ಜೀವವೈವಿಧ್ಯ ಆಪತ್ತಿನಲ್ಲಿ

7
ಸಂಪನ್ಮೂಲ ದುರ್ಬಳಕೆ ಪರಿಣಾಮ: ಪರಿಸರ ಸಚಿವಾಲಯ ವರದಿ

ಜೀವವೈವಿಧ್ಯ ಆಪತ್ತಿನಲ್ಲಿ

Published:
Updated:

ನವದೆಹಲಿ (ಪಿಟಿಐ):  ಜಗತ್ತಿನ ಸೂಕ್ಷ್ಮ ಜೀವ­ವೈವಿಧ್ಯ ತಾಣಗಳಾದ ಭಾರತದ ಹಿಮಾಲಯ ಶ್ರೇಣಿ, ಪಶ್ಚಿಮ ಘಟ್ಟ ಶ್ರೇಣಿ, ಈಶಾನ್ಯ ಪ್ರದೇಶಗಳು ಮತ್ತು ನಿಕೊಬಾರ್‌ ದ್ವೀಪಗಳಲ್ಲಿ ಸಸ್ಯ ಮತ್ತು ಜೀವ ಪ್ರಭೇದ­ಗಳು ತೀವ್ರ ಅಪಾಯಕ್ಕೆ ಸಿಲುಕಿವೆ.ಸಂಪನ್ಮೂಲದ ಅತಿಯಾದ ಬಳಕೆ, ಕಾಳ್ಗಿಚ್ಚು ಮತ್ತು ಹವಾಮಾನ ವೈಪ­ರೀತ್ಯವೇ ಇದಕ್ಕೆ ಕಾರಣ ಎಂದು ಪರಿಸರ ಸಚಿವಾಲಯದ ವರದಿ ಸ್ಪಷ್ಟವಾಗಿ ಹೇಳಿದೆ. ಪರಿಸರ ಸಂರಕ್ಷಣೆ ಮತ್ತು ಕೈಗಾರಿಕಾ ಬೆಳವಣಿಗೆ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹೊರಬಂದಿರುವ ಈ ವರದಿ ಎಚ್ಚರಿಕೆ ಗಂಟೆ ಬಾರಿಸಿದೆ.45,000 ಸಸ್ಯ ಪ್ರಭೇದಗಳು ಮತ್ತು 91,000 ಜೀವ ಪ್ರಭೇದಗಳ ತವರಾದ ಭಾರತದಲ್ಲಿ ಜೀವ ವೈವಿಧ್ಯ ನಾಶವಾ­ಗುವ ಸಾಧ್ಯತೆ ಕುರಿತು ವರದಿ ಆತಂಕ ವ್ಯಕ್ತಪಡಿಸಿದೆ.ಅರಣ್ಯ ಸಂರಕ್ಷಣಾ ಕಾಯ್ದೆಯು 1980ರಲ್ಲಿ ಜಾರಿಗೊಂಡ ನಂತರ 23,000 ಅಭಿವೃದ್ಧಿ ಕಾಮ­ಗಾರಿಗಳಿ­ಗಾಗಿ 41.82 ಲಕ್ಷ ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಬಿಟ್ಟುಕೊಡ­ಲಾಗಿದೆ ಎಂಬು­ದನ್ನೂ ವರದಿಯಲ್ಲಿ ಒಪ್ಪಿಕೊಳ್ಳಲಾಗಿದೆ. ಜೀವ­ವೈವಿಧ್ಯ ಸಂರಕ್ಷಣೆ­ಗಾಗಿ ಕಾರ್ಯತಂತ್ರ ಯೋಜನೆ ಸಿದ್ಧಗೊಳಿಸುವ ಮುನ್ನ ಸಲ್ಲಿಸಲಾಗಿರುವ ಐದನೇ ರಾಷ್ಟ್ರೀಯ ವರದಿ ಇದಾಗಿದೆ.ಅದಿರು ಗಣಿಗಾರಿಕೆ ಮತ್ತು  ಕಲ್ಲು ಗಣಿಗಾರಿಕೆ­ಗಳು ಆವಾಸ ಸ್ಥಾನಗಳ ನಾಶಕ್ಕೆ ಪ್ರಮುಖ ಕಾರಣ­ವಾಗಿವೆ. ಇದು ಅರಾವಳಿ ಮತ್ತು ಪಶ್ಚಿಮ­ಘಟ್ಟ ಶ್ರೇಣಿ­ಯಲ್ಲಿ ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿವೆ.ಹಿಮಾಲಯ ಮತ್ತು ದಕ್ಷಿಣ ಭಾರತದ ಉಷ್ಣ ವಲಯದ ಎಲೆ ಉದು­ರುವ ಅರಣ್ಯಗಳಲ್ಲಿ ಕಾಳ್ಗಿಚ್ಚು ಪ್ರಮುಖ ಬೆದರಿಕೆಯಾಗಿದೆ.  ಮಾನವನ ಚಟುವಟಿ­ಕೆ­ಗಳಿಂದ ಆಗಿರುವ ಹವಾಮಾನ ವೈಪರೀತ್ಯವು ಸೂಕ್ಷ್ಮವಾದ ಜೀವವೈವಿಧ್ಯ ಪರಿಸರಗಳಾದ ಪರ್ವತ ಶ್ರೇಣಿ ಮತ್ತು ಕರಾವಳಿ ಪ್ರದೇಶಗಳಿಗೆ ಧಕ್ಕೆ ತಂದೊಡ್ಡಿದೆ ಎಂದೂ ವರದಿ ವಿವರಿಸಿದೆ.ಹುಲ್ಲುಗಾವಲು ಅವಲಂಬಿತ ಬೆಂಗಾಲ್‌ ಫ್ಲೋರಿಕಾನ್‌, ಲೆಸರ್‌ ಫ್ಲೋರಿಕಾನ್‌, ಹೌಬರಾ ಬಸ್ಟರ್ಡ್‌, ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌ (ಕೊಕ್ಕರೆ ಪ್ರಭೇದಗಳು), ತೋಳ, ನರಿ, ಕೃಷ್ಣಮೃಗ, ಜಿಂಕೆ, ಚಿಗರೆ ಸಂತತಿಗಳು ಸಂಕಷ್ಟಕ್ಕೆ ಸಿಲುಕಿವೆ. ಮಾಂಸಕ್ಕಾಗಿ ಹಾಗೂ ಮಾರುಕಟ್ಟೆ ಪೂರೈಕೆಗಾಗಿ ಕಾಡು ಪ್ರಾಣಿಗಳ ಬೇಟೆಯು ಮುಖ್ಯವಾಗಿ ಈಶಾನ್ಯ ಭಾರತದಲ್ಲಿ ದೊಡ್ಡ ಕಂಟಕವಾಗಿ ಪರಿಣಮಿಸಿದೆ.ಜಗತ್ತಿನ ಕೆಲ ಪರಿಶುಭ್ರ ದ್ವೀಪಗಳನ್ನು ಹೊಂದಿರುವ ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹದಲ್ಲಿ ಆವಾಸ ಸ್ಥಾನಗಳ ನಾಶ ಮತ್ತು ಭೂಸವಕಳಿಯು ಅಲ್ಲಿನ ಜೀವ­ವೈವಿಧ್ಯಕ್ಕೆ ದೊಡ್ಡ ಕುತ್ತಾಗಿದೆ. ದೊಡ್ಡ ಸಸ್ತನಿಗಳಿಂದ ಮುಕ್ತವಾದ ಹಾಗೂ ಅಪರೂಪದ ಮರ ಇಣಚಿ ಸಂತತಿಯ ಆವಾಸ ಸ್ಥಾನವೂ ಆದ ನಿಕೋಬಾರ್‌ ದ್ವೀಪ ಸಮೂಹವು ವರ್ಣವೈಭವದ ಹವಳದ ದಿಬ್ಬಗಳಿಗೂ ಹೆಸರಾಗಿದ್ದು, ಈಗಿನ ಪರಿಸರ ನಾಶವು ಈ ಖ್ಯಾತಿಗೆ ಧಕ್ಕೆ ತರುವ ಭೀತಿ ತಂದೊಡ್ಡಿದೆ.ಜೀವವೈವಿಧ್ಯ ಸಂರಕ್ಷಣೆಗಾಗಿ ಸರ್ಕಾರ ದೊಡ್ಡಮೊತ್ತದ ಹಣವನ್ನು ವ್ಯಯಿಸುತ್ತಿದ್ದರೂ ಭೀತಿ ಇನ್ನೂ ತಪ್ಪಿಲ್ಲ. ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಇದಕ್ಕಾಗಿ 9200 ಕೋಟಿ ರೂಪಾಯಿ­ಗಳನ್ನು ಖರ್ಚು ಮಾಡಿದೆ.ಪ್ರಮುಖ ಬೆದರಿಕೆಗಳು

ಜೀವ ಪ್ರಭೇದಗಳ ವಾಸ ಸ್ಥಾನಗಳ ನಾಶ, ಅಭಿವೃದ್ಧಿ  ಕಾಮಗಾರಿಗಳಿಗಾಗಿ ಅರಣ್ಯ ನಾಶ, ಕೃಷಿ– ನಗರೀಕರಣ– ಕೈಗಾರಿಕೆಗಳ ಸ್ಥಾಪನೆಗಾಗಿ ಅರಣ್ಯ ಭೂಮಿ ಪರಿವರ್ತನೆ, ಪರಕೀಯ ಪ್ರಭೇದಗಳ ದಾಳಿ, ಎಲ್ಲ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಜೀವ­ವೈವಿಧ್ಯ ಸರಪಳಿಗೆ ಪ್ರಮುಖ ಬೆದರಿಕೆಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry