ಬುಧವಾರ, ಸೆಪ್ಟೆಂಬರ್ 22, 2021
23 °C

ಜೀವನವೇ ಪಾಠ ಶಾಲೆ...

ಪೃಥ್ವಿರಾಜ್ ಎಂ.ಎಚ್ Updated:

ಅಕ್ಷರ ಗಾತ್ರ : | |

ರಾಜ್ ಅಯ್ಯರ್ ತಂಡ

ನಮ್ಮ ಜೀವನದಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳು ಕೆಲವೊಮ್ಮೆ ನಮ್ಮ ಬದುಕಿನ ಚಿತ್ರಣವನ್ನೇ ಬದಲಿಸಿ ಬಿಡುತ್ತವೆ. ಇಂತಹ ಕಾಕತಾಳೀಯ ಘಟನೆಗೆ ಯುವ ಸಾಧಕ ರಾಜ್‌ ಅಯ್ಯರ್‌ ಸಾಕ್ಷಿಯಾಗಿದ್ದಾರೆ.ದೆಹಲಿಯ ರಾಜ್‌ ಅಯ್ಯರ್‌ ಮೂಲತಃ ಹೊಟೇಲ್‌ ಉದ್ಯಮಿ. ಒಮ್ಮೆ ತಮ್ಮ ಹಳೆಯ ಕಾರನ್ನು ಮಾರಾಟಕ್ಕೆ ಇಟ್ಟಿದ್ದರು. ಆ ಕಾರನ್ನು ಖರೀದಿಸಲು ಒಬ್ಬ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಬಂದಿದ್ದರು. ಅವರು ಒಂದು ಉಂಗುರು ಧರಿಸಿದ್ದರು. ಅದು ಸಿಂಹದ ಮರಿಯ 3ಡಿ ಉಂಗುರವಾಗಿತ್ತು.  ಆ ಉಂಗುರ ರಾಜ್‌ಗೆ ತುಂಬಾ ಇಷ್ಟವಾಗಿತ್ತು. ನೀವು ಈ ಉಂಗುರವನ್ನು ಎಲ್ಲಿ ಖರೀದಿಸಿದಿರಿ ಎಂದು ರಾಜ್‌ ಕೇಳಿದರು. ಅದಕ್ಕೆ ಅವರು  ನನ್ನ ಸಹೋದರ ಬೆಲ್ಜಿಯಂ ದೇಶದಿಂದ ಕಳುಹಿಸಿದ್ದಾರೆ ಎಂದು ಹೇಳಿದರು.ಇದು ನಡೆದ ಘಟನೆ.  ಆ ಉಂಗುರ ರಾಜ್‌ಗೆ ತುಂಬಾ ಇಷ್ಟವಾಗಿದ್ದರಿಂದ ಅದನ್ನು ಖರೀದಿಸಲು ಶತ ಪ್ರಯತ್ನ ಮಾಡುತ್ತಾರೆ. ಆದರೆ ಆ ಮಾದರಿಯ ಉಂಗುರ ಆನ್‌ಲೈನ್‌ ಮಾರುಕಟ್ಟೆ ಸೇರಿದಂತೆ ಎಲ್ಲಿಯೂ ಸಿಗುವುದಿಲ್ಲ. ಇಂತಹ ಅಪರೂಪದ ವಸ್ತುಗಳು ಸುಲಭವಾಗಿ ಗ್ರಾಹಕರಿಗೆ ದೊರೆಯಬೇಕು, ಯಾರೂ ನನ್ನಂತೆ ನಿರಾಶರಾಗಬಾರದು ಎಂಬ ಕಾರಣದಿಂದ ಗೆಳೆಯರೊಂದಿಗೆ ಸೇರಿ ಅಪರೂಪದ ವಸ್ತುಗಳ ಸಂಗ್ರಹವಿರುವ ಇ–ಕಾಮರ್ಸ್‌ ಕಂಪೆನಿಯನ್ನು ರಾಜ್‌ ಆರಂಭಿಸುತ್ತಾರೆ. ಈ ಕಂಪೆನಿಯ ಹೆಸರು ಐಕಸ್ಟಮ್‌ಮೇಡ್‌ಇಟ್‌ (icustommadeit).ಇದು ಆನ್‌ಲೈನ್‌ ಶಾಪಿಂಗ್‌ ಕಂಪೆನಿ. ಇಲ್ಲಿ ಎಲ್ಲ ರೀತಿಯ ಅಪರೂಪದ ವಸ್ತುಗಳು ಲಭ್ಯ. ಇಲ್ಲಿ ಅಪರೂಪದ ವಸ್ತುಗಳನ್ನು ಹೊಂದಿರುವವರು ಮತ್ತು ಅವುಗಳಗಳನ್ನು ಖರೀದಿಸುವವರು ಐಕಸ್ಟಮ್‌ಮೇಡ್‌ಇಟ್‌ನಲ್ಲಿ ಖಾತೆ ಹೊಂದಿರಬೇಕು. ಪ್ರಸ್ತುತ 8000 ವಸ್ತುಗಳು ಐಕಸ್ಟಮ್‌ಮೇಡ್‌ಇಟ್‌ ಸೈಟ್‌ನಲ್ಲಿ ಲಭ್ಯವಿದ್ದು, ಪ್ರತಿ ನಿತ್ಯ 300ಕ್ಕೂ ಹೆಚ್ಚು ವಸ್ತುಗಳು ಮಾರಾಟವಾಗುತ್ತಿವೆ ಎನ್ನುತ್ತಾರೆ ರಾಜ್‌ ಅಯ್ಯರ್‌. ಶೂನ್ಯ ಬಂಡವಾಳದ ಮೂಲಕ ಇಂದು ಪ್ರತಿ ನಿತ್ಯ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

http://www.icustommadeit.comಯೋಗೇಶ್‌ ಮತ್ತು ತಂಡ

ತಂತ್ರಜ್ಞಾನದ ಹೂ ಅರಳಬೇಕಾದರೆ ಶಿಕ್ಷಣದ ಬೇರು ಗಟ್ಟಿಯಾಗಿರಬೇಕು. ಆದರೆ ಭಾರತದಲ್ಲಿ ಶಿಕ್ಷಣ ಕ್ಷೇತ್ರವೇ ತಂತ್ರಜ್ಞಾನ ಸ್ಪರ್ಶ ಇಲ್ಲದೆ ಸೊರಗುತ್ತಿದೆ. ಇಲ್ಲಿ ಆನ್‌ಲೈನ್‌ ಮತ್ತು ಕಂಪ್ಯೂಟರ್‌ ಶಿಕ್ಷಣವೇ ತಂತ್ರಜ್ಞಾನ ಎಂದು ಎಷ್ಟೋ ಜನರು ತಿಳಿದುಕೊಂಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ನಡುವೆ ತಂತ್ರಜ್ಞಾನವನ್ನು ಸಮನ್ವಯಗೊಳಿಸಿದಾಗ ಮಾತ್ರ  ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬಹುದು ಎನ್ನುತ್ತಾರೆ ಯುವ ಸಾಧಕ ಯೋಗೇಶ್‌ ಅಗರ್‌ವಾಲ್‌.

ಇವರು ಮೂಲತಃ ಮುಂಬೈನವರು. ಎಂಜಿನಿಯರಿಂಗ್‌ನಲ್ಲಿ ಐಟಿ ಪದವಿ ಪಡೆದು ಹತ್ತಾರು ವರ್ಷ ವಿವಿಧ ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆ ಅನುಭವ ಅವರನ್ನು ಸಾಧಕನನ್ನಾಗಿ ರೂಪಿಸಿದೆ. ಯೋಗೇಶ್‌ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಗೆಳೆಯರೊಂದಿಗೆ ಸೇರಿ ಆ್ಯಪ್‌ಲೇನ್‌ ಎಂಬ ಸಾಫ್ಟ್‌ವೇರ್‌ ಕಂಪೆನಿಯನ್ನು ಎರಡು ಕೋಟಿ ರೂಪಾಯಿ ಬಂಡವಾಳದೊಂದಿಗೆ ಹುಟ್ಟುಹಾಕಿದರು.ಇದು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆಗೆ ನೆರವಾಗುವ ನಿಟ್ಟಿನಲ್ಲಿ ವಿವಿಧ ರೀತಿಯ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇತ್ತೀಚಿನ ಸ್ಕೂಲ್‌ ಬಸ್‌ ಟ್ರ್ಯಾಕ್‌ ಆ್ಯಪ್‌ ಸಾಕಷ್ಟು ಜನಪ್ರಿಯಗೊಂಡಿದೆ. ಈ ಕಂಪೆನಿಯ ಅಪ್ಲಿಕೇಶನ್‌ಗಳನ್ನು ದೇಶದ ಪ್ರತಿಷ್ಠಿತ ಮೂನ್ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳು ಬಳಸುತ್ತಿವೆ. ಮಕ್ಕಳ ಹಾಜರಾತಿ ಮತ್ತು ಶೈಕ್ಷಣಿಕ ಪ್ರಗತಿಯನ್ನು ಪೋಷಕರು ಕುಳಿತಲ್ಲೇ ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ವೀಕ್ಷಿಸಬಹುದು. ಹಾಗೇ ಬಸ್‌ ಟ್ರ್ಯಾಕರ್‌ ಆ್ಯಪ್‌ ಮೂಲಕ  ಶಾಲಾ ವಾಹನ ಎಲ್ಲಿ ಬರುತ್ತಿದೆ ಎಂಬುದನ್ನು ಕಂಡುಕೊಳ್ಳಬಹುದು ಎನ್ನುತ್ತಾರೆ ಆ್ಯಪ್‌ಲೇನ್‌ ರೂವಾರಿ ಯೋಗೇಶ್‌.ಪ್ರಸ್ತುತ ಕಂಪೆನಿಯ ವಹಿವಾಟು ವಾರ್ಷಿಕ 40 ಲಕ್ಷ ರೂಪಾಯಿ. ಇದನ್ನು 5 ಕೋಟಿ ರೂಪಾಯಿಗೆ ವಿಸ್ತರಿಸುವ ಗುರಿ ಹೊಂದಿದ್ದಾರೆ. ಆರಂಭದಲ್ಲಿ ವಿವಿಧ ಕಂಪೆನಿಗಳ ಪೈಪೋಟಿ ಇದ್ದುದರಿಂದ ನಮ್ಮ ಆ್ಯಪ್‌ಗಳಿಗೆ ಬೇಡಿಕೆ ಇರಲಿಲ್ಲ. ಬಸ್‌್ ಟ್ರ್ಯಾಕರ್‌ ಆ್ಯಪ್‌ನಿಂದ ನಾವು ದೇಶದ ಗಮನ ಸೆಳೆದಿದ್ದೇವೆ ಎನ್ನುತ್ತಾರೆ ಯೋಗೇಶ್‌.

http://www.applane.comಡ್ರೈವ್‌ಕೂಲ್‌ ತಂಡ

ಡ್ರೈವ್‌ಕೂಲ್‌ ಕಂಪೆನಿಯ ರೂವಾರಿ ಮಹೇಶ್‌ ಗಿದ್ವಾನಿ. ಐಟಿ ವೃತ್ತಿಪರರಾಗಿರುವ ಮಹೇಶ್‌ 2009ರಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿದರು. ಇಲ್ಲಿ ಒಂದೆರಡು ವರ್ಷ ಡೆಲ್‌ ಮತ್ತು ಪೆರೊಟ್‌ ಸಿಸ್ಟಮ್‌ ಕಂಪೆನಿಗಳಲ್ಲಿ ಕೆಲಸ ಮಾಡಿದರು. ಬಳಿಕ ಸ್ವಂತವಾಗಿ ಉದ್ಯಮ ಅಥವಾ ಕಂಪೆನಿ ಆರಂಭಿಸುವ ಯೋಚನೆ ಮಾಡಿದರು. ಮುಂದೆ ಹುಟ್ಟಿಕೊಂಡಿದ್ದೇ ‘ಡ್ರೈವ್‌ಕೂಲ್‌‘ ಕಂಪೆನಿ.ಇದು ಚಾಲನಾ ತರಬೇತಿ ಮತ್ತು ಪರವಾನಗಿ ನೀಡುವ ಡಿಜಿಟಲ್‌ ಕಂಪೆನಿ. ಇಲ್ಲಿ ಎಲ್ಲವು ಆನ್‌ಲೈನ್‌ ಮೂಲಕ ನಡೆಯುತ್ತದೆ ಎನ್ನುತ್ತಾರೆ ಮಹೇಶ್‌. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಈ ಕಂಪೆನಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ನೂರಕ್ಕೂ ಹೆಚ್ಚು ಚಾಲನಾ ತರಬೇತಿ ಶಾಲೆಗಳಿವೆ. 400ಕ್ಕೂ ಹೆಚ್ಚು ವಾಹನಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತಿ ದಿನ 1500 ಜನರು ಚಾಲನಾ ತರಬೇತಿ ಪಡೆಯುತ್ತಿದ್ದಾರೆ.ಬೆಂಗಳೂರು ನಗರದಲ್ಲಿ ನೂರಾರು ಡ್ರೈವಿಂಗ್‌ ಸ್ಕೂಲ್‌ಗಳಿವೆ. ಆದರೆ ಡಿಜಿಟಲ್‌ ಮತ್ತು ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಆರಂಭವಾಗಿರುವುದು ಡ್ರೈವ್‌ಕೂಲ್‌ ಮಾತ್ರ. ತರಬೇತಿ ಪಡೆಯುವವರಿಗೆ ಆರ್ಥಿಕ ಹೊರೆಯಾಗದೆ, ಸರಿಯಾದ ಸಮಯಕ್ಕೆ  ಗುಣಮಟ್ಟದ ತರಬೇತಿ ನೀಡುವುದು ನಮ್ಮ ಆದ್ಯತೆ ಎನ್ನುತ್ತಾರೆ ಮಹೇಶ್‌. ಭಾರತದಲ್ಲಿ ವಾಹನ ಉತ್ಪಾದನಾ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ವಾಹನ ಖರೀದಿಸುವವರು ಕಡ್ಡಾಯವಾಗಿ ಚಾಲನಾ ತರಬೇತಿ ಮತ್ತು ಪರವಾನಿಗೆ ಪಡೆಯಲೇ ಬೇಕು. ಇವರೇ ನಮ್ಮ  ಪ್ರಮುಖ ಗ್ರಾಹಕರು ಎಂಬುದು ಮಹೇಶ್ ಅಭಿಮತ.

ಒಂದು ಕಂಪೆನಿ ಅಥವಾ ಉದ್ಯಮ ಆರಂಭಿಸುವ ಮುನ್ನ ಭವಿಷ್ಯವನ್ನು ಯೋಚಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ 16 ವರ್ಷ ತುಂಬಿದ ನಂತರ ಡ್ರೈವಿಂಗ್‌ ಕಲಿಯಲೇಬೇಕು! ನಮ್ಮ ಬಳಿ ಬರಲೇಬೇಕು! ಎಂದು ಮಹೇಶ್‌ ವ್ಯಾವಹಾರಿಕವಾಗಿ ಮಾತನಾಡುತ್ತಾರೆ.

http://www.drivekool.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.