ಸೋಮವಾರ, ಜನವರಿ 25, 2021
15 °C

ಜೀವನಪ್ರೇಮದ ನಿರ್ಲಿಪ್ತಕಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |



ಆತ್ಮಚರಿತ್ರೆ ಅತಿ ಕಷ್ಟದ ಸಾಹಿತ್ಯ ಪ್ರಕಾರ. ತಮ್ಮ ಜೀವನವನ್ನು ತಾವೇ ನೋಡಿಕೊಳ್ಳುವ ಕಷ್ಟ ಒಂದೆಡೆಗಾದರೆ, ನಮ್ಮ ಜೀವನದ ಯಾವ ವಿವರವನ್ನು ಎಷ್ಟು ಹೇಳಬೇಕೆಂಬ ಆಯ್ಕೆಯ ಪ್ರಶ್ನೆ ಮತ್ತೊಂದೆಡೆ. ಇವೆರಡನ್ನು ಸರಿದೂಗಿಸಿಕೊಳ್ಳುವಾಗ ಕಟ್ಟುವ ವಾಕ್ಯಗಳು ಭಾವನೆಗಳಾಗಿ ಓದುಗನಿಗೆ ಮುಟ್ಟುತ್ತಿವೆಯೇ ಎಂಬ ಅನುಮಾನವೂ ಕಾಡುತ್ತದೆ. ಈ ಕಾರಣಕ್ಕಾಗಿಯೇ ಅನೇಕರು ಆತ್ಮಚರಿತ್ರೆ ಬರೆಯುವುದಕ್ಕೆ ಪ್ರಯತ್ನಿಸುವುದೇ ಇಲ್ಲ. ಭಾರತದ ಮಟ್ಟಿಗೆ ಗಾಂಧೀಜಿಯವರ ‘ನನ್ನ ಸತ್ಯಾನ್ವೇಷಣೆ’ಯೇ ಅತಿಹೆಚ್ಚು ಓದುಗರನ್ನು ಪಡೆದ ಆತ್ಮಚರಿತ್ರೆ ಇರಬೇಕು. ಕನ್ನಡದಲ್ಲಿ ಕುವೆಂಪು, ಎ.ಎನ್.ಮೂರ್ತಿರಾಯರಂತಹವರು ಈ ಪ್ರಕಾರದಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.



ಅವರನ್ನು ಕೈಮರವಾಗಿ ಬಳಸಿದಂತೆ ನಂತರದ ದಿನಗಳಲ್ಲಿ ಲಂಕೇಶರವರೆಗೆ ಅನೇಕ ಸಾಹಿತಿಗಳು ಆತ್ಮಚರಿತ್ರೆಯನ್ನು ನೀಡಿದ್ದಾರೆ. ಆದರೆ, ಆತ್ಮಚರಿತ್ರೆ ಬರೆದವರಲ್ಲಿ ರಂಗಭೂಮಿ-ಸಿನಿಮಾ ನಂಟಿನ ಜನ ಕಡಿಮೆ. ಗುಬ್ಬಿ ವೀರಣ್ಣ ಅವರ ನಂತರ ಕನ್ನಡದಲ್ಲಿ ಆತ್ಮಚರಿತ್ರೆ ಬರೆದ ರಂಗಭೂಮಿಯ ಜನರೆಂದರೆ ಬಿ.ವಿ.ಕಾರಂತ ಮತ್ತು ಸಿ.ಜಿ.ಕೃಷ್ಣಸ್ವಾಮಿ ಮಾತ್ರ. ಇವರೆಲ್ಲರೂ ತಾವು ಹೇಳಬೇಕಾಗಿದ್ದುದನ್ನು ಮತ್ತೊಬ್ಬರಿಗೆ ಹೇಳಿ ಬರೆಯಿಸಿದವರು. ಈ ‘ವ್ಯಾಸ’ರಿಗೆ ‘ಗಣೇಶ’ರುಗಳು ಇದ್ದರು. ಹೀಗಾಗಿ ಇವರಿಗೆ ಆತ್ಮಚರಿತ್ರೆ ಬರೆಯುವಾಗಿನ ಮೂರನೆಯ ಪ್ರಶ್ನೆಯಾದ ವಾಕ್ಯರಚನೆಯು ಓದುಗರಿಗೆ ತಲುಪುತ್ತದೆಯೇ ಎಂಬ ಅನುಮಾನ ಇರಲಿಲ್ಲ. ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ಪ್ರೇಮಾ ಕಾರಂತರು ತಮ್ಮ ಜೀವನಯಾನವನ್ನು ತಾವೇ ಅಕ್ಷರ ರೂಪಕ್ಕೆ ತಂದಿದ್ದಾರೆ. ತಮ್ಮ ಆತ್ಮಚರಿತ್ರೆಯನ್ನು ತಾವೇ ಅಕ್ಷರಕ್ಕೆ ಇಳಿಸಿದ ಮೊದಲ ರಂಗಕರ್ಮಿ ಇವರೇ ಇರಬಹುದು. ನಮ್ಮ ನಡುವೆ ಸುಳಿದಾಡಿದ ಹೆಣ್ಣುಮಗಳೊಬ್ಬಳು ತನ್ನ ಜೀವನವನ್ನು ತನ್ನ ಕಣ್ಣು, ತನ್ನ ಭಾಷೆಯ ಮೂಲಕವೇ ಬಿಚ್ಚಿಡುವ ಈ ಪ್ರಯತ್ನ ಮೆಚ್ಚುವಂತಹುದು.



ಪ್ರೇಮಾ ತಮ್ಮ ಕೃತಿಯನ್ನು ‘ಸೋಲಿಸಬೇಡ ಗೆಲಿಸಯ್ಯಿ’ ಎನ್ನುತ್ತಾರೆ. ಇಲ್ಲಿ ಕಾಣದ ಓದುಗ ದೇವರು ಹಾಗೂ ತಮ್ಮ ಅಭಿಮಾನಿ ಬಳಗದ ಎದುರು ಆರ್ತತೆಯ ವಿನಯವೊಂದನ್ನು ಸಾಧಿಸುತ್ತಾರೆ. ಆರ್ತತೆಯ ಮೊರೆಯನ್ನಿಟ್ಟು ತಮ್ಮ ಜೀವನದ ತೆರೆಯನ್ನು ಸರಿಸುವ ದಾರಿಯನ್ನು ಅವರು ಆತ್ಮಚರಿತ್ರೆಯ ಕಥನಕ್ಕೆ ಆಯ್ದುಕೊಳ್ಳುತ್ತಾರೆ. ಈ ಆರ್ತತೆಯೇ ಪುಸ್ತಕಕ್ಕೆ ಮುನ್ನುಡಿಯೂ ಹೌದು, ಜೀವನಚರಿತ್ರೆಯ ಸ್ಥಾಯಿಭಾವವೂ ಹೌದು.



ಬರವಣಿಗೆಯ ನಿಟ್ಟಿನಲ್ಲಿ ಪ್ರೇಮ ಅವರಿಗೆ ವಾಕ್ಯರಚನೆಯೇ ಪ್ರಧಾನ ತೊಡಕು. ವಿಷಯವೊಂದನ್ನು ಹೇಳುವಾಗಲೇ ಅವರಿಗೆ ಮತ್ತೊಂದು ವಿಷಯವನ್ನು ಹೇಳುವ ಧಾವಂತ ಹುಟ್ಟಿ, ಹೇಳುತ್ತಿದ್ದುದನ್ನು ಅವಸರದಿಂದ ಮುಗಿಸಿಬಿಡುತ್ತಾರೆ. ಹೀಗಾಗಿ ಅವರು ತಮ್ಮ ಜೀವನದ ಬಹುಮುಖ್ಯ ಘಟ್ಟವನ್ನು ಹೇಳುವಾಗಲೂ ಅದು ಓದುಗನಿಗೆ ಅನುಭವವಾಗಿ ದಕ್ಕುವುದಕ್ಕಿಂತ ವರದಿಯಂತೆ ತಲುಪುವುದೇ ಹೆಚ್ಚು. ಪ್ರಾಯಶಃ ಜೀವನಚರಿತ್ರೆಯ ಮೊದಲ ಆಕಾರ ಸಿದ್ಧಗೊಂಡ ನಂತರ ಅದನ್ನು ಒಂದಿಬ್ಬರಿಗೆ ಓದಿ, ಓದಿಸಿ, ಜರಡಿಯಾಡುವ ಮೂಲಕ ಜೊಳ್ಳನ್ನು ತೆಗೆದು ಕೆನೆಯನ್ನಿಡುವ ಕೆಲವು ಲೇಖಕರ ಅಭ್ಯಾಸ ಪ್ರೇಮಾ ಅವರಿಗಿಲ್ಲದೆ ಹೀಗಾಗಿರಬಹುದು. ಅಥವಾ ಅಂತಹದೊಂದು ಪ್ರಕ್ರಿಯೆ ಘಟಿಸುವ ಮುನ್ನ ಅವರು ರಂಗದಿಂದ ನಿಷ್ಕ್ರಮಿಸಿರಲೂಬಹುದು.



ಪ್ರೇಮಾ ತಮ್ಮ ಜೀವನವನ್ನು ಅನುಕ್ರಮವಾಗಿ ಕಾಣಿಸುವ ಬದಲಿಗೆ ಮನಸ್ಸು ನೀಡಿದ ಆದ್ಯತೆಯನ್ನು ಆಧರಿಸಿ ಜೀವನ ಕಥನವನ್ನು ರಚಿಸುತ್ತಾರೆ. ಇದೊಂದು ಜಾಣ ಆಯ್ಕೆ. ಸಾಮಾನ್ಯವಾಗಿ ವ್ಯಕ್ತಿಯ ಬಾಲ್ಯದಿಂದ ಆರಂಭವಾಗುವ ಜೀವನ ಚರಿತ್ರೆಗಳ ಆರಂಭಿಕ ಘಟ್ಟವು ಬಹಳಷ್ಟು ಓದುಗರಿಗೂ ಆಗಿರಬಹುದಾದ ಅನುಭವವಾಗಿರುತ್ತದೆ. ಹೀಗಾಗಿ ಮತ್ತೊಬ್ಬರ ಜೀವನ ಚರಿತ್ರೆಯ ಒಳಗೆ ಪ್ರವೇಶಿಸುವುದು ಸುಲಭ.





ಆದರೆ ಪ್ರೇಮಾ ತಮ್ಮ ಜೀವನವನ್ನು ಬಹುವಾಗಿ ಕಾಡಿದ ಮತ್ತು ಕಾರಂತ ದಂಪತಿಗಳ ಜೀವನದುದ್ದಕ್ಕೂ ನೆರಳಾಗಿ ಉಳಿದ ಪ್ರಕರಣದಿಂದ ಆರಂಭಿಸುತ್ತಾರೆ. ಬಿ.ವಿ.ಕಾರಂತರ ಜೀವನದ ಪ್ರಮುಖ ಘಟ್ಟವಾದ ಭೋಪಾಲ್ ಪ್ರಕರಣವನ್ನು ಹೇಳಲಾರಂಭಿಸುತ್ತಾರೆ. ತಮ್ಮ ಜೀವನದುದ್ದಕ್ಕೂ ತಾವು ಮಹಾನ್ ಪ್ರತಿಭಾವಂತನ ನೆರಳಾಗಿದ್ದುದು ಮತ್ತು ಅದರಿಂದಾಗಿ ವೈಯಕ್ತಿಕವಾಗಿ ತಮಗೆ ಸಿಗಬಹುದಾಗಿದ್ದ ಗೌರವಗಳು ದಕ್ಕಲಿಲ್ಲವೇನೋ ಎಂಬ ಅನುಮಾನ ಅವರಿಗಿತ್ತು. ಹೀಗಾಗಿ ಬಿ.ವಿ.ಕಾರಂತರ ಜೀವನದ ಪ್ರಧಾನ ಘಟನೆ ಅವರ ಪಾಲಿಗೂ ಪ್ರಧಾನ ಎನ್ನುವಂತೆ ಮೊದಲಿಗೆ ಅದೇ ಘಟನೆಯನ್ನು ವಿವರಿಸುತ್ತಾರಾದರೂ ಒಬ್ಬ ಹೆಣ್ಣಾಗಿ ಇಂತಹ ಪ್ರಸಂಗವೊಂದರಲ್ಲಿ ಆಕೆ ಅನುಭವಿಸಿದ ತವಕ ತಲ್ಲಣಗಳು ಇಲ್ಲಿ ತೆರೆದುಕೊಳ್ಳುವುದಿಲ್ಲ. ಬದಲಿಗೆ ಆ ಪ್ರಕರಣದಲ್ಲಿ ಪ್ರೇಮಾ ಅವರು ಇಟ್ಟ ಹೆಜ್ಜೆ ಮತ್ತು ತೆಗೆದುಕೊಂಡ ತೀರ್ಮಾನಗಳು ಮಾತ್ರ ಒಣವಿವರಗಳಿಂದ ತಿಳಿಯುತ್ತವೆ. ತೀರ್ಮಾನಗಳ ಹಿಂದಿನ ಕಾರಣಗಳನ್ನು ಅವರು ಬಿಡಿಸಿಡುವುದಿಲ್ಲ. ಸಣ್ಣ ವಿವರಗಳ ಮೂಲಕ ಅವರು ಪಟ್ಟ ಶ್ರಮ ತಿಳಿಯುತ್ತದೆ.



ಒಂದು ಸಂದರ್ಭದಲ್ಲಿ- ಪತ್ರಕರ್ತರು ಪ್ರೇಮಾ ಅವರನ್ನು ಘಾಸಿಗೊಳಿಸುವಂತೆ ಪ್ರಶ್ನಿಸುವಾಗ ಅವರು ನೀಡುವ ಉತ್ತರದ ಸಣ್ಣ ವಿವರ, ಈ ಪ್ರಕರಣದ ನ್ಯಾಯಾಧೀಶರಿಗೆ ಸ್ವತಃ ಪ್ರೇಮಾ ಅವರೇ ಬರೆಯುವ ಪತ್ರದ ವಿವರ, ಮನೆಗೆ ತನಿಖೆಗೆಂದು ಬಂದ ಅಧಿಕಾರಿಗಳನ್ನು ಆಕೆ ಎದುರುಗೊಂಡ ರೀತಿ, ಇವುಗಳಲ್ಲಿ ಪ್ರೇಮಾ ಅವರೊಳಗಿದ್ದ ಹೋರಾಟಗಾರ್ತಿಯ ಸುಳಿವು ಕಾಣಿಸುತ್ತದೆ. ಪ್ರಾಯಶಃ ಇಂತಹ ವಿವರಗಳ ಮೂಲಕ ಅವರು ತಮ್ಮ ಜೀವನವನ್ನು ಕಂಡಿದ್ದರೆ ಈ ಜೀವನ ಚರಿತ್ರೆಯ ಆಯಾಮವೇ ಬದಲಾಗುತ್ತಿತ್ತು.



ಮದುವೆ, ಬಾಲ್ಯ, ಓದು, ಕುಟುಂಬದ ಬಡತನದ ವಿವರ- ಹೀಗೆ, ಜೀವನದ ಅನುಕ್ರಮಕ್ಕೆ ಬದಲಾಗಿ ನೆನಪು ಯಾವುದನ್ನು ಹೆಕ್ಕಿಕೊಟ್ಟಿತೋ ಅವನ್ನೆಲ್ಲಾ ಬಿಚ್ಚಿಡುತ್ತಾರೆ. ಇದು ಹೊಸ ಪ್ರಯೋಗ ಅಲ್ಲ. ಆದರೆ, ಪ್ರೇಮಾ ಅವರ ಈ ಪ್ರಯೋಗವು ಅವರ ವ್ಯಕ್ತಿತ್ವವನ್ನೇ ಬಿಚ್ಚಿಡುತ್ತದೆ ಎನ್ನಬಹುದು. ವಿಶೇಷವಾಗಿ ಕಡೆಯ ಭಾಗದಲ್ಲಿ, ಆಕೆ ತನ್ನ ಗಂಡನನ್ನು ಜವರಾಯನಿಂದ ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಬರುತ್ತವೆ.



ವೆಂಟಿಲೇಟರ್‌ನ ಸಹಾಯದಿಂದ ಬದುಕಿದ್ದ ಕಾರಂತರನ್ನು ಅದರಿಂದ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಾವು ಅನುಭವಿಸಿದ ಆರ್ಥಿಕ ಸಂಕಷ್ಟವನ್ನು ವಿವರಿಸುತ್ತಾರೆ. ಕುಡಿತದ ಚಟವಿದ್ದ ಗಂಡನನ್ನು ಸಂಭಾಳಿಸುವಲ್ಲಿ ತಮಗೆ ಎದುರಾದ ಸಮಸ್ಯೆಗಳನ್ನು ಚಿತ್ರಿಸುತ್ತಾರೆ. ವರದಿಯಂತೆ ಒದಗುವ ವಿವರಗಳ ಆಚೆಗೆ ವೆಂಟಿಲೇಟರ್ ತೆಗೆಯುವ ನಿರ್ಧಾರ ಯಾವುದೇ ಮಡದಿಗೆ ಕಷ್ಟದ್ದು (ಆ ವಿವರವನ್ನು ಆಕೆ ನೀಡುವಾಗ ಅದೆಲ್ಲವನ್ನೂ ಸ್ವತಃ ಕಂಡಿದ್ದ ಈ ಲೇಖಕನ ಕಣ್ಣುತುಂಬಿದ್ದಂತೂ ಸತ್ಯ).



1960ರ ದಶಕದಿಂದ 2010ರ ದಶಕದವರೆಗೆ ನಮ್ಮ ರಂಗಭೂಮಿ- ಸಿನಿಮಾ ಲೋಕ- ಸಾಂಸ್ಕೃತಿಕ ಲೋಕದಲ್ಲಿ ಬದುಕಿದ ಜೀವವೊಂದು ತನ್ನ ಬದುಕಿನ ಹಾದಿಯ ಜೊತೆಗೆ ಆಯಾ ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯನ್ನು ಸಹ ಒಂದೆಡೆಗೆ ಸಂಗ್ರಹಿಸುವ ಅವಕಾಶ ಇದಾಗಿತ್ತು. ಅಂಥ ಸವಾಲಿಗೆ ಕೈಹಾಕದ ಪ್ರೇಮಾ ಅವರು ತಾವು ಜೀವನದುದ್ದಕ್ಕೂ ಎದುರಿಸಿದ ಸವಾಲು-ಸಂಕಷ್ಟಗಳನ್ನಷ್ಟೇ ಬರೆದಿದ್ದಾರೆ. ಹಾಗಾಗಿಯೇ ಈ ಪುಸ್ತಕಕ್ಕೆ ‘ಸೋಲಿಸಬೇಡ ಗೆಲಿಸಯ್ಯ’ ಎಂಬ ಹೆಸರನ್ನೂ ಇರಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.