ಭಾನುವಾರ, ಫೆಬ್ರವರಿ 28, 2021
31 °C
ಅರಿವು ಹರಿವು

ಜೀವನಾಡಿ ಸೂಜಿ

ಸೂರ್ಯ Updated:

ಅಕ್ಷರ ಗಾತ್ರ : | |

ಜೀವನಾಡಿ ಸೂಜಿ

ಸೂಜಿ! ಕೆಲವೇ ಕೆಲವು ಇಂಚು ಉದ್ದ ಇರುವ, ಕೈಯಲ್ಲಿ ಸರಿಯಾಗಿ ಹಿಡಿದುಕೊಳ್ಳಲೂ ಪರದಾಡಬೇಕಾದ ಸೂಜಿಯನ್ನು ಅದೇನು ಮಹಾ ವಸ್ತುವೇ? ಎಂದು  ಅವಗಣನೆ ಮಾಡುವಂತಿಲ್ಲ. ಇದು ಇಲ್ಲದಿದ್ದರೆ ನಮ್ಮ ಜೀವನವೇ ಸಾಗದು. ಜಗತ್ತನ್ನು ಬದಲಾಯಿಸಿದ ಮನುಕುಲದ ಆವಿಷ್ಕಾರಗಳಲ್ಲಿ ಇದೂ ಒಂದು ಎಂದರೆ ಉತ್ಪ್ರೇಕ್ಷೆ ಅಲ್ಲ.‌

ಅಶನ, ವಸನ, ವಸತಿ – ಮನುಕುಲಕ್ಕೆ ಬದುಕಲು ಬೇಕಾದ ಮೂರು ಮೂಲಭೂತ ಅಂಶಗಳು. ಎರಡನೇ ಅಂಶ ವಸನಕ್ಕೂ (ವಸ್ತ್ರ) ಸೂಜಿಗೂ ಸಂಬಂಧವಿದೆ. ಮೈಮುಚ್ಚಿಕೊಳ್ಳಲು ಬಳಸುವ ವಸ್ತ್ರವನ್ನು ನಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಹೊಲಿಯುವ ಕೆಲಸವನ್ನು ಸೂಜಿ ಮಾಡುತ್ತದೆ.ಬಟ್ಟೆ ಹೊಲಿಯಲು ಈಗ ಯಂತ್ರಗಳು ಬಂದಿರಬಹುದು. ಆದರೂ ಸೂಜಿಯ ಬಳಕೆ ಇನ್ನೂ ಚಾಲ್ತಿಯಲ್ಲಿದೆ. ಸೂಜಿ ಇಲ್ಲದ ಮನೆಯನ್ನು ಹುಡುಕಿ ಕೊಡಲು ಸಾಧ್ಯವಿಲ್ಲ. ನಿರ್ಗತಿಕರ ಪಾಲಿಗೆ ಈಗಲೂ ಇದು ಹೊಲಿಯುವ ಯಂತ್ರವೇ. ಈ ಸೂಜಿಯ ಇತಿಹಾಸ ದೊಡ್ಡದು.61 ಸಾವಿರ ವರ್ಷಗಳ ಹಿಂದೆಯೇ ಇದು ಬಳಕೆಯಲ್ಲಿತ್ತು. ದಕ್ಷಿಣ ಆಫ್ರಿಕಾದ ಸಿಬುಡು ಗುಹೆಯಲ್ಲಿ ಎಲುಬಿನಿಂದ ಮಾಡಿದ ಸೂಜಿಗಳು ಪತ್ತೆಯಾಗಿವೆ. ಸ್ವೀಡನ್‌ನ ಒಲ್ಯಾಂಡ್‌ ದ್ವೀಪದಲ್ಲಿ ಉತ್ಖನನ ನಡೆಸಿದ ಸಂದರ್ಭದಲ್ಲಿ  ಎಲುಬಿನ ಸೂಜಿಗಳನ್ನು ಇಡುತ್ತಿದ್ದ ಕರಡಿಗೆಗಳು ಪತ್ತೆಯಾಗಿದ್ದವು. 30 ಸಹಸ್ರ ವರ್ಷಗಳ ಹಿಂದೆ ನೆಲೆಸಿದ್ದ ಮಾನವರು ಆನೆಯ ದಂತದಿಂದ ಮಾಡಿದ ಸೂಜಿಗಳನ್ನು ಬಳಸುತ್ತಿದ್ದರು ಎಂಬುದಕ್ಕೆ  ರಷ್ಯಾದ ಕೊತ್ಸೆಂಕಿ ಪ್ರದೇಶದಲ್ಲಿ ಪುರಾವೆಗಳು ಸಿಕ್ಕಿವೆ.ಅರಿಗ್ನೇಷಿಯನ್‌ ಸಂಸ್ಕೃತಿಯಲ್ಲೂ (ಕ್ರಿ.ಪೂ 38,000–ಕ್ರಿ.ಪೂ 29,000) ಸೂಜಿ ಚಾಲ್ತಿಯಲ್ಲಿತ್ತು. ಆ ಕಾಲದ ಜನರು ಮರ, ದಂತ, ಜಿಂಕೆ ಕೊಂಬು ಮತ್ತು ಎಲುಬಿನಿಂದ ಸೂಜಿಗಳನ್ನು ಮಾಡುತ್ತಿದ್ದರು. ಸೂಜಿಯ ಕಡೆ ಭಾಗದಲ್ಲಿ ರಂಧ್ರ ಇರುತ್ತಿರಲಿಲ್ಲ. ಆ ಜಾಗವನ್ನು ಸೀಳಲಾಗುತ್ತಿತ್ತು.  ಚರ್ಮ ಮತ್ತು ತುಪ್ಪಳಗಳನ್ನು ಹೊಲಿಯಲು ಈ ಸೂಜಿಗಳನ್ನು ಬಳಸಲಾಗುತ್ತಿತ್ತು.ಅಮೆರಿಕದ ಮೂಲ ನಿವಾಸಿಗಳು ನೈಸರ್ಗಿಕವಾಗಿ ಲಭ್ಯವಿರುತ್ತಿದ್ದ ವಸ್ತುಗಳನ್ನೇ ಸೂಜಿ ರೀತಿಯಲ್ಲಿ ಉಪಯೋಗಿಸು ತ್ತಿದ್ದರಂತೆ. ಇತಿಹಾಸ ತಜ್ಞರು ಇದಕ್ಕೆ ಭೂತಾಳೆ ಗಿಡಗಳ ಉದಾಹರಣೆ ಕೊಡುತ್ತಾರೆ. ಈ ಗಿಡದ ಎಲೆಯ ಚೂಪಾದ ತುದಿಯನ್ನು ಸೂಜಿಯಂತೆ ಬಳಸಿದರೆ, ಎಲೆಯಲ್ಲಿನ ನಾರುಗಳನ್ನು ನೂಲಿನಂತೆ ಬಳಸುತ್ತಿದ್ದರು ಎಂದು ಅವರು ಹೇಳುತ್ತಾರೆ. ಇವರು ಮುಳ್ಳು ಹಂದಿಯ ಮುಳ್ಳುಗಳನ್ನು ಸೂಜಿಯಾಗಿ ಬಳಸಿದ ಉದಾಹರಣೆಗಳೂ ಉಂಟು.

ಕ್ರಿ.ಪೂ 17,500ದ ವೇಳೆಗೆ ರಂಧ್ರಗಳಿರುವ ಸೂಜಿಗಳು ತಯಾರಾದವು. ತಾಮ್ರ, ಕಂಚು ಹಿತ್ತಾಳೆಯಂತಹ ಲೋಹದ ಬಳಕೆ ಮಹತ್ವವನ್ನು ಮಾನವ ಕಂಡುಕೊಂಡಾಗಿನಿಂದ ಲೋಹದಿಂದ ಮಾಡಿದ ಸೂಜಿಗಳೂ ಜಗತ್ತಿಗೆ ಪರಿಚಿತವಾದವು. ಮೊದಲ ತಾಮ್ರದ ಸೂಜಿ ಕ್ರಿ.ಪೂ 7,000ದಲ್ಲಿ ಅರ್ಮೇನಿಯಾದಲ್ಲಿ  ತಯಾರಾಯಿತು. ನಾಲ್ಕೂವರೆ ಸಾವಿರ ವರ್ಷಗಳ ಹಿಂದೆ ಕಂಚಿನ ಸೂಜಿಯೂ ಬಳಕೆಗೆ ಬಂತು. ಚಿನ್ನ, ಬೆಳ್ಳಿ, ಕಬ್ಬಿಣ ಸೇರಿದಂತೆ ವಿವಿಧ ಲೋಹಗಳಿಂದ ಸೂಜಿ ತಯಾರಿಕೆಯೂ  ಆರಂಭವಾಯಿತು.

 

ಹತ್ತನೇ ಶತಮಾನದಲ್ಲಿ ಚೀನಾದಲ್ಲಿ ಅತ್ಯುನ್ನತ ಗುಣಮಟ್ಟದ ಉಕ್ಕಿನ ತಯಾರಿಕೆ ತಂತ್ರಜ್ಞಾನ ಅಭಿವೃದ್ಧಿಯಾಗುವುದರೊಂದಿಗೆ ಉಕ್ಕಿನ ಸೂಜಿಯ ತಯಾರಿಕೆಗೆ ವೇದಿಕೆ ಸೃಷ್ಟಿಯಾಯಿತು. ಉಕ್ಕು ತಯಾರಿಕಾ ತಂತ್ರಜ್ಞಾನ ಯುರೋಪ್‌ ಸೇರಿದಂತೆ ಜಗತ್ತಿನ ಇತರ ರಾಷ್ಟ್ರಗಳಿಗೂ ಹಬ್ಬಿತು. ಆದರೆ, ಉಕ್ಕಿನಿಂದ ಅತ್ಯುತ್ತಮ ಗುಣಮಟ್ಟದ ಸೂಜಿ ರೂಪಿಸಲು 17ನೇ ಶತಮಾನದವರೆಗೆ ಕಾಯಬೇಕಾಯಿತು.1730ರ ದಶಕದಲ್ಲಿ ಜರ್ಮನಿಯಲ್ಲಿ ಮೊದಲ ಸೂಜಿ ತಯಾರಿಸುವ ಕಾರ್ಖಾನೆ ಆರಂಭವಾಯಿತು. 1755ರಲ್ಲಿ ಹೊಲಿಯುವ ಯಂತ್ರದಲ್ಲಿ ಬಳಸಬಹುದಾದ ಸೂಜಿಯನ್ನು ಜರ್ಮನಿ ಮೂಲದ ಬ್ರಿಟನ್ನಿನ ಪ್ರಜೆ ಚಾರ್ಲ್ಸ್‌ ಫ್ರೆಡ್ರಿಕ್‌ ವಿಸೆಂಥಾಲ್‌ ಎಂಬುವವರು ತಯಾರಿಸಿ ಪೇಟೆಂಟ್‌ ಪಡೆದರು. ನಂತರ ಸಂಭವಿಸಿದ ಕೈಗಾರಿಕಾ ಕ್ರಾಂತಿಯು ಹೊಲಿಗೆ ಯಂತ್ರದ ಆವಿಷ್ಕಾರಕ್ಕೆ ಮುನ್ನುಡಿ ಬರೆಯಿತು.ಈಗ ವಿವಿಧ ಉದ್ದೇಶಕ್ಕೆ (ಬಟ್ಟೆ, ಚರ್ಮದ ವಸ್ತುಗಳನ್ನು ಹೊಲಿಯುವುದಕ್ಕೆ, ಕಸೂತಿ ಕೆಲಸಕ್ಕೆ, ಹಾಸಿಗೆಗಳ ತಯಾರಿಕೆ ಇತ್ಯಾದಿ) ಅನುಗುಣವಾಗಿ ವಿವಿಧ ಗಾತ್ರದ, ಉದ್ದದ ಸೂಜಿಗಳು ಮಾರುಕಟ್ಟೆಯಲ್ಲಿವೆ. ಪುಟ್ಟದಾದ ಸೂಜಿ ಇಲ್ಲದಿದ್ದರೆ, ಈ ಮುಂದುವರಿದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅದು ತನ್ನ ಅಸ್ತಿತ್ವವನ್ನು ಹಾಗೆಯೇ ಉಳಿಸಿಕೊಂಡಿದೆ.ವೈದ್ಯಕೀಯ ಕ್ಷೇತ್ರದಲ್ಲೂ...

ಸೂಜಿಯು ವೈದ್ಯಕೀಯ ಕ್ಷೇತ್ರದಲ್ಲೂ ಬಳಕೆಯಲ್ಲಿದೆ. ರೋಗಿಗೆ ಶಸ್ತ್ರಕ್ರಿಯೆ ನಡೆಸಿದ ನಂತರ ಕೊರೆದ ದೇಹದ ಭಾಗವನ್ನು ಹೊಲಿಯಲು ವೈದ್ಯರು ಬಳಸುವುದು ಸೂಜಿಯನ್ನೇ. ಆದರೆ ಅದರ ಆಕಾರ ಸಾಮಾನ್ಯ ಸೂಜಿಗಿಂತ ಭಿನ್ನ. ಚುಚ್ಚುಮದ್ದು ನೀಡಲು ಬಳಸುವುದೂ ಸೂಜಿಯನ್ನೇ. ಸಿರಿಂಜ್‌ಗೆ ಅಳವಡಿಸುವ ಈ ಸೂಜಿ ಟೊಳ್ಳಾಗಿರುತ್ತದೆ. ಇವುಗಳ ಬಳಕೆ 17ನೇ ಶತಮಾನದಲ್ಲೇ ಆರಂಭವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.