತರ ಚೀಟಿಗಳು ಮಂಜೂರಾ­ಗಿದ್ದು, ಅದಕ್ಕೆ ಇನ್ನೂ 63 ಚೀಟಿಗಳು ಸೇರ್ಪಡೆಯಾಗಲಿವೆ. ಸದ್ಯಕ್ಕೆ 333 ಕುಟುಂಬದವರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಎಲ್ಲವನ್ನೂ ಪರಿಶೀಲಿಸಿದ ನಂತರ ಚೀಟಿಗಳನ್ನು ವಿತರಿಸಲಾಗುವುದು ಎಂದು ಹೇಳಿದರು.ಜೀವಿಕ ಸಂಘಟನೆಯ ಮುಖಂಡ ನಾರಾ­ಯಣಸ್ವಾಮಿ ಮಾತನಾಡಿ, ಜೀತ ವಿಮುಕ್ತರಿಗೆ ಸಮಾಜದಲ್ಲಿ ಗೌರವ ಸ್ಥಾನಮಾನ ಸಿಗಬೇಕು. ನಿತ್ಯವೂ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಈ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗ್ಗೆಯೂ ಮಾಹಿತಿಯಿಲ್ಲ.ಪಡಿತರ ಚೀಟಿ ವ್ಯವಸ್ಥೆ ಬಗ್ಗೆಯೂ ಅವರಿಗೆ ಸರಿಯಾದ ಮಾಹಿತಿಯಿಲ್ಲ. ಅವರೆಲ್ಲರನ್ನೂ ಒಂದುಗೂಡಿಸಿ ಇಲ್ಲಿ ಕರೆ­ತಂದಿದ್ದೇವೆ. ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರಿಗೆ ಪಡಿತರ ಚೀಟಿಯಲ್ಲದೇ ಸರ್ಕಾರದ ಇತರ ಸೌಲಭ್ಯಗಳನ್ನು ಪೂರೈಸಲು ಸಹ ಪ್ರಯತ್ನಿಸುತ್ತೇವೆ ಎಂದರು.ಜೀವಿಕ ಸಂಘಟನೆಯ ಸಂಚಾಲಕ ಮೂರ್ತಿ ಮಾತನಾಡಿ, ಜೀತ ವಿಮುಕ್ತರು ವಾಸವಿರುವ ಎಲ್ಲ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಿ­ದ್ದೇವೆ. ಕಾಡುಪ್ರಾಣಿಗಳು, ಹಾವುಗಳು ಇರು­ವಂತಹ ಕುಗ್ರಾಮಗಳಲ್ಲಿ ಅಂತಹ ಜನರು ವಾಸ­ವಿದ್ದು, ಅವರನ್ನು ಕೂಡ ಕರೆ ತಂದು ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.ಜೀವಿಕ ಸಂಘಟನೆಯ ರಾಜ್ಯ ಘಟಕದ ಸಂಚಾಲಕರಾದ ಗೋಪಾಲ್, ರತ್ನಮ್ಮ, ಮುನಿಕೃಷ್ಣ, ರವಿ, ಕಾಮಾಕ್ಷಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry