ಜುಬಿನ್ ಸಂಗೀತ ಕಛೇರಿಗೆ ಕಣಿವೆ ರಾಜ್ಯ ಸಿದ್ಧ

7
ಪೊಲೀಸ್ ಸರ್ಪಗಾವಲಿನಲ್ಲಿ ಇಂದು `ಎಹಸಾಸ್-ಎ-ಕಾಶ್ಮೀರ'

ಜುಬಿನ್ ಸಂಗೀತ ಕಛೇರಿಗೆ ಕಣಿವೆ ರಾಜ್ಯ ಸಿದ್ಧ

Published:
Updated:

ಶ್ರೀನಗರ (ಐಎಎನ್‌ಎಸ್): ಅಂತರರಾಷ್ಟ್ರೀಯ ಮಟ್ಟದ ಹೆಸರಾಂತ ಗಾಯಕ ಜುಬಿನ್ ಮೆಹ್ತಾ ಅವರ ಸಂಗೀತ ಕಛೇರಿಗೆ ಕಣಿವೆ ರಾಜ್ಯ ಸಿದ್ಧವಾಗಿದ್ದು, ಇಲ್ಲಿನ ದಾಲ್ ಸರೋವರಕ್ಕೆ ಹೊಂದಿಕೊಂಡಿರುವ ಶಾಲಿಮಾರ್ ಹೂದೋಟದಲ್ಲಿ ಶನಿವಾರ ಸಂಜೆ ಸಂಗೀತ ಅನುರಣಿಸಲಿದೆ.ಜರ್ಮನಿ ರಾಜತಾಂತ್ರಿಕ ಕಚೇರಿ ಮತ್ತು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ `ಇನ್‌ಕ್ರೆಡಿಬಲ್ ಇಂಡಿಯಾ' ಅಭಿಯಾನದಡಿ ಕಾಶ್ಮೀರ ಸರ್ಕಾರದ ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಪ್ರತ್ಯೇಕತಾವಾದಿಗಳು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾರಣ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.`ಶಾಲಿಮಾರ್ ಹೂದೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪೊಲೀಸ್ ಚೌಕಿ ತೆಗೆಯಲಾಗಿದೆ. ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿದ ಬಳಿಕವಷ್ಟೇ ಕಾರ್ಯಕ್ರಮದ ಸ್ಥಳಕ್ಕೆ ತೆರಳಲು ಅನುಮತಿ ನೀಡಲಾಗುವುದು. ವೇದಿಕೆಯ ಸಮೀಪ ಕಮಾಂಡೊಗಳನ್ನು ನಿಯೋಜಿಸಲಾಗುವುದು. ಅಲ್ಲದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ' ಎಂದು ಭದ್ರತೆಯ ಜವಾಬ್ದಾರಿ ಹೊತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಶನಿವಾರ ಸಂಜೆ 5ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. 90 ನಿಮಿಷಗಳ ಈ ಕಾರ್ಯಕ್ರಮ 104 ದೇಶಗಳಲ್ಲಿ ನೇರ ಪ್ರಸಾರವಾಗಲಿದೆ. ಮೆಹ್ತಾ ಅವರ ತಂಡದಲ್ಲಿ 100 ಸದಸ್ಯರಿದ್ದಾರೆ.ಕಾಶ್ಮೀರದಲ್ಲಿ ಈ ಹಿಂದೆ ಇಷ್ಟು ದೊಡ್ಡ ಪ್ರಮಾಣದ ಕಾರ್ಯಕ್ರಮ ನಡೆದ ಉದಾಹರಣೆ ಇಲ್ಲ ಎಂದು ತಿಳಿಸಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಕಾರ್ಯಕ್ರಮವನ್ನು ಕೈಬಿಡದಿದ್ದಲ್ಲಿ ವಿದೇಶದ ನಾಗರಿಕರ ಮೇಲೆ ದಾಳಿ ನಡೆಸುವುದಾಗಿ ಪ್ರತ್ಯೇಕತಾವಾದಿ ಸಂಘಟನೆಗಳು ಬೆದರಿಕೆಯೊಡ್ಡಿವೆ.ಪರ್ಯಾಯ ಕಛೇರಿ: ಕೆಲ ನಾಗರಿಕ ಸಂಘಟನೆಗಳು ಜುಬಿನ್ ಮೆಹ್ತಾ ಅವರ `ಎಹಸಾಸ್-ಎ-ಕಾಶ್ಮೀರ' ಕಾರ್ಯಕ್ರಮಕ್ಕೆ ಪರ್ಯಾಯವಾಗಿ `ಹಕೀಕತ್-ಎ-ಕಾಶ್ಮೀರ' ಸಂಗೀತ ಕಛೇರಿ ನಡೆಸುವುದಾಗಿ ಘೋಷಿಸಿವೆ.ಗಣ್ಯರ ದಂಡು: ಪಾಕಿಸ್ತಾನದ ಹೈಕಮಿಷನರ್ ಸಲ್ಮಾನ್ ಬಶೀರ್, ಉದ್ಯಮಿ ಮುಖೇಶ್ ಅಂಬಾನಿ, ನಟ ಅಮಿತಾಬ್ ಬಚ್ಚನ್, ಶಬಾನಾ ಅಜ್ಮಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ವಿವಿಧ ರಾಷ್ಟ್ರಗಳ ರಾಯಭಾರಿಗಳು, ಉದ್ಯಮಿಗಳು, ಚಲನಚಿತ್ರರಂಗದ ಗಣ್ಯರು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸುಮಾರು 1,500 ಜನರಿಗೆ ಆಹ್ವಾನ ನೀಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.ಲಷ್ಕರ್ ಉಗ್ರರ ಬಂಧನ

ಶ್ರೀನಗರ(ಐಎಎನ್‌ಎಸ್): ಅಂತರರಾಷ್ಟ್ರೀಯ ಕಲಾವಿದ ಜುಬಿನ್ ಮೆಹ್ತಾ ಸಂಗೀತ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರೆನ್ನಲಾದ ಲಷ್ಕರ್-ಎ-ತೈಯಬಾ ಸಂಘಟನೆಯ ಇಬ್ಬರು ಉಗ್ರರನ್ನು ಇಲ್ಲಿನ ಚನಪೋರಾ ಪ್ರದೇಶದ ಬಳಿ ಶ್ರೀನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.ಉಗ್ರರಿಂದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶ್ರೀನಗರದಲ್ಲಿ  ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದೇಶಿಗರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಯತ್ನಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಯಾರು ಈ ಜುಬಿನ್?

1936ರ ಏಪ್ರಿಲ್ 29ರಂದು ಮುಂಬೈನ ಪಾರ್ಸಿ ಮನೆತನದಲ್ಲಿ ಜನಿಸಿರುವ ಜುಬಿನ್ ಮೆಹ್ತಾ ಅವರಿಗೆ ಬಾಲ್ಯದಿಂದಲೂ ಸಂಗೀತದ ಬಗ್ಗೆ ವಿಶೇಷ ಒಲವು. ಸ್ವತಃ ಇವರ ತಂದೆ ವಯೊಲಿನ್ ವಾದಕರಾಗಿದ್ದರು.ಮುಂಬೈನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ಅವರು 18ನೇ ವಯಸ್ಸಿಗೆ ವಿಯೆನ್ನಾ ಸಂಗೀತ ಕಾಲೇಜು ಸೇರಿದರು. ಬಳಿಕ ಹಂತ ಹಂತವಾಗಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರು.ಜುಬಿನ್ ಅವರು ಸದ್ಯ ಜರ್ಮನಿಯ ಬವೇರಿಯಾ ರಾಜ್ಯದ ಸಂಗೀತ ತಂಡದ ಅಧಿಕೃತ ನಿರ್ವಾಹಕರಾಗಿದ್ದಾರೆ.  ಹಲವು ವರ್ಷಗಳಿಂದ ಭಾರತದ ಹೊರಗಡೆ ನೆಲೆಸಿದ್ದರೂ ಇಲ್ಲಿನ ಪೌರತ್ವ ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry