ಜೀವರಕ್ಷಕ ಔಷಧಿ ಬೆಲೆಕುಸಿತ

7
ಜಾರಿಗೆ ಬಂದ ಸುಪ್ರೀಂ ಕೋರ್ಟ್‌ ಆದೇಶ

ಜೀವರಕ್ಷಕ ಔಷಧಿ ಬೆಲೆಕುಸಿತ

Published:
Updated:

ಮೊಳಕಾಲ್ಮುರು: ದೇಶದ ಔಷಧ ಉದ್ಯಮ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅಗತ್ಯ ಹಾಗೂ ಜೀವರಕ್ಷಕ ಔಷಧಿಗಳ ಗರಿಷ್ಠ ಮಾರಾಟ ಬೆಲೆ ಗಣನೀಯ ಕುಸಿತವಾಗಿದ್ದು, ಬಡ, ಕೆಳವರ್ಗದ ಜನತೆಯಲ್ಲಿ ಒಂದಿಷ್ಟು ನೆಮ್ಮದಿ ಮೂಡಿಸಿದೆ.ಅಗತ್ಯ ಹಾಗೂ ಜೀವರಕ್ಷಕ ಔಷಧಿ ಬೆಲೆ ಸಾಮಾನ್ಯ ಜನರ ಕೈಗೆಟುಕಬೇಕು ಎಂದು ಮಾತುಗಳು ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ ಕಾರ್ಯರೂಪಕ್ಕೆ ಮಾತ್ರ ಬಂದಿರಲಿಲ್ಲ. ಈ ನಿಟ್ಟಿನಲ್ಲಿ ಐದು ವರ್ಷದ ಹಿಂದೆ 72 ಔಷಧಿಗಳ ಗರಿಷ್ಠ ಮಾರಾಟ ಬೆಲೆ ಮಾತ್ರ ಇಳಿಕೆಯಾಗಿತ್ತು. ಈಗ 348 ಔಷಧಿ ಸೇರಿದಂತೆ 740 ಕ್ಕೂ ಹೆಚ್ಚು ಉತ್ಪನ್ನಗಳ ಗರಿಷ್ಠ ಮಾರಾಟ ಬೆಲೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಚಿತ್ರದುರ್ಗ ಜಿಲ್ಲಾ ಔಷಧಿ ಮಾರಾಟಗಾರರ ಸಂಘದ ಕಾರ್ಯದರ್ಶಿ ವಿ. ತಿಪ್ಪೇಸ್ವಾಮಿ ಮಾಹಿತಿ ನೀಡಿ, ‘ಜೀವರಕ್ಷಕ ಔಷಧಿಗಳ ಬೆಲೆ ಕಡಿಮೆ ಮಾಡುವಂತೆ ದೇಶದ ಔಷಧಿ ಉತ್ಪನ್ನಗಳ ಬೆಲೆ ನಿಗದಿ ಮಾಡುವ ಸಮಿತಿ (ಡಿಪಿಒಸಿ)ಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡುತ್ತಾ ಬಂದಿತ್ತು, ಆದರೆ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ, ಒಂದು ವೇಳೆ ಬೆಲೆ ಕಡಿಮೆ ಮಾಡದಿದ್ದಲ್ಲಿ ಸಮಿತಿಯನ್ನೇ ರದ್ದು ಮಾಡುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿತು. ಪರಿಣಾಮ ಸಮಿತಿ ತರಾತುರಿಯಲ್ಲಿ ಬೆಲೆ ನಿಯಂತ್ರಣಕ್ಕೆ ಮುಂದಾಗಿದೆ  ಎಂದರು.ಆಸ್ತಮ, ಕ್ಯಾನ್ಸರ್‌, ಏಡ್ಸ್, ರಕ್ತದೊತ್ತಡ, ಸಕ್ಕರೆ ಕಾಯಿಲೆ, ನೋವು ನಿವಾರಕ, ಅಸಿಡಿಟಿ ಸೇರಿದಂತೆ ಹಲವು ಪ್ರಮುಖ ಕಾಯಿಲೆಗಳಿಗೆ ಸಂಬಂಧಪಟ್ಟ ಔಷಧಿಗಳು ಬೆಲೆ ನಿಯಂತ್ರಣಕ್ಕೆ ಒಳಪಟ್ಟಿವೆ. ಇದರಲ್ಲಿ ಸಕ್ಕರೆ ಕಾಯಿಲೆಯ ಹ್ಯೂಮನ್‌ ಮಿಕ್ಸರ್ಡ್, ಆಂಟಿಬಯೋಟಿಕ್‌ಗಳಾದ ಸಿಫಿಕ್ಸಿಮ್‌, ಅಜಿತ್ರೋಮೈಸಿನ್‌, ಸೆಫೆಲೆಕ್ಸಿನ್‌, ಅಮಾಕ್ಸಿಲಿನ್, ನೋವು ನಿವಾರಕಗಳಾದ ಡೈಕ್ಲೋಫೆನಿಕ್‌, ಪ್ಯಾರಾಸಿಟಮಾಲ್‌, ಪೈರಾಕ್ಸಿಕಾಮ್‌, ಅಸಿಡಿಟಿಯ ಒಮಿಪ್ರೋಜೋಲ್‌,  ಪ್ಯಾಂಟ ಪ್ರಜೋಲ್‌, ಗಾಯಕ್ಕೆ ಹಚ್ಚುವ ಪವೋಡಿನ್‌ ಮುಖ್ಯವಾಗಿವೆ ಎಂದು ಹೇಳಿದರು.ಅಂದಾಜು ಶೇ 30–40ರಷ್ಟು ದರ ಕಡಿತವಾಗಿದೆ, ಕೆಲ ಔಷಧಿಗಳ ಬೆಲೆಯಲ್ಲಿ ಶೇ 75ರಷ್ಟು ಕುಸಿತವಾಗಿದೆ. ಪರಿಣಾಮ ಸಗಟು ಔಷಧಿ ವ್ಯಾಪಾರಿಗಳಿಗೆ  ಶೇ 3–4 ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಶೇ 5–6ರಷ್ಟು ಲಾಭಾಂಶ ಕಡಿತ ಮಾಡಲಾಗಿದೆ. ಕೂಲಿ, ಬಾಡಿಗೆ ಸೇರಿದಂತೆ ಖರ್ಚು ವೆಚ್ಚಗಳು ಗಗನ ಮುಟ್ಟಿರುವ ಈ ದಿನಗಳಲ್ಲಿ ವ್ಯಾಪಾರಸ್ಥರಿಗೆ ಇದು ನುಂಗಲಾರದ ತುತ್ತಾಗಿ ಪರಿಣಿಮಿಸಿದೆ. ನಗರ ಪ್ರದೇಶಗಳಲ್ಲಿದ್ದ ಶೇ 10 ರಿಯಾಯಿತಿ ಅಂಗಡಿಗಳು ಮತ್ತು ಗ್ರಾಮೀಣ ಭಾಗದ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ ಎಂದು ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.348 ಉತ್ಪನ್ನಗಳ ಬೆಲೆ ನಿಯಂತ್ರಣ 5–6 ಹಂತದಲ್ಲಿ ಪೂರ್ಣವಾಗಿದ್ದು, ಪ್ರತಿವರ್ಷವೂ ಹೆಚ್ಚು ಮಾರಾಟವಾಗುವ ಔಷಧಿಗಳ ಪಟ್ಟಿ ಮಾಡಿ ದರ ಏರಿಳಿತ ಮಾಡುವ ಅಧಿಕಾರ ಸಮಿತಿಗೆ ಇದೆ. ಮುಂದಿನ ಆಗು–ಹೋಗುಗಳ ಬಗ್ಗೆ ಇಡೀ ಔಧ್ಯಮಿಕ ಉದ್ಯಮದಲ್ಲಿ ಚರ್ಚೆಗಳು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry