ಭಾನುವಾರ, ಜನವರಿ 26, 2020
28 °C

ಜೀವ ಬೆದರಿಕೆ ಆರೋಪ; ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ವಿಮ್ಸ ನಿರ್ದೇಶಕ ಡಾ.ಬಿ. ದೇವಾನಂದ್ ಅವರು ಜೀವಬೆದರಿಕೆ ಒಡ್ಡಿದ್ದಾರೆ ಎಂದು ಪತ್ರ ಬರೆದು ದೂರು ಸಲ್ಲಿಸಿರುವ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ)ಯ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ.ವಿ. ಶ್ರೀನಿವಾಸ್ ಅವರಿಗೆ ಸೂಕ್ತ ಭದ್ರತೆ ಒದಗಿಸಿ, ಪ್ರಕರಣದ ಕುರಿತು  ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.ವಿಮ್ಸ ನಿರ್ದೇಶಕರ ಹುದ್ದೆಯ ನಿಯಮಬಾಹಿರ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರಿಂದ  ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ಡಾ. ದೇವಾನಂದ್ ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಡಾ.ವಿ. ಶ್ರೀನಿವಾಸ್, ತಮಗೂ ತಮ್ಮ ಕುಟುಂಬದ ಸದಸ್ಯರಿಗೂ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿ ತಮಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದು, ಪತ್ರ ಸೋಮವಾರ ಕೈಸೇರಿದೆ ಎಂದು ಅವರು ಹೇಳಿದ್ದಾರೆ.ಡಾ. ಬಿ. ದೇವಾನಂದ ಅವರ ಕಾನೂನು ಬಾಹಿರ ನೇಮಕ ಪ್ರಶ್ನಿಸಿ ಧಾರವಾಡದ ಹೈಕೋರ್ಟ್ ಸಂಚಾರಿ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇದೇ 5ರಂದು ಶಾಸಕರು ತಮ್ಮ ಮನೆಗೆ ಕರೆಯಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಡಾ.ವಿ. ಶ್ರೀನಿವಾಸ್ ಪತ್ರದಲ್ಲಿ ತಿಳಿಸಿದ್ದಾರೆ. ವಿಮ್ಸ ನಿರ್ದೇಶಕರ ನೇಮಕದಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಸಂಸ್ಧೆಯ ನಿರ್ದೇಶಕ ಡಾ. ದೇವಾನಂದ ನಿರ್ದೇಶಕರಾಗಬೇಕಾದ ಅರ್ಹತೆ ಹೊಂದಿಲ್ಲ ಎಂದು ಆರೋಪಿಸಿ, 2010ರ ಆಗಸ್ಟ್ 24ರಂದು ಧಾರವಾಡದ ಹೈಕೋರ್ಟ್ ಸಂಚಾರಿ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ 2010ರ ಅಕ್ಟೋಬರ್ 10ರಂದು ಮಧ್ಯಂತರ ಆದೇಶ ನೀಡಿ, ನೇಮಕಕ್ಕೆ ತಡೆಯಾಜ್ಞೆ ನೀಡಿದೆ. ಇದನ್ನು ಮುಂದಿನ ಕ್ರಮಕ್ಕೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಲಾಗಿದೆ. ಈ ತಡೆಯಾಜ್ಞೆ ಜಾರಿಗೊಳಿಸಲು ಸರ್ಕಾರದ ಅಧೀನ ಕಾರ್ಯದರ್ಶಿಯವರಿಗೆ ಕಾನೂನು ರೀತ್ಯ ನೋಟೀಸ್ ಜಾರಿ ಮಾಡಲಾಗಿದೆ. ರಿಟ್ ಅರ್ಜಿ ಸಲ್ಲಿಸಿದ್ದರಿಂದಲೇ ವಿಮ್ಸ ನಿರ್ದೇಶಕ ಡಾ.ಬಿ. ದೇವಾನಂದ್ ಹಾಗೂ ಅವರ ಆಪ್ತರಾಗಿರುವ ಶಾಸಕ ಜಿ. ಸೋಮಶೇಖರ ರೆಡ್ಡಿ ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಸ್ಥಳೀಯ ಅಶೋಕ ನಗರದಲ್ಲಿರುವ ತಮ್ಮ ನಿವಾಸಕ್ಕೆ ಜನವರಿ 5ರಂದು ಮಧ್ಯಾಹ್ನ 3.45ಕ್ಕೆ ಕರೆಯಿಸಿದ ಸೋಮಶೇಖರರೆಡ್ಡಿ, ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ತಿಳಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಈ ವೇಳೆ ಡಾ.ದೇವಾನಂದ್ ಸಹ ಉಪಸ್ಥಿತರಿದ್ದರು ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಡಾ. ಚಂದ್ರಗುಪ್ತ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಅನಗತ್ಯ ಕಿರಿಕಿರಿ ಬೇಡ ಎಂಬ ಉದ್ದೇಶದಿಂದ ಡಾ.ಶ್ರೀನಿವಾಸ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡದೆ ನೇರವಾಗಿ ತಮಗೆ ಪತ್ರ ಬರೆದಿದ್ದಾರೆ. ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ ಚರ್ಚಿಸಲಾಗಿದೆ. ಎರಡೂ ಕಡೆಯವರೊಂದಿಗೆ ಚರ್ಚಿಸಿ ತನಿಖೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.ನನಗೆ ಗೊತ್ತಿಲ್ಲ: `ಜೀವ ಬೆದರಿಕೆ ಒಡ್ಡಿದ್ದಾಗಿ ನನ್ನ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿರುವ ವಿಮ್ಸನ ಡಾ.ಶ್ರೀನಿವಾಸ್ ಅವರನ್ನು ನಾನು ನೋಡಿಯೇ ಇಲ್ಲ. ಅವರು ತಿಳಿಸಿದ ದಿನ ಸಂಜೆ ನಾನು ಬಳ್ಳಾರಿಯಲ್ಲೇ ಇರಲಿಲ್ಲ~ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ತಿಳಿಸಿದ್ದಾರೆ.ಬಳ್ಳಾರಿಯಲ್ಲಿ ಸೋಮವಾರ ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, `ಆ ವ್ಯಕ್ತಿಗೂ ನನಗೂ ಪರಿಚಯವೇ ಇಲ್ಲ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದ ಮೇಲೆ ಅವರಿಗೆ ಬೆದರಿಕೆ ಒಡ್ಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ~ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)