ಜೀವಸೆಲೆಯಾಗಿದ್ದ ಕೆರೆಗಳು ಈಗ ನಿರ್ಜೀವ

ಗುರುವಾರ , ಜೂಲೈ 18, 2019
26 °C
ಸಾವಿರ ಸಂಖ್ಯೆಯಲ್ಲಿದ್ದ ಕೆರೆಗಳಲ್ಲಿ ಉಳಿದಿರುವುದು 21

ಜೀವಸೆಲೆಯಾಗಿದ್ದ ಕೆರೆಗಳು ಈಗ ನಿರ್ಜೀವ

Published:
Updated:

ಚಿಕ್ಕಬಳ್ಳಾಪುರ: ಬಯಲುಸೀಮೆಯಾಗಿರುವ ಜಿಲ್ಲೆಯ ನಂದಿ ಪಂಚಗಿರಿ ಶ್ರೇಣಿಯಲ್ಲಿ ಒಂದಾನೊಂದು ಕಾಲದಲ್ಲಿ ಎಂಟು ನದಿಗಳು ಹರಿಯುತ್ತಿದ್ದವು. ಇವುಗಳಿಗೆ ಸಾಥ್ ನೀಡುತ್ತಿದ್ದ ಹೆಗ್ಗಳಿಕೆ ಇಲ್ಲಿನ ಕೆರೆಗಳದ್ದಾಗಿತ್ತು. ಅಂದು ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳೇ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧ. ಎಂಟು ನದಿಗಳು ಮತ್ತು ಸಾವಿರಾರು ಕೆರೆಗಳು ಕಣ್ಮರೆಯಾಗಿ, ನದಿಮೂಲ ಮತ್ತು ಜಲಮೂಲವೇ ಇಲ್ಲವೇ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ.ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತಿದ್ದ ಬಹುತೇಕ ಕೆರೆಗಳು ಕಣ್ಮರೆಯಾಗಿವೆ. ಅದೇ ಪ್ರದೇಶದಲ್ಲಿ ಕಟ್ಟಡಗಳು ತಲೆಯೆತ್ತಿ ನಿಲ್ಲುತ್ತಿವೆ. ಕಟ್ಟಡಗಳ ನಿರ್ಮಾಣಕ್ಕಾಗಿ ಅರಣ್ಯ ಪ್ರದೇಶ ಪ್ರಮಾಣ ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ ಅತಿಯಾದ ಕೊಳವೆಬಾವಿಗಳ ಬಳಕೆಯಿಂದ ಅಂತರ್ಜಲ ಪ್ರಮಾಣವೇ ಕುಸಿಯುತ್ತಿದೆ. ಇದೆಲ್ಲದರ ಪರಿಣಾಮ ಕೆರೆ ಪ್ರದೇಶಗಳು ಕೃಷಿ ಇಲ್ಲವೇ ರಿಯಲ್ ಎಸ್ಟೇಟ್ ನಿವೇಶನಗಳಾಗಿ ಮಾರ್ಪಡುತ್ತಿವೆ.ಜಲತಜ್ಞರು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಹಲವು ವರ್ಷಗಳ ಹಿಂದೆ ಸಾವಿರಾರು ಕೆರೆಗಳಿದ್ದವು. 5ರಿಂದ 20 ಎಕರೆಗಳಷ್ಟು ವಿಸ್ತೀರ್ಣ ಹೊಂದಿದ್ದ ಬಹುತೇಕ ಕೆರೆಗಳು ಈಗ ಒತ್ತುವರಿಯಾಗಿವೆ. ಕೆಲ ಕೆರೆ ಪ್ರದೇಶಗಳಲ್ಲಿ ಕಟ್ಟಡಗಳು ನಿರ್ಮಾಣಗೊಂಡಿದ್ದರೆ, ಕೆಲವು ಹೊಲಗದ್ದೆ ಪ್ರದೇಶಗಳಾಗಿ ಮಾರ್ಪಟ್ಟಿವೆ. ಸಣ್ಣ ನೀರಾವರಿ ಇಲಾಖೆಯ ದಾಖಲೆಪತ್ರಗಳ ಪ್ರಕಾರ, 100 ರಿಂದ 500 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿರುವ ಸುಮಾರು 200ಕ್ಕೂ ಅಧಿಕ ಕೆರೆಗಳು ಇವೆ. ಆದರೆ ಅವುಗಳಲ್ಲಿ ಬಹುತೇಕ ಕೆರೆಗಳು ಬತ್ತಿ ಹೋಗಿದ್ದು, ಅಸ್ತಿತ್ವವನ್ನೇ ಕಳೆದುಕೊಂಡಿವೆ.100ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದ್ದ ಅತಿ ಹೆಚ್ಚು 87 ಕೆರೆಗಳು ಗೌರಿಬಿದನೂರು ತಾಲ್ಲೂಕಿನಲ್ಲಿದ್ದರೆ, ಅತಿ ಕಡಿಮೆ 13 ಕೆರೆಗಳು ಗುಡಿಬಂಡೆ ತಾಲ್ಲೂಕಿನಲ್ಲಿವೆ. ಚಿಕ್ಕಬಳ್ಳಾಪುರ-21, ಚಿಂತಾಮಣಿ-20, ಶಿಡ್ಲಘಟ್ಟ-26 ಮತ್ತು ಬಾಗೇಪಲ್ಲಿ-30 ಕೆರೆಗಳು ಇವೆ. ಬಹುತೇಕ ಕೆರೆಗಳಿಗೆ ಶತಮಾನಗಳ ಇತಿಹಾಸವಿದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿನ ಬಹುತೇಕ ಕೆರೆಗಳು ನಿರ್ಮಾಣಗೊಂಡಿದ್ದು, 18ನೇ ಶತಮಾನದ ಕೊನೆಯಲ್ಲಿ. ಮಳೆ ಹೆಚ್ಚಾಗುತ್ತಿದ್ದ ಆಗಿನ ದಿನಗಳಲ್ಲಿ ಮಳೆನೀರು ಮತ್ತು ಜಲಸಂಪನ್ಮೂಲ ರಕ್ಷಿಸಲೆಂದೇ ಆಗಿನ ಜನರು ಕೆರೆಗಳು ನಿರ್ಮಿಸಿದರು.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಕೆರೆಯ ವಿಷಯ ಪ್ರಸ್ತಾಪವಾದಾಗಲೆಲ್ಲ, ಹೂಳು ತೆಗೆಯುತ್ತಿರುವ ಮತ್ತು ಕೆರೆ ಪ್ರದೇಶವನ್ನು ಸಂರಕ್ಷಿಸುತ್ತಿರುವ ಬಗ್ಗೆ ಮಾಹಿತಿ ನೀಡುತ್ತಾರೆ.ಕಳೆದ ವರ್ಷ ಈ ಹಿಂದಿನ ಸರ್ಕಾರದ ಉಪಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಗಿನ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ಅವರು ಸುಮಾರು 20 ಕೆರೆಗಳಿಗೆ ಬೇಲಿ ಹಾಕಿಸಿರುವುದಾಗಿ ಮಾಹಿತಿ ನೀಡಿದ್ದರು. ಆದರೆ ಮರುದಿನವೇ ಇದನ್ನು ಆಕ್ಷೇಪಿಸಿದ್ದ ಆಯಾ ಕೆರೆ ಪ್ರದೇಶ ಸಮೀಪದ ಗ್ರಾಮಸ್ಥರು, `ನಮ್ಮ ಕೆರೆಗಳಿಗೆ ಬೇಲಿಗಳನ್ನೇ ಹಾಕಿಲ್ಲ. ಒತ್ತುವರಿಯೂ ತೆರವಾಗಿಲ್ಲ' ಎಂದು ಆರೋಪಿಸಿದ್ದರು.ನೈಸರ್ಗಿಕ ಮತ್ತು ಜಲಸಂಪನ್ಮೂಲಗಳ ರಕ್ಷಣೆಗೆ ಪ್ರಥಮ ಆದ್ಯತೆ ನೀಡುತ್ತಿದ್ದ ಆಗಿನ ಬ್ರಿಟಿಷ್ ಆಡಳಿತ ಮತ್ತು ಪಾಳೇಗಾರರು ಕೆರೆಗಳನ್ನು ನಿರ್ಮಿಸಲೆಂದೇ ಬರಡು ಜಮೀನುಗಳಲ್ಲಿ ಬೃಹತ್ ಹೊಂಡಗಳನ್ನು ಕೊರೆಸುತ್ತಿದ್ದರು. ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಪಾಳೇಗಾರರು ಎಲ್ಲಿಯೇ ಅಪಾರ ಪ್ರಮಾಣದಲ್ಲಿ ನೀರು ನಿಂತಿದ್ದರೂ ಅದನ್ನು ಕೆರೆ ರೂಪ ನೀಡಲು 100ಕ್ಕೂ ಹೆಚ್ಚು ಎಕರೆಯಷ್ಟು ಜಮೀನು ಅದಕ್ಕಾಗಿ ಮೀಸಲಿಡುತ್ತಿದ್ದರು. ಆದರೆ ಈಗ ಎಲ್ಲಿಯಾದರೂ ಖಾಲಿ ಜಮೀನು ಕಂಡರೆ ಸಾಕು, ಕೆಲವೇ ನಿಮಿಷಗಳಲ್ಲಿ ಅದು ಒತ್ತುವರಿಯಾಗಿರುತ್ತದೆ !`ರಾಜ್ಯದ ಮಲೆನಾಡಿನಷ್ಟೇ ಪ್ರಾಕೃತಿಕ ಸೊಬಗು ಮತ್ತು ನೈಸರ್ಗಿಕ ಸಂಪನ್ಮೂಲ ನಮ್ಮ ಜಿಲ್ಲೆಯಲ್ಲೂ ಇತ್ತು. ಆದರೆ ಎಲ್ಲವೂ ಬರಡಾಗತೊಡಗಿದೆ. ಒಂದು ಕಾಲದಲ್ಲಿ ಇಲ್ಲಿ ಎಂಟು ನದಿಗಳು ಹರಿಯುತ್ತಿದ್ದವು ಎಂದು ಹೇಳಿದರೆ, ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.ದಶಕಗಳಿಂದ ಹಿಂದೆ ಹರಿಯುತ್ತಿದ್ದ ನದಿಗಳನ್ನು ಮತ್ತು ಕೆರೆಗಳನ್ನು ಸಂರಕ್ಷಿಸಿಕೊಂಡಿದ್ದರೆ, ನಾವು ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಹೀಗೆ ಪರಿತಪಿಸಬೇಕಾದಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ. ನೀರಿಗಾಗಿ ಇಷ್ಟೆಲ್ಲ ಅಂಗಲಾಚುವಂತಹ ಸ್ಥಿತಿಯೂ ನಮಗೆ ಇರುತ್ತಿರಲಿಲ್ಲ' ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry