ಬುಧವಾರ, ನವೆಂಬರ್ 13, 2019
25 °C
ಇಡಬ್ಲ್ಯೂಎಸ್ ವಸತಿ ಸಮುಚ್ಚಯದಿಂದ ತೆರವುಗೊಂಡ ನಿವಾಸಿಗಳು

ಜೀವನೋಪಾಯ, ಮಕ್ಕಳ ಕಲಿಕೆಗೆ ತೊಡಕು

Published:
Updated:

ಬೆಂಗಳೂರು: ಈಜಿಪುರ ಬಳಿಯ ಇಡಬ್ಲ್ಯೂಎಸ್ ವಸತಿ ಸಮುಚ್ಚಯದಲ್ಲಿದ್ದ ಶೆಡ್‌ಗಳನ್ನು ಬಿಬಿಎಂಪಿ ತೆರವುಗೊಳಿಸಿದ ನಂತರ ಇಲ್ಲಿದ್ದ ಮೂಲ ನಿವಾಸಿಗಳು ನಗರದ ವಿವಿಧ ಭಾಗಗಳಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದಾರೆ. ಕೆಲವರು ಬೇರೆ ಕೊಳೆಗೇರಿಗಳಿಗೆ ಸೇರಿಕೊಂಡಿದ್ದಾರೆ. ಇದರಿಂದಾಗಿ ಸಮೀಪದ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು, ಜೀವನೋಪಾಯಕ್ಕೆ ಇಲ್ಲೇ ಕೆಲಸ ಮಾಡಿಕೊಂಡಿದ್ದವರಿಗೆ ತೀವ್ರ ತೊಂದರೆಯಾಗಿದೆ.`ಶೆಡ್ ತೆರವುಗೊಳಿಸಿದ ಕೆಲವರು ಸಮೀಪದ ಎಲ್.ಆರ್.ನಗರ (ಜೋಪಡಿ), ಸೊನ್ನೇನಹಳ್ಳಿ, ಈಜಿಪುರ, ರೋಜ್‌ಗಾರ್ಡನ್, ಅಂಬೇಡ್ಕರ್‌ನಗರ, ವಿವೇಕನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರೆ, ಮತ್ತೆ ಕೆಲವರು ಯಲಹಂಕ, ಪೀಣ್ಯ, ದೇವನಹಳ್ಳಿ ಸೇರಿದಂತೆ ನಗರದ ಹೊರವಲಯಕ್ಕೂ ಹೋಗಿದ್ದಾರೆ. ಒಂದೇ ಕುಟುಂಬದ ಸದಸ್ಯರಂತೆ ಇಲ್ಲಿ ಇದ್ದವರು ಈಗ ದೂರಾಗಿದ್ದಾರೆ. ಶೆಡ್ ತೆರವುಗೊಳಿಸಿದ್ದರಿಂದ ಶಾಲಾ ಮಕ್ಕಳು, ಕೂಲಿಕಾರರು ಸೇರಿದಂತೆ ಎಲ್ಲರಿಗೂ ಸಮಸ್ಯೆಯಾಗಿದೆ. ಆದರೆ, ಇದರ ಲಾಭ ಪಡೆದ ಬೇರೆ ಕೊಳೆಗೇರಿಗಳು ಇಲ್ಲಿಗೆ ಬಂದು ಶೆಡ್ ಹಾಕಿಕೊಂಡಿದ್ದಾರೆ' ಎಂದು ಈಜಿಪುರ ಕೊಳೆಗೇರಿ ನಿವಾಸಿಗಳ ಹೋರಾಟ ಸಮಿತಿ ಅಧ್ಯಕ್ಷ  ಲೂಯಿಸ್ `ಪ್ರಜಾವಾಣಿ'ಗೆ ತಿಳಿಸಿದರು.`ಶೆಡ್‌ಗಳನ್ನು ತೆರವುಗೊಳಿಸಿದ್ದರಿಂದ ಈಗ ಹೆಬ್ಬಾಳಕ್ಕೆ ಬಂದು ನೆಲೆಸಿದ್ದೇವೆ. ನಾನು ಈಜಿಪುರದಲ್ಲಿ ಮನೆಗೆಲಸ ಮಾಡುತ್ತಿದ್ದು, ಮಗ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾನೆ. ಮೊದಲು ಈಜಿಪುರದಲ್ಲಿದ್ದಾಗ ಮಗ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದ. ನಾನು ಕೂಡ ಬೇಗನೆ ಕೆಲಸ ಮುಗಿಸಿ ಶೆಡ್‌ಗೆ ಹೋಗುತ್ತಿದ್ದೆ. ಆದರೆ, ಈಗ ಇಬ್ಬರೂ ಬಸ್‌ನಲ್ಲೇ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತಿದಿನ ಬಸ್ ಟಿಕೆಟ್‌ಗೆಂದೇ 50 ರೂಪಾಯಿ ಮೀಸಲಿಡಬೇಕು' ಎಂದು ರೀಟಾ ಸಮಸ್ಯೆಗಳನ್ನು ಹೇಳಿಕೊಂಡರು.`ಶೆಡ್ ತೆರವುಗೊಳಿಸುವ ವೇಳೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಪಾಲಿಕೆ 30 ಸಾವಿರ ರೂಪಾಯಿ ಹಣ ಕೊಟ್ಟಿದೆ. ಬಾಡಿಗೆ ಮನೆಯಲ್ಲಿ ವಾಸ ಮಾಡುವುದಾದರೆ ಆ ಹಣವನ್ನು ಮುಂಗಡವಾಗಿಯೇ ಕೊಡಬೇಕು. ಪತಿ ಕೂಲಿ ಕೆಲಸ ಮಾಡುತ್ತಿದ್ದು, ನಾವು ಬಾಡಿಗೆ ಮನೆ ಪಡೆಯುವಷ್ಟು ಶಕ್ತರಲ್ಲ. ಹೀಗಾಗಿ, ಆದಷ್ಟು ಬೇಗ ಮನೆಗಳನ್ನು ಕಟ್ಟಿಸಿಕೊಡಬೇಕು' ಎಂದು ನೀಲಸಂದ್ರದ ಕೊಳೆಗೇರಿಯಲ್ಲಿ ವಾಸವಿರುವ ಆಸ್ಮಾಭಾನು ಮನವಿ ಮಾಡಿದರು.`ನಗರದೆಲ್ಲೆಡೆ ಹುಡುಕಿದರೂ ನಾಲ್ಕು ಸಾವಿರ ರೂಪಾಯಿಗಿಂತ ಕಡಿಮೆ ಬಾಡಿಗೆಗೆ ಮನೆ ಸಿಗುತ್ತಿಲ್ಲ. ಹೀಗಾಗಿ ಪತ್ನಿ ಮಕ್ಕಳನ್ನು ವಿವೇಕನಗರದಲ್ಲಿರುವ ತಾಯಿ ಮನೆಯಲ್ಲಿ ಬಿಟ್ಟು, ಸ್ನೇಹಿತನೊಂದಿಗೆ ಆರ್.ಟಿ.ನಗರದಲ್ಲಿ ಕೊಠಡಿ ಬಾಡಿಗೆ ಪಡೆದು ವಾಸವಾಗಿದ್ದೇನೆ. ಈ ಕೊಠಡಿಗೆ ಒಂದೂವರೆ ಸಾವಿರ ರೂಪಾಯಿ ಬಾಡಿಗೆ. ಇದರ ಜತೆ ವಿದ್ಯುತ್, ನೀರಿನ ಶುಲ್ಕವೆಂದು 400 ರೂಪಾಯಿ ಹೆಚ್ಚುವರಿಯಾಗಿ ಕೊಡಬೇಕು. ಆಟೊ ಚಾಲಕನಾದ ನಾನು ದಿನದ ಸಂಪಾದನೆಯಲ್ಲಿ ಕುಟುಂಬವನ್ನು ಸಾಕುವುದು ಕಷ್ಟವಾಗುತ್ತಿದೆ. ಶೆಡ್‌ನಲ್ಲಿದ್ದಾಗ ಇಷ್ಟೊಂದು ಸಮಸ್ಯೆ ಇರಲಿಲ್ಲ' ಎಂದು ಇಮ್ರಾನ್ ಪಾಷಾ ಹೇಳಿದರು.`ನಮ್ಮ ಬಳಿ ಹಕ್ಕು ಪತ್ರ ಇದೆ. ಮನೆ ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೂ ಪಾಲಿಕೆ ಮನೆ ಕಟ್ಟಿಕೊಡುವವರೆಗೆ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕಿದೆ. ಅಲ್ಲಿದ್ದ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯವಿತ್ತು. ಎಲ್ಲರೂ ಈಗ ಬೇರೆ ಬೇರೆಯಾಗಿದ್ದೇವೆ. ನಾವು ಕೊಳೆಗೇರಿ ವಾಸಿಗಳು ಎಂಬ ಕಾರಣಕ್ಕೆ ಇಲ್ಲಿನ ಅಕ್ಕಪಕ್ಕದ ಮನೆಯವರು ನಮ್ಮನ್ನು ಬೇರೆ ದೃಷ್ಟಿಯಿಂದಲೇ ನೋಡುತ್ತಾರೆ' ಎಂದು ಕಾಂತಮ್ಮ ಅಳಲು ತೋಡಿಕೊಂಡರು.`ಏಪ್ರಿಲ್ ತಿಂಗಳಲ್ಲಿ ಪರೀಕ್ಷೆ ಮುಗಿಯುತ್ತಿತ್ತು. ಅಲ್ಲಿಯವರೆಗಾದರೂ ನಮ್ಮನ್ನು ಶೆಡ್‌ನಲ್ಲಿರಲು ಬಿಡಬಹುದಿತ್ತು. ಈಗ ನನ್ನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಪೋಷಕರು ಬೇರೆಡೆ ಮನೆ ಮಾಡಿಕೊಂಡಿದ್ದಾರೆ. ಮೊದಲು ನನ್ನೊಟ್ಟಿಗೆ ವಸತಿ ಸಮುಚ್ಚಯದಲ್ಲಿದ್ದ ಸಹಪಾಠಿಗಳು ದೂರಾಗಿದ್ದಾರೆ. ಈ ಪರೀಕ್ಷೆ ಮುಗಿಯುತ್ತಿದ್ದಂತೆ ಮನೆಗೆ ಸಮೀಪವಿರುವ ಶಾಲೆಗೆ ಸೇರಿಕೊಳ್ಳಲು ನಿರ್ಧರಿಸಿದ್ದೇನೆ' ಎಂದು ರೋಜ್‌ಗಾರ್ಡನ್ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಹೇಳಿದಳು.`ನಿಜವಾದ ನಿವಾಸಿಗಳಿಗೆ ಮಾತ್ರ ಮನೆ'

`ಇನ್ನು ಮೂವತ್ತು ತಿಂಗಳಲ್ಲಿ ಇಡಬ್ಲ್ಯೂಎಸ್ ವಸತಿ ಸಮುಚ್ಚಯದಲ್ಲಿ 1512 ಮನೆಗಳನ್ನು ನಿರ್ಮಿಸಲಾಗುವುದು. ಹಕ್ಕುಪತ್ರ ಹೊಂದಿದವರಿಗೆ ಆ ಮನೆಗಳನ್ನು ವಿತರಿಸಲಾಗುವುದು. ಈಗಾಗಲೇ ಕಟ್ಟಡದ ರೂಪುರೇಷೆ ಸಿದ್ದಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು'

-ಸಿದ್ದಯ್ಯ, ಬಿಬಿಎಂಪಿ ಆಯುಕ್ತ

ಪ್ರತಿಕ್ರಿಯಿಸಿ (+)