ಜೀವನಕೋಶವೇ ಜಾನಪದ: ಬಂಜಗೆರೆ

ಬೆಂಗಳೂರು: ‘ಬದುಕಿನ ಎಲ್ಲ ಆಯಾಮಗಳನ್ನೂ ಒಳಗೊಂಡಿರುವ, ಜೀವನದ ರೀತಿಯನ್ನು ಹೇಳುವ ಜೀವನಕೋಶವೇ ಜಾನಪದ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ವಿವಿಧ ಪುಸ್ತಕಗಳ ಲೋಕಾರ್ಪಣೆ’ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ವಿಜ್ಞಾನದಷ್ಟೇ ಜಾನಪದವು ಮುಖ್ಯವಾಗಿದೆ. ತಂತ್ರಜ್ಞಾನದಲ್ಲಿ ದಾಖಲೀಕರಣ ಜ್ಞಾನವಿದೆ. ಜಾನಪದದಲ್ಲಿ ವ್ಯಕ್ತಿ ಜ್ಞಾನವಿದೆ. ದಾಖಲೀಕರಣ ಜ್ಞಾನಕ್ಕಿಂತ ವ್ಯಕ್ತಿ ಜ್ಞಾನವು ಹೆಚ್ಚು ಮುಖ್ಯವಾಗುತ್ತದೆ. ಜನಪದ ಕಲಾವಿದ ತನ್ನ ತಲೆಮಾರಿನಿಂದ ಪಡೆದುಕೊಂಡಿದ್ದಕ್ಕೆ ತನ್ನ ಜೀವನಾನುಭವವನ್ನು ಸೇರಿಸುತ್ತ ಅದಕ್ಕೆ ಜೀವ ತುಂಬುತ್ತ ಹೋಗುತ್ತಾನೆ’ ಎಂದು ವಿವರಿಸಿದರು.
‘ಜಗತ್ತಿನಲ್ಲಿ ಜಾಗತೀಕರಣವು ಬಲಗೊಳ್ಳುತ್ತಿರುವ ಸಮಯದಲ್ಲಿ ನಮ್ಮ ಪರಂಪರೆಯನ್ನು ಮರೆಯದಿರಲು, ಜಾನಪದವನ್ನು ಬಲಗೊಳಿಸುವ ಅಗತ್ಯವಿದೆ. ಜಾನಪದವು ಬರೀ ಕಲೆಯಲ್ಲ, ಕುಣಿತವಲ್ಲ. ಅದು ಹರಿಯುವ ನದಿಯಿದ್ದಂತೆ, ಅದು ನಿತ್ಯ ಚಿರನೂತನವಾಗಿದೆ’ ಎಂದರು.
ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಿರ್ದೇಶಕ ಪುರುಷೋತ್ತಮ ಬಿಳಿಮಲೆ ಮಾತನಾಡಿ ‘ಜ್ಞಾನವು ಅಂತರರಾಷ್ಟ್ರೀಯಗೊಳ್ಳುತ್ತಿರುವ ಈ ವೇಳೆಯಲ್ಲಿ ಜಾನಪದ ವಿದ್ವಾಂಸರಿಗೆ ಅನೇಕ ಸವಾಲುಗಳಿವೆ. ಬ್ರಿಟಿಷ್ ಸಂಗ್ರಹಾಲಯದಲ್ಲಿ ಜಾನಪದ ಚರಿತ್ರೆಯ ಕುರಿತು ಆಧಾರಗಳಿವೆ. ಅವುಗಳ ಕುರಿತು ಅಧ್ಯಯನ ನಡೆಯಬೇಕಿದೆ’ ಎಂದರು.
‘ಇಂದಿನ ಯುವ ತಲೆಮಾರಿನ ಮೇಲೆ ನಮ್ಮ ಜಾನಪದ ಸಂಸ್ಕೃತಿಯನ್ನು ಉಳಿಸಿ, ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯಿದೆ. ಜಾನಪದ ಸಂಸ್ಕೃತಿಯನ್ನು ಸಂಘರ್ಷಾತೀತ ಅಥವಾ ಸಂಘರ್ಷಕ್ಕೊಳಪಡಿಸುವುದು ಇಂದಿನ ಯುವಜನತೆಯ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿದರು.
ಬಿಡುಗಡೆಯಾದ ಕೃತಿಗಳು
ನಮ್ಮ ಗಿಡಮರ ಬಳ್ಳಿಗಳು–ಶಾಂತಿ ನಾಯಕ, ಕರ್ನಾಟಕ ಸಂಶೋಧನಾ ಜಾನಪದ– ಸಂಪಾದನೆ: ಪ್ರೊ.ಎ.ವಿ.ನಾವಡ, ದೇಶೀಯ ಕೃಷಿ ಹತೋಟಿ ಮತ್ತು ಸಂರಕ್ಷಣಾ ಕ್ರಮಗಳು– ಸಂ: ಡಾ.ಪ್ರಕಾಶ್ ಕಮ್ಮರಡಿ, ನಮ್ಮ ಪರಿಸರದ ಲಂಬಾಣಿಗರು– ಡಾ.ಮಲ್ಲಿಕಾರ್ಜುನ ಕುಂಬಾರ, ಗೊಂಬೇಗೌಡರ ರಾಮನಗೌಡರು– ಡಾ.ಚಂದ್ರಪ್ಪ ಸೊಬಟಿ, ಅಪ್ಪಗೆರೆ ತಿಮ್ಮರಾಜು– ಎಂ.ಬಿ.ಶ್ವೇತಾ, ಹುಮಾಯೂನ್ ಹರಲಾಪುರ– ಡಾ.ವೃಷಭಕುಮಾರ್, ಕಾಡುಗೊಲ್ಲರ ಬೆಡಗಿನ ಪದಗಳು– ಸಂ: ಎಂ.ಬಿ.ಶ್ವೇತಾ, ಎನ್.ಮೋಹನ್ಕುಮಾರ್, ಡಾ.ಪಿ.ಕೆ.ರಾಜಶೇಖರ– ಸಂಗಮೇಶ ಎಸ್.ಗಣಿ.
ಶೇ 50 ವಿಶೇಷ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿವೆ.
‘ಧ್ವನಿ ದಾಖಲೀಕರಣ ಅಗತ್ಯ’
ಜಾನಪದ ವಿಶ್ವವಿದ್ಯಾಲಯವು ರಾಜ್ಯದ ಎಲ್ಲಾ ಜಾನಪದ ಕಲೆಗಳನ್ನು ಒಂದು ಕಡೆ ಸಂಗ್ರಹಿಸಿ, ಧ್ವನಿ ದಾಖಲೀಕರಣ ಮಾಡಬೇಕು. ಈ ದಾಖಲೆಗಳು ಆನ್ಲೈನ್ನಲ್ಲಿ ಲಭ್ಯವಿರುವಂತಿರಬೇಕು. ಆನ್ಲೈನ್ನಲ್ಲಿ ಲಭ್ಯವಿದ್ದರೆ, ಯುವಜನತೆ ಅವುಗಳನ್ನು ಕೇಳಿಸಿಕೊಂಡು ಜಾನಪದ ಕಲೆಗಳ ಕುರಿತು ಆಸಕ್ತಿ ಮೂಡಿಸಿಕೊಳ್ಳುತ್ತಾರೆ.
– ಪುರುಷೋತ್ತಮ ಬಿಳಿಮಲೆ, ನಿರ್ದೇಶಕ, ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.