ಜೀವಸಂಕುಲ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯ

7

ಜೀವಸಂಕುಲ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯ

Published:
Updated:
ಜೀವಸಂಕುಲ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯ

ಬೆಂಗಳೂರು: `ಪರಿಸರ ಸಂರಕ್ಷಣೆ ಮಾಡದ ಹೊರತು ಮಾನವ ಜನಾಂಗಕ್ಕೆ ಭವಿಷ್ಯವಿಲ್ಲ~ ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿ ಹಾಗೂ ವನ್ಯಜೀವಿ ಛಾಯಾಗ್ರಾಹಕ ಎಸ್.ಇ.ನೇಗಿನ್‌ಹಾಳ್ ಹೇಳಿದರು.

ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ `ಹನುಮಂತರಾವ್ ಸ್ಮಾರಕ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ~ಯನ್ನು ಸ್ವೀಕರಿಸಿ ಅವರು ಮಾತನಾಡಿದರು.`ಮಾನವನ ಬದುಕಿನಲ್ಲಿ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಮನುಷ್ಯನ ಜೀವನಕ್ಕೆ ಅರಣ್ಯ ಪ್ರದೇಶಗಳು ಅಗತ್ಯ. ಜೀವಸಂಕುಲದ ಸುಸ್ಥಿರತೆಗೆ ಅರಣ್ಯ ಪ್ರದೇಶಗಳು ಹಾಗೂ ಜೀವವೈವಿಧ್ಯ ಅನಿವಾರ್ಯ. ಹೀಗಾಗಿ ಪರಿಸರ ಸಂರಕ್ಷಣೆಯ ಕಾಳಜಿ ಅಗತ್ಯವಾಗಿದೆ~ ಎಂದು ಅವರು ನುಡಿದರು.`ಭಾರತೀಯ ಅರಣ್ಯ ಸೇವೆಗೆ ಸೇರಿದ ನಂತರ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕೆಲಸ ಮಾಡುತ್ತಾ ವನ್ಯಜೀವಿ ಛಾಯಾಗ್ರಹಣದ ಬಗ್ಗೆ ಆಸಕ್ತಿ ಬೆಳೆಯಿತು. ನಾಗರಹೊಳೆ ಹಾಗೂ ಬಂಡೀಪುರಗಳಲ್ಲಿ ಸೇವೆಯಲ್ಲಿದ್ದಾಗ ಸಲೀಂ ಅಲಿ, ಎಂ.ವೈ.ಘೋರ್ಪಡೆ ಅವರ ಪರಿಚಯವಾಯಿತು. ಅವರಿಂದ ವನ್ಯಜೀವಿ ಛಾಯಾಗ್ರಹಣದ ಸೂಕ್ಷ್ಮತೆಗಳು ತಿಳಿದವು~ ಎಂದು ಅವರು ಹೇಳಿದರು.`ಬೆಂಗಳೂರು ನಗರದಲ್ಲಿ ಅನವಶ್ಯಕವಾಗಿ ರಸ್ತೆಗಳ ವಿಸ್ತರಣೆ ಮಾಡುತ್ತಾ, ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿದೆ. ರಸ್ತೆ ಬದಿಯ ಮರಗಳನ್ನು ಸಂರಕ್ಷಿಸುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳಿಗೆ ತರಬೇತಿ ನೀಡಬೇಕು. ಮರಗಳನ್ನು ಸಂರಕ್ಷಿಸುವ ಹಾಗೂ ಬೆಳೆಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು~ ಎಂದು ಅವರು ಆಶಿಸಿದರು.ಬಿಬಿಎಂಪಿ ವಿಶೇಷ ಆಯುಕ್ತ ಕೆ.ಆರ್.ನಿರಂಜನ್ ಮಾತನಾಡಿ, `ವನ್ಯಜೀವಿ ಛಾಯಾಗ್ರಹಣವನ್ನು ತಪಸ್ಸಿನಂತೆ ಕಾಯ್ದುಕೊಂಡು ಬಂದವರು ನೇಗಿನ್‌ಹಾಳ್. ಬದುಕಿನ ಚೈತನ್ಯವಾದ ಕಲೆಯನ್ನು ವನ್ಯಜೀವಿ ಛಾಯಾಗ್ರಹಣದ ಮೂಲಕ ಸಾಧಿಸಿದವರು ಅವರು. ಅವರ ವನ್ಯಜೀವಿ ಛಾಯಾಗ್ರಹಣ ಸೂಕ್ಷ್ಮತೆಯಿಂದ ಕೂಡಿದೆ. ಸರ್ಕಾರಿ ಸೇವೆಯಲ್ಲಿದ್ದುಕೊಂಡು ವನ್ಯಜೀವಿ ಛಾಯಾಗ್ರಹಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರ ಹವ್ಯಾಸ ಮಾದರಿಯಾಗಿದೆ~ ಎಂದರು.`ಭಾರತೀಯ ವಿದ್ಯಾಭವನ ಹಾಗೂ ಬಿಬಿಎಂಪಿ ಜಂಟಿಯಾಗಿ ನಡೆಸುತ್ತಿರುವ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಾ ಮಾದರಿಯಾಗಿವೆ. ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುತ್ತಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರುತ್ತಿದ್ದಾರೆ~ ಎಂದು ಅವರು ನುಡಿದರು.ಪ್ರಶಸ್ತಿಯು 20 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಭಾರತೀಯ ವಿದ್ಯಾಭವನದ ಇ.ಹನುಮಂತರಾವ್ ಆರ್ಟ್ ಗ್ಯಾಲರಿಯಲ್ಲಿ ಸೋಮವಾರ ಸಂಜೆ 7ರ ವರೆಗೆ ನೇಗಿನ್‌ಹಾಳ್ ಅವರ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry