ಜೀವಪರ ಮೌಲ್ಯಗಳೊಂದಿಗೆ ಮುನ್ನೆಡೆಯಿರಿ

7

ಜೀವಪರ ಮೌಲ್ಯಗಳೊಂದಿಗೆ ಮುನ್ನೆಡೆಯಿರಿ

Published:
Updated:

ಸಿಂಧನೂರು:  ಸಮಾಜದಲ್ಲಿ ಸರ್ವರಿಗೂ ಅವರದೇ ಆದ ಜವಾಬ್ದಾರಿ ಇರುತ್ತದೆ. ಆ ಜವಾಬ್ದಾರಿಯಿಂದ ನುಣಚಿಕೊಳ್ಳುವುದು ಸರಿಯಲ್ಲ. ವಿದ್ಯಾರ್ಥಿಗಳು ಜೀವಪರ ಮೌಲ್ಯಗಳೊಂದಿಗೆ ಮುನ್ನೆಡೆಯುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಾಹಿತಿ ಡಾ.ಅನುಸೂಯಾ ಕಾಂಬಳೆ ಕರೆ ನೀಡಿದರು.ಅವರು ನಗರದ ಪಿ.ಡಬ್ಲ್ಯೂ.ಡಿ.ಕ್ಯಾಂಪ್‌ನಲ್ಲಿರುವ ಬಿ.ಸಿ.ಎಂ.ಹಾಸ್ಟೆಲ್‌ನಲ್ಲಿ ಭಾನುವಾರ ಸಾಯಂಕಾಲ ಏರ್ಪಡಿಸಿದ್ದ ತಾಲ್ಲೂಕಿನ ಎಲ್ಲ ಬಿ.ಸಿ.ಎಂ.ಹಾಸ್ಟೆಲ್‌ಗಳ ವಾರ್ಷಿಕೋತ್ಸವ ಹಾಗು ಅಂತಿಮ ಪದವಿ ಹಾಗೂ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

 

ಭೇದ ರಹಿತ ಹಾಗೂ ಅನೇಕ ಮಹಾತ್ಮರು ವಿವರಿಸಿದ ಎಲ್ಲ ವರ್ಗದ ಜನರಿಗೆ ಸಮಾನತೆಯನ್ನು ಬಯಸುವ ಮತ್ತು ನೀಡುವ ಸುಂದರ ಸಮಾಜವನ್ನು ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಪಣತೊಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳಿಗೆ ಚ್ಯುತಿ ಉಂಟಾಗದಂತೆ ರಕ್ಷಿಸುವ ಹೊಣೆಯನ್ನು ಎಲ್ಲರೂ ನಿಭಾಯಿಸಿದಾಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಾಹಿತಿ ಪೀರ್‌ಬಾಷಾ ಮಾತನಾಡಿ ಪ್ರೀತಿ ಮತ್ತು ವಿಶ್ವಾಸದಿಂದ ಸಮಾಜವನ್ನು ಕಟ್ಟಬೇಕೆ ಹೊರತು ಅಧಿಕಾರ ಹಾಗೂ ದೌರ್ಜನ್ಯದಿಂದ ಅಲ್ಲ. ಎಲ್ಲಿ ನಾನು, ನನ್ನದು ಎನ್ನುವ ಸ್ವಾರ್ಥಪರತೆ ಬರುತ್ತದೆಯೋ ಅಲ್ಲಿ ಜನಸಾಮಾನ್ಯರ ರಕ್ತ ಹರಿಯುತ್ತದೆ. ಇಂತಹ ವ್ಯವಸ್ಥೆ ಕಡೆಗಾಣಿಸಲು ಬೃಹತ್ ಚಳವಳಿಗಳು ನಡೆದಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ರವಿಯಪ್ಪ, ಮಾನ್ವಿ  ಬಿಒಎಲ್‌ಐಸಿಯ ಎ.ವೈ.ದೇವರಮನಿ, ಮೆಟ್ರಿಕ್ ನಂತರದ ಬಾಲಕರ ಬಿ.ಸಿ.ಎಂ. ಹಾಸ್ಟೆಲ್‌ನ ಮೇಲ್ವಿಚಾರಕ ಶಂಕರ ಸಕ್ರಿ, ಬಾಲಕಿಯರ ಹಾಸ್ಟೆಲ್‌ನ ಮೇಲ್ವಿಚಾರಕ ಎಂ.ಮಹ್ಮದ್ ಅಲಿ, ಸಿರುಗುಪ್ಪ ಹಾಸ್ಟೆಲ್‌ನ ಮೇಲ್ವಿಚಾರಕ ವೀರಭದ್ರಯ್ಯ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry