ಜೀವ ತಳೆಯುತ್ತಿರುವ ಕಟ್ಟೆಕೆರೆ

7

ಜೀವ ತಳೆಯುತ್ತಿರುವ ಕಟ್ಟೆಕೆರೆ

Published:
Updated:
ಜೀವ ತಳೆಯುತ್ತಿರುವ ಕಟ್ಟೆಕೆರೆ

ಗುಂಡ್ಲುಪೇಟೆ:  ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ `ಕಟ್ಟೆಕೆರೆ~ಯು ಬಹಳ ಪ್ರಯೋಜನಕಾರಿಯಾಗಿದೆ. ಗೋಪಾಲಪುರವು ಬಂಡೀಪುರ ರಾಷ್ಟ್ರೀಯ ಉದ್ಯಾನ ವನದ ವ್ಯಾಪ್ತಿಗೆ ಸೇರಿದ ಗ್ರಾಮವಾಗಿದ್ದು, ವರ್ಷದ ಮೊದಲ ಮಳೆಯು ಈ ಗ್ರಾಮಕ್ಕೆ ಬೀಳುತ್ತದೆ. ಆದರೂ ಸುತ್ತಮುತ್ತಲಿನ ಜಮೀನುಗಳಲ್ಲಿ ಕೊರೆಯಿಸಿರುವ ಕೊಳವೆ ಬಾವಿಗಳು ಅಂತರ್ಜಲದ ಕೊರತೆ ಎದುರಿಸುತ್ತಿದೆ.ಇದನ್ನು ಮನಗಂಡ ಗ್ರಾಮಸ್ಥರು ಗ್ರಾಮದಲ್ಲಿ ಒಂದು ಕೆರೆ ನಿರ್ಮಾಣವಾಗಬೇಕೆನ್ನುವ ಸದುದ್ದೇಶದಿಂದ ಶಾಸಕ ಎಚ್.ಎಸ್. ಮಹದೇವಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ನಂತರ ಈ ಕಟ್ಟೆಕೆರೆ ನಿರ್ಮಾಣಕ್ಕಾಗಿ ಅಂದಿನ ಸರ್ಕಾರ 90 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿತು. 1995-96ನೇ ಸಾಲಿನಲ್ಲಿ ಕಾಮಗಾರಿ ಪ್ರಾರಂಭಗೊಂಡು ಆಂಧ್ರ ಮೂಲದ ಗುತ್ತಿಗೆದಾರ ಶಿವಪ್ರಸಾದ್ ರೆಡ್ಡಿ ಬಹಳ ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಎಥೇಚ್ಛವಾಗಿ ಮಳೆ ಬಂದ ಕಾರಣ ಕೆರೆಯ ಏರಿ ಒಡೆದು ಹೋಗಿ ಅಲ್ಲಿದ್ದ ಯಂತ್ರೋಪಕರಣಗಳೆಲ್ಲವು ಮಳೆಗೆ ಕೊಚ್ಚಿ ಹೋಯಿತು. ಇದರಿಂದ ತೀವ್ರ ನಷ್ಟ ಅನುಭವಿಸಿದ ಗುತ್ತಿಗೆದಾರ ಈ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದರು.`ತಾಲ್ಲೂಕಿನ ಗುತ್ತಿಗೆದಾರರು ಈ ಕೆಲಸವನ್ನು ಮುಂದುವರಿಸಿದ್ದು, ಪ್ರಸ್ತುತ 30 ಲಕ್ಷ ರೂ. ಗಳ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಗಿಸಿದರೆ ಈ ಕಟ್ಟೆಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿ ರೈತರುಗಳಿಗೆ ಬಹಳ ಉಪಯೋಗವಾಗುತ್ತದೆ~ ಎನ್ನುವುದು ಗೋಪಾಲಪುರ ಗ್ರಾಮಸ್ಥರ ಅಭಿಪ್ರಾಯ.ಈ ಕಟ್ಟೆಕೆರೆಗೆ ಹೆಚ್ಚಾಗಿ ನೀರು ಬಂದರೆ ಗೋಪಾಲಪುರ ಸುತ್ತಮುತ್ತಲಿನ ಜಮೀನುಗಳ ಅಂತರ್ಜಲದ ಮಟ್ಟ ಹೆಚ್ಚಲಿದೆ.ಈ ಕೆರೆಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದಲೂ ನೀರು ಹರಿದು ಬರುತ್ತದೆ. ಕೆರೆ ಕಾಮಗಾರಿ ಪ್ರಾರಂಭವಾದಾಗ ಈ ಭಾಗದ ರೈತರ ಕನಸೇ ಬೇರೆಯಾಗಿತ್ತು. ಈ ಕೆರೆಯ ನೀರನ್ನು ಬಳಸಿಕೊಂಡು ಬೇಸಾಯ ಮಾಡಿ ಬತ್ತ, ಕಬ್ಬು, ಅರಿಸಿನ ಹಾಗೂ ಇತರೆ ಬೆಳೆಗಳನ್ನು ಬೆಳೆಯುವ ಆಶಯ ಹೊಂದಿದ್ದರು.ಆದ್ದರಿಂದ ಕೆರೆ ಕಾಮಗಾರಿ ಪೂರ್ಣಗೊಂಡರೆ ರೈತರ ಆಸೆ ಕೈಗೂಡಲಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. 

ಈ ಕಟ್ಟೆಕೆರೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಗೋಪಾಲಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry