ಜೀವನ್-ಬಾಲಾಜಿಗೆ ಡಬಲ್ಸ್ ಪ್ರಶಸ್ತಿ

7
ಐಟಿಎಫ್ ಟೆನಿಸ್: ಬಾಲಾಜಿ, ಸನಮ್ ನಡುವೆ ಇಂದು ಹಣಾಹಣಿ

ಜೀವನ್-ಬಾಲಾಜಿಗೆ ಡಬಲ್ಸ್ ಪ್ರಶಸ್ತಿ

Published:
Updated:
ಜೀವನ್-ಬಾಲಾಜಿಗೆ ಡಬಲ್ಸ್ ಪ್ರಶಸ್ತಿ

ದಾವಣಗೆರೆ:ಎನ್. ಶ್ರೀರಾಮ್ ಬಾಲಾಜಿ ಹಾಗೂ ಸನಮ್ ಸಿಂಗ್ ನಗರದಲ್ಲಿ ನಡೆಯುತ್ತಿರುವ  ಜಿಎಂಐಟಿ ಐಟಿಎಫ್ ದಾವಣಗೆರೆ ಓಪನ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್  ಫೈನಲ್ ಪ್ರವೇಶಿಸಿದ್ದಾರೆ.ಅಂತರ ರಾಷ್ಟ್ರೀಯ ಟೆನಿಸ್ ಫೆಡರೇಷನ್, ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ ಮತ್ತು ಜಿಲ್ಲಾ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಹೈಸ್ಕೂಲು ಮೈದಾನದ ಸಮೀಪವಿರುವ ಟೆನಿಸ್ ಅಂಕಣದಲ್ಲಿ ನಡೆದ ಈ ಟೂರ್ನಿಯ ಡಬಲ್ಸ್ ಫೈನಲ್‌ನಲ್ಲಿ ವಿಜಯಸುಂದರ್ ಪ್ರಶಾಂತ್, ಅರುಣ್ ಪ್ರಕಾಶ್ ರಾಜಗೋಪಾಲನ್ ಜೋಡಿಯು  ಶ್ರೀರಾಮ್ ಬಾಲಾಜಿ, ಜೀವನ್ ನೆಡುಂಚೆಳಿಯನ್ ಜೋಡಿಯ ಎದುರು 6-7(4) 6-4(10-1 ಸೂಪರ್ ಟೈಬ್ರೇಕರ್)ರಲ್ಲಿ ಶರಣಾಯಿತು.ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಾಲಾಜಿ, `ನಿಜವಾಗಿಯೂ ಈ ಪಂದ್ಯ ಕಷ್ಟಕರವಾಗಿತ್ತು. ಅರುಣ್ ಅವರ ತೋಳು ಸರ್ವ್‌ಗಳಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಇದೂ ಒಂದು ರೀತಿ ನಮಗೆ ಲಾಭದಾಯಕವಾಯಿತು. ಆದರೆ, ನಾನೂ ಒಂದೆರಡು ಸರ್ವ್‌ಗಳನ್ನು ಕಳೆದುಕೊಂಡೆ. ಆದರೂ, ಗೆಲುವಿನ ವಿಶ್ವಾಸವಿತ್ತು' ಎಂದು ಸಂತಸ ಹಂಚಿಕೊಂಡರು.

`ಪಂದ್ಯದ ಮೊದಲ ಹಂತ ನಮ್ಮ ಪರವಾಗಿಯೇ ಇತ್ತು. ಒಂದೆರಡು ಅಂಕಗಳು ಇಲ್ಲಿ ವ್ಯತ್ಯಾಸ ಉಂಟು ಮಾಡಿದವು. ಕೊನೆಗೂ ಅದೃಷ್ಟ ದೇವತೆ ನಮಗೆ ಒಲಿಯಲಿಲ್ಲ' ಎಂದು ಅರುಣ್ ಪ್ರಕಾಶ್ ರಾಜಗೋಪಾಲನ್ ಹೇಳಿದರು.ವಿಜೇತ ಶ್ರೀರಾಮ್ ಬಾಲಾಜಿ- ಜೀವನ್ ನೆಡುಂಚೆಳಿಯನ್ ಜೋಡಿಗೆ ರೂ 34,108, ರನ್ನರ್ಸ್‌ಅಪ್ ಪ್ರಶಸ್ತಿ ಗಳಿಸಿದ ವಿಜಯಸುಂದರ್, ಅರುಣ್ ಪ್ರಕಾಶ್ ಜೋಡಿಗೆ ರೂ 17,866  ಬಹುಮಾನದ ಚೆಕ್ ಮತ್ತು ಟ್ರೋಫಿ ನೀಡಲಾಯಿತು.

ಶುಕ್ರವಾರ ಬೆಳಿಗ್ಗೆ ನಡೆದ ಸಿಂಗಲ್ ಸೆಮಿಫೈನಲ್‌ನಲ್ಲಿ ಬಾಲಾಜಿ ಮತ್ತು ಹಾಲೆಂಡ್‌ನ ಕೊಲಿನ್ ವಾನ್ ಬೀಮ್ ಮಧ್ಯೆ ಬಿರುಸಿನ ಹಣಾಹಣಿ ನಡೆಯಿತು. ಮೊದಲ ಸೆಟ್‌ನ ಆರಂಭದಲ್ಲಿ ವಾನ್‌ಬೀಮ್ 6-5ರಲ್ಲಿ ಮುನ್ನಡೆ ಸಾಧಿಸಿದರು. ಆದರೆ ನಂತರದ ಸನ್ನಿವೇಶ ಬದಲಾಯಿತು. ಮೊದಲ ಸೆಟ್‌ನಲ್ಲಿ 7-6 (5), ನಂತರ 6-3ರಲ್ಲಿ ಬಾಲಾಜಿ ಎದುರು ವಾನ್ ಬೀಮ್ ಶರಣಾಗಬೇಕಾಯಿತು.ಅಗ್ರ ಶ್ರೇಯಾಂಕಿತ, ಡೇವಿಸ್ ಕಪ್ ಆಟಗಾರ ಸನಮ್ ಸಿಂಗ್ ಮತ್ತು ಜರ್ಮನಿಯ ಟಾರ್ಸ್ಟನ್ ವಿಟೋಸ್ಕಾ ಮಧ್ಯೆಯೂ ಬಿರುಸಿನ ಸೆಣಸಾಟ ನಡೆಯಿತು. ಆದರೆ, ಆರಂಭದಿಂದಲೇ ವಿಟೋಸ್ಕಾ ಪ್ರದರ್ಶನ ಸ್ವಲ್ಪ ಕಳೆಗುಂದಿತ್ತು. ಸನಮ್‌ನ ಸರ್ವ್‌ಗಳಿಗೆ ಉತ್ತರಿಸುವುದು ಕಷ್ಟವಾಯಿತು. 6-0, 7-6(1)ರಲ್ಲಿ ವಿಟೋಸ್ಕಾ ಗೆಲುವನ್ನು ಸನಮ್ ಅವರಿಗೆ ಬಿಟ್ಟುಕೊಟ್ಟರು.`ಸನಮ್ ಅವರ ಒತ್ತಡ ಎದುರಿಸಲಾಗಲಿಲ್ಲ. ಅವರು ಉತ್ತಮವಾಗಿಯೇ ಆಡಿದರು. ನಾನೂ ಇಲ್ಲಿ ಉತ್ತಮವಾಗಿಯೇ ಆಡಿದೆ. ಧಾರವಾಡದಲ್ಲಿ ನಡೆಯುವ ಐಟಿಎಫ್ ಪಂದ್ಯದಲ್ಲಿ ಮತ್ತೆ ಅದೃಷ್ಟ ಪರೀಕ್ಷಿಸುತ್ತೇನೆ' ಎಂದು ವಿಟೋಸ್ಕಾ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry