ಜುಗಲ್-ಝಲಕ್

7

ಜುಗಲ್-ಝಲಕ್

Published:
Updated:
ಜುಗಲ್-ಝಲಕ್

ಪ್ರಪಂಚ-ದಿ ವರ್ಲ್ಡ್ ಆಫ್ ಮ್ಯೂಸಿಕ್ ಸಂಸ್ಥೆ ಆಯೋಜಿಸಿದ್ದ `ಅಮೋಘ ಜುಗಲ್‌ಬಂದಿ ಸ್ಯಾಕ್ಸೋಫೋನ್ ಮತ್ತು ಹಾಡುಗಾರಿಕೆ~ ಕಾರ್ಯಕ್ರಮವು ಎನ್.ಆರ್. ಕಾಲೋನಿಯ ಬಿ.ಎಂ.ಶ್ರೀ. ಕಲಾಭವನದಲ್ಲಿ ನಡೆಯಿತು.ತುಂಬಿದ ಸಭಾಂಗಣ. ಮೊದಲು ಪುರಂದರದಾಸರ ಚಿತ್ರಪಟದೆದುರು ದೀಪ ಬೆಳಗಿಸಿ, ಸಂಗೀತ ಕ್ಷೇತ್ರದ ದಿಗ್ಗಜರೆಲ್ಲರಿಗೂ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.ಹಿಂದೂಸ್ತಾನಿ, ಭಕ್ತಿಗೀತೆ ಮತ್ತು ಹಿನ್ನಲೆ ಗಾಯನದಲ್ಲೂ ಹೆಸರು ಮಾಡಿರುವ ವಿದುಷಿ ಎಚ್.ಜಿ. ಚೈತ್ರಾ ತಮ್ಮ ತಂದೆ ವಿದ್ವಾನ್ ಎಚ್.ಎಸ್. ಗೋಪಿನಾಥ್ ಅವರ `ತಬಲ~ ವಾದನದ ಸಹಕಾರದೊಂದಿಗೆ `ತೋರೇಬಿನ ಚೈನ್ ನಾ ಪರೇ~ (ರಾಗ: ಮಾಲ್‌ಕೌಂಸ್) ಗೀತೆಯೊಂದಿಗೆ ಗಾಯನ ಆರಂಭಿಸಿದರು. ಸತತ 25 ನಿಮಿಷ ತಮ್ಮ ಕಂಚಿನ ಕಂಠದಿಂದ ನೆರೆದಿದ್ದ ಸಂಗೀತ ಪ್ರಿಯರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಸದೌತಣ ಉಣಬಡಿಸಿದರು.ಭಾರತದಲ್ಲಿ ಸ್ಯಾಕ್ಸೋಫೋನ್ ನುಡಿಸುವ ಕೆಲವೇ ಕೆಲವು ವಿದ್ವಾಂಸರಲ್ಲಿ ವಿದ್ವಾನ್ ಶ್ರೀಧರ ಸಾಗರ ಕೂಡ ಒಬ್ಬರು. ಕಂಚಿ ಕಾಮಕೋಟಿ ಆಸ್ಥಾನದ ವಿದ್ವಾಂಸರಾದ ಅವರು ಕದ್ರಿ ಗೋಪಾಲನಾಥ್ ಶಿಷ್ಯರು. ಅವರ ಸ್ಯಾಕ್ಸೋಫೋನ್‌ನಿಂದ ಹೊಮ್ಮಿಬಂದ `ಗಜವದನ ಬೇಡುವೆ~ ಗೀತೆಗೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.ನಂತರ ಚೈತ್ರ `ಬಲಮಾನ್ ಛಾಯಾ~ (ಹಿಂದೂಸ್ತಾನ್) ಗೀತೆಗೆ ಪೂರಕವಾಗಿ ಶ್ರೀಧರ್ `ವಾತಾಪಿ~ ಗೀತೆಯನ್ನು ನುಡಿಸಿದರು. ಸಂಗೀತ ಮತ್ತು ಭಕ್ತಿಯದು ಅವಿನಾಭಾವ ಸಂಬಂಧ. ಈ ಬಂಧವನ್ನು ಮತ್ತಷ್ಟು ಬೆಸೆಯಲು ತಮ್ಮ ಶಾರೀರ ಹಾಗೂ ವಾದ್ಯದ ಮೂಲಕ ಹೊರಸೂಸಿದ ಭಕ್ತಿಗೀತೆಗಳು- ದಾರಿಯಾವುದಯ್ಯಾ ವೈಕುಂಠಕೆ, ತಂಬೂರಿ ಮೀಟಿದವ (ಭೈರವಿ)- ಪ್ರೇಕ್ಷಕರ ಮನವೆಂಬ ತಂಬೂರಿ ಮೀಟಿದವು.ವಿದ್ವಾನ್ ಆರ್. ಗಣೇಶ್ (ಮೃದಂಗ), ವಿದ್ವಾನ್ ಎಚ್.ಎಸ್. ಗೋಪಿನಾಥ್ (ತಬಲಾ) ವಾದ್ಯ ಸಹಕಾರ ನೀಡಿದರು.ಮುಖ್ಯ ಅತಿಥಿಗಳಾಗಿದ್ದ ಡಾ. ಎಚ್.ವಿ. ಶಂಕರ್ (ಪ್ರಸಿದ್ಧ ಹೋಮಿಯೋಪಥಿ ವೈದ್ಯರು) ಮಾತನಾಡಿ, ತಮಗೆ ಕಾರ್ಯಕ್ರಮ ಅಪಾರ ಆನಂದ ನೀಡಿದ್ದು, ತಮ್ಮಳಗೆ ಅವಿತು ಕುಳಿತಿದ್ದ ಸಂಗೀತಗಾರನನ್ನು ಬಡಿದೆಬ್ಬಿಸಿದೆ ಎಂದದ್ದೇ ಅಲ್ಲದೆ ಇನ್ನು ಮುಂದೆ ಸಂಗೀತಾಭ್ಯಾಸ ಮಾಡುವುದಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry