ಜೀವ ಉಳಿಸುವವರ ಬದುಕು

7

ಜೀವ ಉಳಿಸುವವರ ಬದುಕು

Published:
Updated:
ಜೀವ ಉಳಿಸುವವರ ಬದುಕು

ಇವರಿಗೆ `ನಿಧಾನವೇ ಪ್ರಧಾನ~ ಅಲ್ಲವೇ ಅಲ್ಲ. ವಾಹನ ಚಲಿಸುವಾಗ ಯಾವ ನಿಯಮವೂ ಇವರನ್ನು ಹಿಡಿದು ನಿಲ್ಲಿಸುವುದಿಲ್ಲ. ಇವರೊಂದಿಗೆ ಇರುವವರು ಸಾವಿನೊಂದಿಗೆ ಸೆಣಸುವಾಗಲೂ ವಿಚಲಿತರಾಗುವುದಿಲ್ಲ. ನೋವಿನಆಕ್ರಂದನಗಳು ಕಿವಿತುಂಬಿದಾಗಲೂ ಒಂದೇ ಗುರಿ. ರೋಗಿಯನ್ನು ಆಸ್ಪತ್ರೆಗೆ ಸಾಗಿಸುವುದು. ಸಕಾಲಕ್ಕೆ ಸಾಗಿಸುವುದು. ಸುರಕ್ಷಿತವಾಗಿ ಸಾಗಿಸುವುದು. ಇದು ಆ್ಯಂಬುಲೆನ್ಸ್ ಚಾಲಕರ ಕರ್ತವ್ಯ. ಸಂಜೀವಿನಿ ಪರ್ವತ ಹೊತ್ತುತಂದ ಹನುಮಂತನ ಸಾಹಸಕ್ಕೆ ಇವರ ಪಡಿಪಾಟಲನ್ನು ಹೋಲಿಸುವವರೂ ಇದ್ದಾರೆ.

ಬೆಂಗಳೂರಿನಂಥ ಮಹಾನಗರಿಯಲ್ಲಿ ಪ್ರತಿದಿನವೂ ಆ್ಯಂಬುಲೆನ್ಸ್ ಸೇವೆ ಸವಾಲಿನದ್ದೇ ಸರಿ. ದೊಡ್ಡ ಊರು. ಗೊತ್ತಿಲ್ಲದ ದೂರದೂರದ ಸ್ಥಳಗಳು. ಆಸ್ಪತ್ರೆಗೆ ಸಾಗಲು ಟ್ರಾಫಿಕ್ ಜಾಮ್ ದೊಡ್ಡ ಅಡೆತಡೆ ಸೃಷ್ಟಿಸುತ್ತದೆ. ಆದರೂ ವಾಯುಮಾರ್ಗದಲ್ಲಿ ಸಂಚರಿಸುವಂತೆ, ಕೆಲವೊಮ್ಮೆ ರಸ್ತೆಯಲ್ಲಿ ಹಾವು ಹರಿದಂತೆ, ಇನ್ನು ಕೆಲವೊಮ್ಮೆ ಸಮುದ್ರದೊಳಗೆ ನುಗ್ಗಿದಂತೆ ನುಗ್ಗುತ್ತಾರೆ.

ಅಪಘಾತಕ್ಕೀಡಾದವರು, ಆಘಾತಕ್ಕೊಳಗಾದವರು, ರೋಗಿಗಳು, ಗರ್ಭಿಣಿಯರು ಪ್ರತಿಯೊಬ್ಬರನ್ನು ಸಾಗಿಸುವಾಗಲೂ ವಿಶೇಷ ಕಾಳಜಿ ವಹಿಸಬೇಕು. ಆದರೆ ಇಷ್ಟೆಲ್ಲ ಮಾಡಿದರೂ ಇವರ ಸೇವೆ ಗಣನೆಗೆ ಬಾರದು. ಆಸ್ಪತ್ರೆಗೆ ಸೇರಿಸುವ ಭರದಲ್ಲಿ ಅಥವಾ ಧಾವಂತದಲ್ಲಿ ಅವರಿಗೊಂದು ಮಾತು ಹೇಳುವುದನ್ನೂ ಮರೆಯುವವರೇ ಹೆಚ್ಚು. ಅದು ಸಹಜವೂ ಹೌದು.

ಇಲ್ಲೊಂದಷ್ಟು ಆ್ಯಂಬುಲೆನ್ಸ್ ಚಾಲಕರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.

ಬಾಣಸವಾಡಿ ಅಗ್ನಿಶಾಮಕ ಠಾಣೆಯಲ್ಲಿ ಆಂಬ್ಯುಲೆನ್ಸ್ ಚಾಲಕರಾಗಿರುವ ವಾಸು ತಮ್ಮ ಸೇವಾ ಅವಧಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ನಿಭಾಯಿಸಿದ್ದಾರೆ. ಯಾರೊಬ್ಬರೂ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತರಾಗಿಲ್ಲ ಎಂಬುದೇ ವಿಶೇಷ ಎನ್ನುತ್ತಾರೆ ವಾಸು.

ಆದರೆ ಇವರನ್ನು ವಿಚಲಿತಗೊಳಿಸಿದ ಘಟನೆ ಮಾತ್ರ ಇನ್ನೂ ನೆನಪಿನಂಗಳದಿಂದ ಮಾಸಿಲ್ಲ. ಆರು ತಿಂಗಳ ಹಿಂದೆ ತಾಯಿಯೊಬ್ಬಳು ಹಾಲು ಕಾಯಿಸಲು ಸ್ಟವ್ ಹಚ್ಚುವಾಗ ಗ್ಯಾಸ್ ಸ್ಫೋಟಗೊಂಡಿತ್ತು. ಬಹುತೇಕ ಸುಟ್ಟಗಾಯಗಳಿದ್ದವು. ಸಾವಿನ ದವಡೆಗೆ ತಲುಪಿದ್ದ ಆಕೆಯನ್ನು ಶೀಘ್ರವಾಗಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಮಹಿಳೆಯ ನೋವಿಗಿಂತ ಮಗುವಿನ ಅಸಹಾಯಕತನ ಕಂಡು ಕಣ್ಣು ತೇವವಾಗಿತ್ತು. ಆಕೆ ಗುಣಮುಖವಾಗಿದ್ದು ಕೇಳಿ ಸಮಾಧಾನವೆನಿಸುತ್ತದೆ. ಅಮ್ಮನ ಅವಸ್ಥೆಯನ್ನೇ ಅರಿಯದ ಆ ಕಂದ ನೆನಪಾದಾಗಲೆಲ್ಲ ಕಣ್ತುಂಬಿಕೊಳ್ಳುತ್ತದೆ ಎನ್ನುತ್ತಾರೆ ವಾಸು.

ಮಾರುತಿ ವಾಸು

ವಾಸು ಈ ಮೊದಲು ತುಮಕೂರಿನಲ್ಲಿ ಜೀಪ್ ಚಾಲಕರಾಗಿದ್ದರು. ನಂತರ ಆ್ಯಂಬುಲೆನ್ಸ್ ಚಾಲಕರಾಗಿ ದುಡಿಯುವ ಅವಕಾಶ ಸಿಕ್ಕಿತು. ಮೊದಲೆಲ್ಲ ರಕ್ತ, ಸಾವು, ನೋವು ನೋಡಿ ಊಟ ಸೇರುತ್ತಿರಲಿಲ್ಲ, ನಿದ್ದೆ ಬರುತ್ತಿರಲಿಲ್ಲ. ಈಗ ಎಲ್ಲದಕ್ಕೂ ಮನಸ್ಸು ಒಗ್ಗಿ ಹೋಗಿದೆ. ಸಾವು-ನೋವುಗಳಂತೂ ನಮ್ಮ ಹಿಡಿತದಲ್ಲಿಲ್ಲ ಎನ್ನುವ ಸತ್ಯ ತಿಳಿದಿದೆ. ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿದರೆ ಸಾವನ್ನು ಮುಂದೂಡಬಹುದು ಎಂಬ ವಾಸ್ತವವೂ ಅರಿವಿಗೆ ಬಂದಿದೆ. ಹಾಗಾಗಿ ಯಾವುದಕ್ಕೂ ವಿಚಲಿತನಾಗದೇ ಸೂಕ್ತ ಸಮಯದಲ್ಲಿ ಶೀಘ್ರವಾಗಿ ಆಸ್ಪತ್ರೆಗೆ ಸಾಗಿಸುವತ್ತ ಮಾತ್ರ ಗಮನ ಕೇಂದ್ರೀಕರಿಸಿದ್ದೇನೆ. ಕೊನೆಯ ಪಕ್ಷ ನನ್ನ ಪಾಲಿನ ಕೆಲಸವನ್ನಾದರೂ ನಿಭಾಯಿಸಿರುವ ತೃಪ್ತಿ ತಮಗಿದೆ ಎನ್ನುತ್ತಾರವರು.

ಹೆಸರು ರಾಜು ಮಂಕಣಿ ಸುಮಾರು 30ರ ಆಸುಪಾಸು. ಆರ್.ಟಿ.ನಗರ ಪೊಲೀಸ್ ಠಾಣೆಯ ಆಂಬ್ಯುಲೆನ್ಸ್‌ನಲ್ಲಿ ಚಾಲಕ. ಮೂರು ವರ್ಷದ ಸೇವಾ ಅವಧಿ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕೆಲಸ. ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಇವುಗಳಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆ, ಅಪಘಾತ ಎರಡೂ ಅಕಾಲಿಕ ಮರಣಗಳೇ. ಈ ಸಾವುಗಳಿಗಿಂತ ಆ ಕುಟುಂಬದವರ ನೋವೇ ಇವರನ್ನು ಅಲುಗಾಡಿಸುತ್ತದೆ ಎನ್ನುತ್ತಾರೆ ರಾಜು. `ನಿತ್ಯ ಅಪಘಾತಗಳು, ಸುಟ್ಟಗಾಯ, ಸಾವು,ನೋವು ನೋಡಿ ಮನೆಗೆ ಬಂದರೆ ಊಟ ಸೇರುತ್ತಿರಲಿಲ್ಲ. 58 ಕೆ.ಜಿ. ಇದ್ದ ನಾನು ಆ್ಯಂಬುಲೆನ್ಸ್ ಚಾಲಕನಾದ ಎರಡೇ ತಿಂಗಳಲ್ಲಿ 45 ಕೆ.ಜಿ.ಯಾದೆ~ ಎಂದು ಹೇಳಿಕೊಳ್ಳುತ್ತಾರೆ ರಾಜು.

ಈಗ ಪರಿಸ್ಥಿತಿ ಸುಧಾರಿಸಿದೆ. ಸಾವು ನೋವಿಗೆ ನಿರ್ಲಿಪ್ತನಾಗಿದ್ದೇನೆ. ಆದರೂ ಕೆಲವೊಮ್ಮೆ ಆ ಗುಂಗಿನಿಂದ ಹೊರಬರುವುದು ಕಷ್ಟವೇ ಆಗುತ್ತದೆ ಎನ್ನುತ್ತಾರೆ ಅವರು.

ಮಾರುತಿ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಹಲವಾಗಿಲು ಗ್ರಾಮದಿಂದ ಬಂದ ಚಾಲಕ. ಕೆಲಸಕ್ಕೆ ಸೇರಿದಾಗ ಬೆಂಗಳೂರು ಹೊಸ ಊರು. ಯಾವುದೋ ಬಡಾವಣೆಯಿಂದ ಬಂದ ಕರೆ. ಸ್ಥಳ ಪರಿಚಯವಿಲ್ಲ. ಜನರನ್ನು ಕೇಳುತ್ತ ಹೋಗಬೇಕಾಗಿ ಬಂತು. ಒಂದಷ್ಟು ನಿಮಿಷಗಳ ವಿಳಂಬ.

ನೆರೆದವರಿಗೆ ಅದೆಲ್ಲ ಅರ್ಥವಾಗುವುದಿಲ್ಲ. ಅವರನ್ನೂ ದೂಷಿಸುವಂತಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆ ಆಕ್ರೋಶವನ್ನೆಲ್ಲ ಸಹಿಸಿಕೊಂಡೆ. ಅಲ್ಲಿಗೆ ತಲುಪಲು ವಿಳಂಬವಾಗಿತ್ತು. ಅಲ್ಲಿಂದ ರೋಗಿಗೆ ಆಸ್ಪತ್ರೆಗೆ ಸಾಗಿಸಲು ಇನ್ನಷ್ಟು ತಡವಾಗಿದ್ದು ಈ ಜಗಳಗಳಿಂದ. ನಂತರ ಸ್ಟೇರಿಂಗ್ ಹಿಡಿದಾಗ ಇದೆಲ್ಲವನ್ನೂ ಮರೆತು, ಅಪಘಾತಕ್ಕೆ ಒಳಗಾದವರನ್ನು ಅಸ್ಪತ್ರೆಗೆ ತಲುಪಿಸಿದೆ.

ಈ ಜಗಳ, ಕಲಹ, ವಾದ, ಅಹಂಕಾರಗಳೆಲ್ಲ ಕ್ಷಣಿಕ ಅನಿಸಿತು. ಅಂದಿನಿಂದಲೇ ಯಾವುದೇ ದೋಷಾರೂಪಣೆಗಳಿದ್ದರೂ ಮನಸಿಗೆ ತೆಗೆದುಕೊಳ್ಳಲೇ ಇಲ್ಲ. ಇದೆಲ್ಲವೂ ಪರಿಸ್ಥಿತಿ ಆಧಾರಿತ ವರ್ತನೆ ಎನಿಸಿತು. ಆಕ್ರೋಷದ ಬಗ್ಗೆ ಅನುಕಂಪ ಮೂಡಲಾರಂಭಿಸಿತು ಎನ್ನುತ್ತಾರೆ ಮಾರುತಿ.

ಕೆಲವೊಮ್ಮೆ ಕಿಡಿಗೇಡಿಗಳು ಸುಮ್ಮನೆ ಕರೆ ಮಾಡುತ್ತಾರೆ. ಅಪಘಾತ ಸ್ಥಳಕ್ಕೆ ಧಾವಿಸಿ ಹೋಗುತ್ತೇವೆ. ಆದರೆ ಅಲ್ಲಿ ಏನೂ ಆಗಿರುವುದಿಲ್ಲ. ಆದರೂ ಅದನ್ನು ನಂಬುವುದು ಹೇಗೆ? ಸ್ಥಳ ಸರಿಯಾಗಿತ್ತೇ... ನಾವೆಲ್ಲಾದರೂ ಬೇರೆಡೆ ಬಂದೆವೆ? ಅಗತ್ಯವಿದ್ದವರು ಇನ್ನೆಲ್ಲಿಯಾದರೂ ಪರಿತಪಿಸುತ್ತಿದ್ದಾರೆಯೇ ಇಂಥ ಪ್ರಶ್ನೆಗಳು ಆ ಇಡೀ ದಿನ ಮನಕೊರೆಯುತ್ತವೆ. ಒಂದು ವೇಳೆ ಸ್ಥಳದ ಬಗ್ಗೆ ಗೊಂದಲವಾಗಿ, ಯಾರದ್ದಾದರೂ ಸಾವು ಸಂಭವಿಸಿದರೆ... ಇಂಥ ಅಪರಾಧಿ ಪ್ರಜ್ಞೆ ಕೆಲವೊಮ್ಮೆ ಕಾಡುತ್ತದೆ ಎಂಬುದು ಅವರ ಮನದಾಳದ ಮಾತು.

ಬೆಂಗಳೂರಿನಲ್ಲಿ 72 ಆರೋಗ್ಯ ಕವಚ (`108~ ಆಂಬ್ಯುಲೆನ್ಸ್) ವಾಹನಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳ ಆಂಬ್ಯುಲೆನ್ಸ್‌ಗಳಿವೆ. ಒಬ್ಬೊಬ್ಬರ ಬಳಿಯೂ ಅನೇಕ ಸಾವು ನೋವಿನ ಕತೆಗಳೇ ಇವೆ. ಪ್ರತಿದಿನವೂ ಸಾವು ನೋವಿನೊಂದಿಗೆ ಮುಖಾಮುಖಿಯಾಗುತ್ತಿದ್ದರೂ ಜೀವನಪ್ರೀತಿ ಕಳೆದುಕೊಳ್ಳದೇ, ಇನ್ನೊಬ್ಬರ ಜೀವನ ಉಳಿಸಲು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಸದಾ ಜಾಗೃತರಾಗಿಸುವ ಈ ಚಾಲಕರಿಗೆ ಒಂದು ಸಲಾಂ ಹೇಳಲೇ ಬೇಕಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry