ಭಾನುವಾರ, ಜೂನ್ 13, 2021
22 °C

ಜೀರೋನಲ್ಲಿ ಮೂರು ಪಾಲು!

ವಿ.ಎಸ್.ಸುಬ್ರಹ್ಮಣ್ಯ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಳ್ಳಾರಿ ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಅದಿರು (ಜೀರೋ ಮೆಟಿರಿಯಲ್) ತೆಗೆದು ಸಾಗಿಸುತ್ತಿದ್ದವರು ಪ್ರತಿ ಟನ್‌ಗೆ 200 ರೂಪಾಯಿ `ಕಪ್ಪ~ ನೀಡುತ್ತಿದ್ದರು. ಅದರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ರೂ 100 ಸಂದಾಯ ಆಗುತ್ತಿತ್ತು. 5 ರೂಪಾಯಿ ಕಂಪ್ಲಿ ಶಾಸಕ ಸುರೇಶ್ ಬಾಬು ಅವರ ಪಾಲಾದರೆ, ಮೆಹಫೂಜ್ ಅಲಿಖಾನ್‌ಗೆ ರೂ 2 ದೊರೆಯುತ್ತಿತ್ತು.ಇದು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಹೆಸರಿನಲ್ಲಿ ರೆಡ್ಡಿ ಅವರ ಗುಂಪು ನಡೆಸಿರುವ ಅವ್ಯವಹಾರಗಳ ಬೆನ್ನುಹತ್ತಿರುವ ಸಿಬಿಐ ತನಿಖಾ ತಂಡ ಪತ್ತೆಹಚ್ಚಿರುವ ಸಂಗತಿ. `ಜೀರೋ ಮೆಟಿರಿಯಲ್~ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರದಲ್ಲೇ ರೆಡ್ಡಿ ಮತ್ತು ಅವರ ಗುಂಪು ಹತ್ತಾರು ಕೋಟಿ ಸಂಪಾದಿಸುತ್ತಿದ್ದರು ಎಂಬ ಆರೋಪಗಳನ್ನು ದೃಢಪಡಿಸಬಲ್ಲ ದಾಖಲೆಗಳೂ ತನಿಖಾ ತಂಡದ ಕೈಸೇರಿವೆ.`ಬೀಜಿಂಗ್ ಒಲಿಂಪಿಕ್ ಕಾರಣದಿಂದಾಗಿ ಕಬ್ಬಿಣದ ಅದಿರಿನ ಬೆಲೆ ಗಗನಕ್ಕೆ ಏರಿದಾಗ ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಭೂಮಿಯ ಒಡಲು ಬಗೆಯುವ ಕೆಲಸ ಆರಂಭವಾಗಿತ್ತು. ಅಲ್ಲಿ ಉತ್ಪಾದನೆಯಾದ ಅದಿರನ್ನು ಸುರಕ್ಷಿತವಾಗಿ ಮಾರಾಟ ಮಾಡಲು ಸೃಷ್ಟಿಸಿದ ಮಾರ್ಗವೇ `ಜೀರೋ ಮೆಟಿರಿಯಲ್~ ಅಥವಾ `ರಿಸ್ಕ್ ಮೆಟಿರಿಯಲ್~. ಈ `ಜೀರೋ ಮೆಟಿರಿಯಲ್~ ಸಾಗಣೆಗೆ ಪರ್ಯಾಯ ವ್ಯವಸ್ಥೆಯೊಂದು ನಿರಂತರವಾಗಿ ಕೆಲಸ ಮಾಡುತ್ತಿತ್ತು ಎಂಬ ಉಲ್ಲೇಖ ಹಿಂದಿನ ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಇತ್ತು. ಅದೆಲ್ಲವೂ ಅಕ್ಷರಶಃ ನಿಜ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ~ ಎನ್ನುತ್ತವೆ ಸಿಬಿಐ ಮೂಲಗಳು.ಸಾರಿಗೆ ಮಾಫಿಯಾ:
`ಅಕ್ರಮವಾಗಿ ಗಣಿಗಾರಿಕೆ ನಡೆಸಿ ಅದಿರು ಸಂಗ್ರಹಿಸಿದರೂ, ಅದು ನಿಶ್ಚಿತವಾಗಿ ಒಂದು ಗುಂಪಿನ ಲಾರಿಗಳ ಮೂಲಕವೇ ಸಾಗಣೆಯಾಗಬೇಕಿತ್ತು. ಸಾಗಣೆ ವೆಚ್ಚದ ಜೊತೆ ಪ್ರತಿ ಟನ್‌ಗೆ 200 ರೂಪಾಯಿ `ರಿಸ್ಕ್ ಮನಿ~ (ಕಪ್ಪ) ಪಾವತಿಸಿದರೆ ಸರಾಗವಾಗಿ ಅದಿರು ನಿಗದಿತ ಸ್ಥಳ ತಲುಪುತ್ತಿತ್ತು.   `ಕಪ್ಪ~ ಕೊಡಲು ಇಚ್ಛಿಸದೇ ಬೇರೆ ಲಾರಿಗಳನ್ನು ಬಳಸಿದರೆ, ಸಂಪೂರ್ಣ ಅದಿರನ್ನೇ ಈ ಮಾಫಿಯಾ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿತ್ತು ಎಂಬ ಸಂಗತಿಯನ್ನು ಜನಾರ್ದನ ರೆಡ್ಡಿ ಅವರ ಕೆಲ ಸಹಚರರು ಸಿಬಿಐ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾರೆ~ ಎಂದು ತನಿಖಾ ಸಂಸ್ಥೆ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ. ಹೊಸಪೇಟೆಯ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ `ಜೀರೋ~ ಅದಿರು ಸಾಗಣೆ ಲಾರಿಗಳ ಮಾಲೀಕರನ್ನು ನಿಯಂತ್ರಿಸುತ್ತಿದ್ದರು. ಅವರಂತೆ ಇನ್ನೂ ಕೆಲವರು ಈ ಜಾಲದಲ್ಲಿದ್ದರು.ಅದಿರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸಾಗಿಸುವ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಬರುವ `ಕಪ್ಪ~ದಲ್ಲಿ ಅವರಿಗೂ ಒಂದು ಪಾಲು ಸಂದಾಯ ಆಗುತ್ತಿತ್ತು ಎಂಬ ವಿವರವೂ ವಿಚಾರಣೆ ವೇಳೆ ಬಹಿರಂಗವಾಗಿದೆ.ಲೆಕ್ಕವೂ ಇತ್ತು: `ಜೀರೋ~ ಅದಿರು ಸಾಗಣೆ ಜಾಲ ಕೇವಲ ಮೌಖಿಕವಾಗಿ ನಡೆಯುತ್ತಿರಲಿಲ್ಲ. ಅಲ್ಲಿಯೂ ಲೆಕ್ಕಪತ್ರಗಳನ್ನು ಇಡಲಾಗುತ್ತಿತ್ತು. ಗಣಿಗಾರಿಕೆ ನಡೆಸಿದ ಸ್ಥಳ, ಅದಿರಿನ ಪ್ರಮಾಣ, ಅದಿರು ತಲುಪುವ ಸ್ಥಳ, ಸಾಗಣೆ ವೆಚ್ಚ, `ರಿಸ್ಕ್ ಮನಿ~ ಎಲ್ಲವನ್ನೂ ಕೆಲ ಸಂಕೇತಗಳ ಮೂಲಕ ನಮೂದಿಸಲಾಗುತ್ತಿತ್ತು. ಆದಾಯ ತೆರಿಗೆ ಇಲಾಖೆ 2010ರ ಸೆಪ್ಟೆಂಬರ್‌ನಲ್ಲಿ ನಡೆಸಿದ ದಾಳಿಯ ವೇಳೆ ಈ ಬಗ್ಗೆ ಮಹತ್ವದ ದಾಖಲೆಗಳು ದೊರೆತಿದ್ದವು. ಬಹಳಷ್ಟು ವಿಷಯಗಳನ್ನು ಹೊರತೆಗೆದಿದ್ದ ಆದಾಯ ತೆರಿಗೆ ಇಲಾಖೆಗೆ, ಇತ್ತೀಚಿನವರೆಗೂ ಕೆಲ ಸಂಕೇತಗಳ ವಿವರ ಅರಿಯುವುದು ಸಾಧ್ಯವೇ ಆಗಿರಲಿಲ್ಲ.ಸಿಬಿಐ ಮೂಲಗಳ ಪ್ರಕಾರ, ತೆರಿಗೆ ಇಲಾಖೆ ಒದಗಿಸಿದ ದಾಖಲೆಗಳನ್ನು ಆಧರಿಸಿ, ಜನಾರ್ದನ ರೆಡ್ಡಿ, ಅಲಿಖಾನ್, ನಾಗರಾಜ್, ಮಹೇಶ್ ಸೇರಿದಂತೆ ಈ ಜಾಲದಲ್ಲಿ ಸಕ್ರಿಯವಾಗಿದ್ದ ಹಲವರನ್ನು ದೀರ್ಘಕಾಲ ಪ್ರಶ್ನಿಸಿರುವ ಡಿಐಜಿ ಆರ್.ಹಿತೇಂದ್ರ ನೇತೃತ್ವದ ಸಿಬಿಐ ತನಿಖಾ ತಂಡ, ಬಳ್ಳಾರಿಯಲ್ಲಿ ನಡೆಯುತ್ತಿದ್ದ `ಜೀರೋ~ ಅದಿರು ಸಾಗಣೆ ವೃತ್ತಾಂತದ ಪೂರ್ಣ ವಿವರವನ್ನು ಕಲೆಹಾಕಿದೆ. ದಾಖಲೆಗಳಲ್ಲಿ ಕಾಣುವ ಅಂಶಗಳೆಲ್ಲವೂ ಸತ್ಯ ಎಂಬುದನ್ನು ರೆಡ್ಡಿ ಮತ್ತು ಅಲಿಖಾನ್ ವಿಚಾರಣೆ ಒಪ್ಪಿಕೊಂಡಿದ್ದಾರೆ.`ಮಾಸ್ಟರ್‌ಮೈಂಡ್~ ಖಾನ್:
`ಅಲಿಖಾನ್ ಈ ವ್ಯವಹಾರದ ಪೂರ್ಣ ಉಸ್ತುವಾರಿ ಹೊತ್ತಿದ್ದ. ಶಾಸಕ ಸುರೇಶ್‌ಬಾಬು ಇತರೆ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಜನಾರ್ದನ ರೆಡ್ಡಿ ಅವರ `ನಾಮಬಲ~ದಲ್ಲೇ `ಜೀರೋ~ ಅದಿರು ಸಾಗುತ್ತಿತ್ತು.ಈ ವ್ಯವಹಾರದಿಂದ ಸಂಗ್ರಹವಾದ ಮೊತ್ತ ಹಲವು ಅನಾಮಧೇಯ ಬ್ಯಾಂಕ್ ಖಾತೆಗಳನ್ನು ಸುತ್ತಿಕೊಂಡು, ರೆಡ್ಡಿ, ಸುರೇಶ್‌ಬಾಬು, ಅಲಿಖಾನ್ ಖಾತೆಗಳಿಗೆ ತಲುಪುತ್ತಿತ್ತು.ಇದೆಲ್ಲಕ್ಕೂ ಬ್ಯಾಂಕ್ ಖಾತೆಗಳಲ್ಲೇ ಸಾಕ್ಷ್ಯವಿದೆ. `ಜೀರೋ~ ಅದಿರು ಸಾಗಣೆ ವಹಿವಾಟಿನಲ್ಲಿ ಜನಾರ್ದನ ರೆಡ್ಡಿ ಅವರಿಗೆ ಪ್ರತಿನಿತ್ಯ ಲಕ್ಷದ ಲೆಕ್ಕದಲ್ಲಿ ಕಪ್ಪ ಸಂದಾಯ ಆಗುತ್ತಿತ್ತು. ಸುರೇಶ್ ಬಾಬು ಮತ್ತು ಅಲಿಖಾನ್ ಗಳಿಕೆ ಸಾವಿರದ ಲೆಕ್ಕದಲ್ಲಿತ್ತು~ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.