ಜು.15ರೊಳಗೆ ಬಾಕಿ ಹಣ ಪಾವತಿ

ಸೋಮವಾರ, ಜೂಲೈ 15, 2019
25 °C

ಜು.15ರೊಳಗೆ ಬಾಕಿ ಹಣ ಪಾವತಿ

Published:
Updated:

ಬೆಂಗಳೂರು: `ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ ಸೇರಿದಂತೆ ಇತರ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಬಾಕಿ ಇರುವ ಹಣವನ್ನು ಜುಲೈ 15ರೊಳಗೆ ಪಾವತಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ವಿಧಾನಸಭೆಗೆ ತಿಳಿಸಿದರು.ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಚ್.ಎಸ್.ಶಂಕರಲಿಂಗೇಗೌಡ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.ಇದಕ್ಕೆ ಪೂರಕವಾಗಿ ಮಾತನಾಡಿದ ಪಕ್ಷೇತರ ಸದಸ್ಯ ಶಿವರಾಜ ತಂಗಡಗಿ, ಈ ಯೋಜನೆಯಡಿಯ ಫಲಾನುಭವಿಗಳಿಗೆ 4-5 ತಿಂಗಳಿಂದ ಹಣ ಬಂದಿಲ್ಲ. ಇದನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಪಡಿಸಿದರು.ನಂತರ ಮುಖ್ಯಮಂತ್ರಿ ಮಾತನಾಡಿ, ಮಾ.31ರವರೆಗೆ ಮಂಜೂರಾದ ಎಲ್ಲರಿಗೂ ಜುಲೈ 15ರೊಳಗೆ ಹಣ ನೀಡಲಾಗುವುದು. ಇತರ ಎಲ್ಲ ಯೋಜನೆಗಳನ್ನೂ ನಿಲ್ಲಿಸಿ ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳಿಗೆ ಹಣ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ ಉತ್ತರ ನೀಡಿ, ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದ 2521 ಅರ್ಜಿಗಳು, ವಿಧವಾ ವೇತನ- 17,875, ಅಂಗವಿಕಲ ವೇತನ- 12,143 ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ  36,100 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಆದಷ್ಟು ಬೇಗ ಇತ್ಯರ್ಥಪಡಿಸಲಾಗುವುದು. ಇಷ್ಟು ಅರ್ಜಿ ಬಾಕಿ ಇರಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಂಕರಲಿಂಗೇಗೌಡ ಒತ್ತಾಯಿಸಿದರು.ಈ ಯೋಜನೆಗಳಡಿ 38.99 ಲಕ್ಷ ಫಲಾನುಭವಿಗಳಿದ್ದು, 2.93 ಲಕ್ಷ ನಕಲಿ ಎನ್ನುವುದು ಗೊತ್ತಾಗಿದೆ. ಇವುಗಳನ್ನು ರದ್ದುಪಡಿಸಿ, ಅರ್ಹರಿಗೆ ಯೋಜನೆ ವಿಸ್ತರಿಸಲಾಗುವುದು ಎಂದರು. ಮಾರ್ಚ್ ನಂತರ ಮಂಜೂರಾದ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಅದರ ನಂತರ ಹೊಸ ಅರ್ಜಿಗಳನ್ನು ಪರಿಶೀಲಿಸಿ ಮಂಜೂರು ಮಾಡಲಾಗುವುದು ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry