ಗುರುವಾರ , ನವೆಂಬರ್ 21, 2019
20 °C

ಜೀವ ಉಳಿಸಿತ್ತು ಜೋಗಾದ್ ಗುಂಡಿ!

Published:
Updated:

ಒಡಲ ದನಿ

ಚಿತ್ರದುರ್ಗ ಆಕಾಶವಾಣಿಯು `ಮರೆಯದ ಹಾಡು' ಎಂಬ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿತ್ತು. ಅದರಲ್ಲಿ `ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ...' ಎಂಬ ಹಾಡು ಪ್ರಸಾರವಾಗುತ್ತಿತ್ತು. ಕೇಳುಗರು ನೇರವಾಗಿ ಕರೆ ಮಾಡಿ ಈ ಹಾಡಿನೊಂದಿಗಿರುವ ತಮ್ಮ ತಮ್ಮ ನೆನಪುಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮ ಅದಾಗಿತ್ತು.ಆ ಕ್ಷಣಕ್ಕೆ ಕಾರಣಾಂತರದಿಂದ ನಾನು ಫೋನ್ ಮಾಡಿ ಮಾತನಾಡಲು ಸಾಧ್ಯವಾಗಲಿಲ್ಲ. ಆದರೂ ಈ ಹಾಡಿನೊಂದಿಗಿರುವ ಹಳೆಯ ನೆನಪು ನನಗೆ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ.ನಾನು 4 ಅಥವಾ 5ನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಮನೆ ಮಂದಿಯೆಲ್ಲ ಒಮ್ಮೆ ಜೋಗ ಜಲಪಾತಕ್ಕೆ ಹೋಗಿದ್ದೆವು. ಹಿಂದೆಲ್ಲ ಖಾಸಗಿ ಬಸ್‌ನವರು ಹೊಸ ಬಸ್‌ಗಳನ್ನು ಕೊಂಡು ತಂದಾಗ ತಮ್ಮ ಸ್ನೇಹಿತರು, ನೆಂಟರು, ಮೆಕ್ಯಾನಿಕ್ ಮನೆಯವರೂ ಸೇರಿದಂತೆ, ಬಸ್ ಹಿಡಿಸುವಷ್ಟು ಜನರನ್ನು ಕರೆದುಕೊಂಡು, ಮೊದಲು ಯಾವುದಾದರೂ ದೇವಸ್ಥಾನಕ್ಕೆ ಹೋಗಿ ನಂತರ ಒಂದು ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಇಂತಹ ಪ್ರವಾಸಕ್ಕೆ ನಾವು ಕೂಡ ಹೋಗಿದ್ದೆವು.ಅಂದಿನ ದಿನ ನಾವು ಪ್ರವಾಸ ಹೋಗಿದ್ದು ಜೋಗ ಜಲಪಾತಕ್ಕೆ. ಬೆಳಗಿನ ಜಾವ ಸುಮಾರು 7 ಗಂಟೆಗೆಲ್ಲ ಜೋಗ ತಲುಪಿದ್ದೆವು. ಆಗ ಮಳೆಗಾಲ ಬೇರೆ. ಜಿಟಿ ಜಿಟಿ ಮಳೆ ಹಿಡಿದಿತ್ತು. ಒಮ್ಮಮ್ಮೆ ಜೋರಾಗಿಯೂ ಬರುತ್ತಿತ್ತು. ಆಗೆಲ್ಲ ಮಳೆಯಲ್ಲಿ ನೆನೆಯುವುದೆಂದರೆ ನಮಗೆ ತುಂಬಾ ಖುಷಿ. ಹೀಗೆ ನೆನೆದು ಜೋಗ ಜಲಪಾತವನ್ನು ನೋಡಿ ಅಲ್ಲೇ ಪಕ್ಕಕ್ಕೆ ಬಂದು ನಿಂತೆವು.ಆಗಲೇ ಆ ಚಳಿಗೋ ಏನೋ ಅಂತಹ ಪ್ರಕೃತಿ ಸೌಂದರ್ಯದ ಮಧ್ಯದಲ್ಲೂ ಹೊಟ್ಟೆ ಹಸಿವು ನಮ್ಮನ್ನು ಕಾಡಿತ್ತು. ಸುಮಾರು 10 ಗಂಟೆ ಇದ್ದಿರಬಹುದು. ಎಲ್ಲರಿಗೂ ರುಚಿಯಾದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ತಿಂಡಿ ತಿನ್ನುತ್ತಿದ್ದೆವು. ಸ್ವಲ್ಪ ಇಳಿಜಾರಿನ ಪ್ರದೇಶದ ಮುಂಭಾಗದಲ್ಲಿ ಒಂದು ಕಾಲುವೆ. ಅದರಲ್ಲಿ ಅಂದು ನೀರು ಬಹಳ ರಭಸವಾಗಿಯೇ ಹರಿಯುತ್ತಿತ್ತು. ಆ ಸಂದರ್ಭದಲ್ಲಿ ಆ ಬಸ್ಸಿನ ಸಾಹುಕಾರರ ಮಗಳು ಕಾಲುವೆಯ ಹತ್ತಿರ ಹೋದಳು.ಅದನ್ನು ನಾನು ಗಮನಿಸಿದ್ದೆ. ಅವಳು ಆಗ ನರ್ಸರಿ ಇದ್ದಿರಬಹುದು ಅಥವಾ ಇನ್ನೂ ಶಾಲೆಗೆ ಸೇರಿಸಿದ್ದರೋ ಇಲ್ಲವೋ ಗೊತ್ತಿಲ್ಲ. ಅವಳು ತನ್ನ ಕೈ ತೊಳೆದುಕೊಳ್ಳಲೋ ಅಥವಾ ನೀರಲ್ಲಿ ಆಡಲೆಂದೋ ಹೋಗಿ ಪೂರ್ತಿ ಬಗ್ಗಿ ಕಾಲುವೆಯ ಒಳಗೆ ಬಿದ್ದುಬಿಟ್ಟಳು.ಅದನ್ನು ಗಮನಿಸಿದ ನಾನು ಕೈಯ್ಯಲ್ಲಿದ್ದ ತಿಂಡಿ ತಟ್ಟೆಯನ್ನು ಬಿಸಾಡಿ ಕಾಲುವೆ ಬಳಿ ಓಡಿದೆ. ಆ ಮಗುವಿನ ಕೈ ಹಿಡಿದು ಎಳೆಯಲು ಮುಂದಾದೆ. ಆದರೆ ನೀರಿನ ರಭಸ ನನ್ನನ್ನೂ ಎಳೆದುಕೊಳ್ಳುವಷ್ಟು ಜೋರಾಗಿತ್ತು. ಆ ಕ್ಷಣದಲ್ಲಿ ನನಗೆ ಎಷ್ಟೇ ಕಷ್ಟವಾದರೂ ಆ ಮಗುವಿನ ಕೈ ಬಿಡಲಿಲ್ಲ. ಬದಲಿಗೆ ಜೋರಾಗಿ `ಆಂಟಿ, ಮಾಮ, ಅತ್ತೆ' ಎಂದು ಕೂಗಾಡಿದ್ದೆ.ಕೂಡಲೇ ಎಲ್ಲರೂ ಓಡಿ ಬಂದು ನನ್ನನ್ನೂ, ಮಗುವನ್ನೂ ಮೇಲಕ್ಕೆ ಎತ್ತಿದರು. ನಾನು ನೀರಿನಲ್ಲಿ ಬಿದ್ದಿರಲಿಲ್ಲವಾದರೂ ಬೋರಲು ಮಲಗಿ ಆ ಮಗುವಿನ ಕೈ ಹಿಡಿದುಕೊಂಡೇ ಇದ್ದೆ. ಈಗ ನಾನೂ ಸುರಕ್ಷಿತ. ಆ ಮಗುವೂ ಸುರಕ್ಷಿತ.

ಈಗ ಅವಳು ಬೆಳೆದು ದೊಡ್ಡವಳಾಗಿದ್ದಾಳೆ. ಮದುವೆ ಆಗಿ ಮಕ್ಕಳೂ ಇದ್ದಾರೆ.ಅವಳನ್ನು ನೋಡಿದಾಗ, ನಾನು ಅವಳನ್ನು ಕಾಪಾಡಿದ್ದು ನೆನೆದು ಖುಷಿಯಾಗುತ್ತದೆ. ಅವಳಿಗೆ ಆ ನೆನಪು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನಗಂತೂ ಜೋಗದ ವಿಷಯ ಬಂದಾಗೆಲ್ಲ, `ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ...' ಎಂಬ ಹಾಡು ಕೇಳಿದಾಗಲೆಲ್ಲ ಥಟ್ ಎಂದು ನೆನಪಿಗೆ ಬರುವುದು ಆ ಘಟನೆ.

 

ಪ್ರತಿಕ್ರಿಯಿಸಿ (+)