ಸೋಮವಾರ, ನವೆಂಬರ್ 18, 2019
20 °C
ಗಜೇಂದ್ರಗಡ ಸುತ್ತಮುತ್ತ ತೀವ್ರಗೊಂಡ ಜಲಕ್ಷಾಮ

ಜೀವಜಲದ ಖಣಜದಲ್ಲಿ ಮರಳು ಮಾಫಿಯಾ: ಆತಂಕ

Published:
Updated:

ಗಜೇಂದ್ರಗಡ: ಜೀವಜಲದ ಖಣಜ ಎಂದೇ ಬಣ್ಣಿಸಲ್ಪಡುವ ಹಳ್ಳಗಳಲ್ಲಿ ಅಕ್ರಮ ಮರಳು ಗಾರಿಕೆ ಎಗ್ಗಿಲ್ಲದೆ ಸಾಗಿರುವುದು ಜಲಕ್ಷಾಮದ ತೀವ್ರತೆಗೆ ಸಾಕ್ಷಿಯಾಗಿದೆ. ಹೌದು, ನಿರಂತರ ಬರದಿಂದ ತತ್ತರಿಸಿರುವ ತಾಲ್ಲೂಕಿನ ನಾಗರಿಕರು ಜೀವಜಲಕ್ಕಾಗಿ ಪರಿತಪ್ಪಿಸುತ್ತಿದ್ದಾರೆ.ಆದರೆ, ತಲೆಮಾರುಗಳಿಂದಲೂ ಜಲದಾಹ ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಳ್ಳಗಳ ಒಡಲು ಬಗೆದು ಅಕ್ರಮ ಮರಳುಗಾರಿಕೆ ನಡೆಸಿರುವುದರಿಂದ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಪಾತಾಳಕ್ಕೆ ಕುಸಿದು ಜೀವಜಲ ಕಣ್ಮರೆಯಾಗುತ್ತಿರುವುದು ಕಂಡು ಬರುತ್ತಿದೆ.ಗಜೇಂದ್ರಗಡ ತಾಲ್ಲೂಕಿನ ಸೂಡಿ, ದ್ಯಾಮುನಸಿ, ಗುಳಗುಳಿ, ಇಟಗಿ, ಅಳಗುಂಡಿ, ಹಿರೇಅಳಗುಂಡಿ, ಮುಶಿಗೇರಿ, ಗಜೇಂದ್ರಗಡ, ಉಣಚಗೇರಿ, ರಾಜೂರ, ಕೊಡಗಾನೂರ ಗ್ರಾಮಗಳ ವ್ಯಾಪ್ತಿಯಲ್ಲಿನ ಎಲ್ಲ ಹಳ್ಳಗಳಲ್ಲಿ ಅಕ್ರಮ ಮರಳುಗಾರಿಕೆ ದಂಧೆ ರಾಜಾ ರೋಷವಾಗಿ ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಅಂಕುಶ ಹಾಕುವಲ್ಲಿ ವಿಫಲವಾಗಿರುವುದರಿಂದ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಕಣ್ಮರೆಯಾಗಿ ಹಿಂದೆಂದೂ ಕಾಣದಂತಹ ಜಲಕ್ಷಾಮ ತಲೆದೋರಿದೆ.ಅಂತರ್ಜಲ ವೃದ್ಧಿಸುವ ಹಳ್ಳಗಳಿವು :2001 ರ ಜನಗಣತಿ ಪ್ರಕಾರ ಗಜೇಂದ್ರಗಡ ತಾಲ್ಲೂಕು 2,47,645 ಜನ ಸಂಖ್ಯೆ ಹೊಂದಿದೆ. ಒಬ್ಬ

ವ್ಯಕ್ತಿಗೆ ದಿನವೊಂದಕ್ಕೆ 40 ಲೀಟರ್ ನೀರಿನಂತೆ ನಿತ್ಯ ತಾಲ್ಲೂಕಿನ ಜನತೆಗೆ 99,05,800 ಲೀಟರ್ ನೀರು ಒದಗಿಸಬೇಕು.ನಾಗರಿಕರಿಗೆ ಅಗತ್ಯವಿರುವ ಜೀವಜಲವನ್ನು ಪೂರೈಸುವ ಉದ್ದೇಶದಿಂದ ತಾಲ್ಲೂಕಾಡಳಿತ ಆಯಾ ಗ್ರಾಮ ಮತ್ತು ನಗರಗಳ ಹೊರ ವಲಯದಲ್ಲಿನ ಹಳ್ಳಗಳ ಅಕ್ಕ-ಪಕ್ಕದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿ ಜಲದಾಹ ನೀಗಿಸುತ್ತಾ ಬಂದಿದೆ.ಆದರೆ, ಕಳೆದ ಎರಡು ವರ್ಷಗಳಿಂದ ತಲೆದೋರಿರುವ ಭೀಕರ ಬರದಿಂದಾಗಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಹೀಗಿರು ವಾಗಲೇ ಅಂತರ್ಜಲದ ಮೂಲ ಎಂದೇ ಬಣ್ಣಿಸಲ್ಪಡುವ ತಾಲ್ಲೂಕಿನ 28 ಮುಖ್ಯ ಹಾಗೂ 100 ಉಪ ಹಳ್ಳಗಳಲ್ಲಿ ದೈತ್ಯಾಕಾರದ ಜೆಸಿಬಿ ಯಂತ್ರಗಳನ್ನು ಬಳಸಿ ಅಕ್ರಮ ಮರಳು ಗಾರಿಕೆ ಅವ್ಯಾಹತವಾಗಿ ನಡೆಸುತ್ತಿರುವುದರಿಂದ ನಾಗರಿಕರಿಗೆ ಜೀವ ಜಲ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 232 ಕೊಳವೆ ಬಾವಿಗಳಲ್ಲಿ 114 ಕೊಳವೆ ಬಾವಿಗಳು ಬರಡಾಗಿ ನಿಂತಿವೆ.ನೀರಾವರಿಗೂ ಕೊಡಲಿ ಪೆಟ್ಟು: ತಾಲ್ಲೂಕಿನ 6, 526 ರೈತ ಕುಟುಂಬಗಳು ಹತ್ತಾರು ದಶಕಗಳಿಂದಲೂ ಕೊಳವೆ ಬಾವಿ ಆಶ್ರಿತ ನೀರಾವರಿಯ ಮೂಲಕ ಸಮೃದ್ಧ ಬದುಕು ಕಟ್ಟಿಕೊಂಡಿದ್ದವು. 3,256 ನೀರಾವರಿ ಕೊಳವೆ ಬಾವಿಗಳಿದ್ದವು. ಸದ್ಯ ನಡೆದಿರುವ ಅಕ್ರಮ ಮರಳುಗಾರಿಕೆಯಿಂದಾಗಿ 2,568 ಕೊಳವೆ ಬಾವಿಗಳು ಬರಡಾಗಿವೆ. ಕೊಳವೆ ಬಾವಿಗಳ ನೀರಾವರಿಯನ್ನೇ ನಂಬಿದ ರೈತ ಕುಟುಂಬಗಳನ್ನು ಅಕ್ರಮ ಮರಳು ಮಾಫಿಯಾ ಬೀದಿಗೆ ತಳ್ಳಿದೆ.  ಮರಳಿಗೆ ಚಿನ್ನದ ಬೆಲೆ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸರ್ಕಾರ ಕಡಿವಾಣ ಹಾಕಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಹಳ್ಳಗಳಲ್ಲಿ ದೊರೆಯುವ ಮರಳಿಗೆ ಚಿನ್ನದ ಬೆಲೆ ಬಂದಿದೆ.ಟ್ರ್ಯಾಕ್ಟರ್ ಒಂದಕ್ಕೆ 1,500 ರಿಂದ 2,000 ರೂ. ಹಾಗೂ ಲಾರಿವೊಂದಕ್ಕೆ 10,000 ರಿಂದ 15,000 ರೂ ವರೆಗೆ ಮಾರಾಟವಾಗುತ್ತಿದೆ. ಆದರೆ, ಹಳ್ಳಗಳಿಂದ ಸಾಗಿಸಲಾಗುವ ಮರಳಿಗೆ ಯಾವುದೇ ಪರವಾಣಿಗೆ ಇಲ್ಲದಿರುವುದರಿಂದ ಇಲ್ಲಿ ದೊರೆಯುವ ಮರಳನ್ನು ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಸಿಂಧನೂರ, ಕನಕಗಿರಿ ಮುಂತಾದ ಕಡೆಗಳಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ.ಮೌನಕ್ಕೆ ಶರಣಾದ ಇಲಾಖೆಗಳು ಅಕ್ರಮ ಮರಳುಗಾರಿಕೆ ನಿಯಂತ್ರಣ ಕಂದಾಯ, ಲೋಕೊಪಯೋಗಿ ಹಾಗೂ ಅರಣ್ಯ ಇಲಾಖೆಗಳ ಹೆಗಲಿಗಿದೆ. ಆದರೆ, ತಾಲ್ಲೂಕಿನ ಹಳ್ಳಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಈ ಮೂರು ಇಲಾಖೆಗಳು ವಿಫಲವಾಗಿವೆ. ಈ ಕುರಿತು ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಅಕ್ರಮ ಮರಳು ಮಾಫಿಯಾಗೆ ತಡೆ ಬಿದ್ದಿಲ್ಲ.

 

ಪ್ರತಿಕ್ರಿಯಿಸಿ (+)