ಜೂಡೊ ಶಿಸ್ತು ಬೆಳೆಸುವ ಕ್ರೀಡೆ: ಶಿವಾನಂದ

7

ಜೂಡೊ ಶಿಸ್ತು ಬೆಳೆಸುವ ಕ್ರೀಡೆ: ಶಿವಾನಂದ

Published:
Updated:

ಶಿವಮೊಗ್ಗ: `ಜೂಡೊ ಶಿಸ್ತು ಬೆಳೆಸುವ ಕ್ರೀಡೆ ಆಗಿದ್ದು, ಕ್ರೀಡಾಪಟುಗಳು ಈ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು~ ಎಂದು ರಾಜ್ಯ ಜೂಡೊ ಸಂಸ್ಥೆಯ ಕಾರ್ಯದರ್ಶಿ ಎಸ್.ಆರ್. ಶಿವಾನಂದ ಸಲಹೆ ನೀಡಿದರು.ನಗರದಲ್ಲಿ ಭಾನುವಾರ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು ಆಯೋಜಿಸಿದ್ದ ಕುವೆಂಪು ವಿವಿಯ ಅಂತರ ಕಾಲೇಜು ಪುರುಷರ ಜೂಡೊ, ಬ್ಯಾಸ್ಕೆಟ್‌ಬಾಲ್ ಹಾಗೂ ಹಾಕಿ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಡಿವಿಎಸ್ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ ಮಾತನಾಡಿ, ಜೂಡೊ ಉತ್ತಮ ಕ್ರೀಡೆ. ಆದರೆ, ಜೂಡೊ ಬಗ್ಗೆ ಯುವಕರಲ್ಲಿ ಆಸಕ್ತಿ ಕಡಿಮೆಯಾಗಿದೆ. ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸುಮಾರು 60ಕ್ಕೂ ಹೆಚ್ಚು ಕಾಲೇಜುಗಳಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸುತ್ತಿಲ್ಲ. ಯುವಕರು ಕ್ರಿಕೆಟ್‌ನತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ಜೂಡೊ ಕಲಿಕೆಯಿಂದ ಆತ್ಮರಕ್ಷಣೆ ಸಾಧ್ಯ ಎಂದು ಹೇಳಿದರು.ಕುವೆಂಪು ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಎಸ್.ಎಂ. ಪ್ರಕಾಶ್ ಮಾತನಾಡಿ, ಜೂಡೊ ದೇಹ ಹಾಗೂ ಮನಸ್ಸಿನ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆ. ಕರಾಟೆಗಿಂತ ಜೂಡೊ ಉತ್ತಮ. ಆದ್ದರಿಂದ, ಒಲಿಂಪಿಕ್ಸ್‌ನಲ್ಲಿ ಜುಡೊಗೆ ಮಾನ್ಯತೆ ದೊರೆತಿದೆ ಎಂದು ಹೇಳಿದರು.ವಿದ್ಯಾರ್ಥಿ ಜೀವನದಲ್ಲಿ ಶಿಸ್ತು-ಸಂಯಮ ಮುಖ್ಯ. ಜೂಡೊ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಿಸ್ತು ಮೈಗೂಡಿಸಿಕೊಳ್ಳಬಹುದು ಎಂದು ಹೇಳಿದರು.ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಿಂದ ಸುಮಾರು 40 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಜಿ. ಪರಮೇಶ್ವರ್ ಸ್ವಾಗತಿಸಿದರು. ಜಿ.ಎಸ್. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry