ಮಂಗಳವಾರ, ಜೂನ್ 15, 2021
23 °C

ಜೆಎಸ್‌ಎಸ್-ಕೆಎಸ್‌ಸಿಎ ಕ್ರಿಕೆಟ್ ಮೈದಾನ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಮೈಸೂರು ಎಕ್ಸ್‌ಪ್ರೆಸ್~ ಜಾವಗಲ್ ಶ್ರೀನಾಥ್ ಅವರನ್ನು ಕ್ರಿಕೆಟ್ ಲೋಕಕ್ಕೆ ಕಾಣಿಕೆ ನೀಡಿದ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಅಂತರರಾಷ್ಟ್ರೀಯ ದರ್ಜೆಯ `ಜೆಎಸ್‌ಎಸ್-ಕೆಎಸ್‌ಸಿಎ~ ಕ್ರಿಕೆಟ್ ಮೈದಾನ ಭಾನುವಾರ ಬೆಳಿಗ್ಗೆ ಲೋಕಾರ್ಪಣೆಗೊಂಡಿತು.70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೈದಾನವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಭಾರತ ತಂಡದ ಮಾಜಿ ಆಲ್‌ರೌಂಡರ್ ರೋಜರ್ ಬಿನ್ನಿ ಅವರ ಎಸೆತಗಳಿಗೆ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅನಿಲ್ ಕುಂಬ್ಳೆ, `ನಮ್ಮ ತಂಡದ ಒಂದೂವರೆ ವರ್ಷದ ಆಡಳಿತದಲ್ಲಿ ಇದು ಸುವರ್ಣ ದಿನವಾಗಿದೆ. ಇಂತಹ ಒಂದು ಒಳ್ಳೆಯ ಮೈದಾನವಾಗಿರುವುದು ಸಂತಸದ ವಿಷಯ. ಇಲ್ಲಿಯೂ ಒಂದು ರಣಜಿ ಪಂದ್ಯ ಆಗಲಿ. ಬೆಂಗಳೂರಿನಲ್ಲಿ ರಣಜಿ ಪಂದ್ಯಗಳನ್ನು ಆಡಿಸಿದರೆ ನೋಡಲು ಜನರು ಬರುವುದಿಲ್ಲ. ಆದರೆ ಶಿವಮೊಗ್ಗದಲ್ಲಿ ಮಾಡಿದಾಗ 15 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ರಾಜಧಾನಿಯಿಂದ ಹೊರಗೆ ನಡೆಯುವ ಪಂದ್ಯಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ~ ಎಂದು ಹೇಳಿದರು.`ಧಾರವಾಡದಲ್ಲಿರುವ ಜೆಎಸ್‌ಎಸ್ ಮಹಾವಿದ್ಯಾಪೀಠದ ಆವರಣದಲ್ಲಿಯೂ ಕ್ರಿಕೆಟ್ ಮೈದಾನ ನಿರ್ಮಿಸಲು ಕೆಎಸ್‌ಸಿಎ ಸಿದ್ಧ. ಈ ಕುರಿತು ಜೆಎಸ್‌ಎಸ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್‌ಕೆರೂರ್ ಅವರ ಪ್ರಸ್ತಾವವನ್ನು ನಾವು ಪರಿಗಣಿಸುತ್ತೇವೆ. ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಲವೆಡೆ ಮೈದಾನಗಳು ಸಿದ್ಧವಾಗುತ್ತಿವೆ. `ಕೆಳಹಂತದಿಂದಲೇ ಕ್ರಿಕೆಟ್ ಬೆಳವಣಿಗೆಗೆ ಉತ್ತೇಜನ ಕೊಡುವುದು ನಮ್ಮ ಉದ್ದೇಶ. ಉತ್ತಮ ಸೌಲಭ್ಯಗಳು ಸಿಕ್ಕಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಜ್ಯದ  28 ಕಡೆ ಬೇಸಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಅಕಾಡೆಮಿ ಆರಂಭವಾಗುತ್ತಿದ್ದು, ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಗುರುತಿಸುವ ಕೆಲಸ ನಡೆಯಲಿದೆ~ ಎಂದು ಕುಂಬ್ಳೆ ತಿಳಿಸಿದರು.ಈ ಸಂದರ್ಭದಲ್ಲಿ ಹಾಜರಿದ್ದ ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್, `ರಾಜ್ಯ, ರಾಷ್ಟ್ರ ತಂಡಗಳನ್ನು ಆಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ಕ್ರಿಕೆಟ್ ಆಟದ ಮೇಲಿನ ಪ್ರೀತಿ, ಆಸಕ್ತಿಯಿಂದ ಆಡುವವರಿಗೂ ಉನ್ನತ ದರ್ಜೆಯ ಸೌಲಭ್ಯಗಳು ಸಿಗಬೇಕು.ಆಗಲೇ ಕ್ರಿಕೆಟ್ ಬೆಳೆಯುತ್ತದೆ.  ಈ ಮೈದಾನದಲ್ಲಿ ಎಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಸಲಾಗುತ್ತದೆ ಎನ್ನುವುದು ಮುಖ್ಯವಲ್ಲ. ಇಲ್ಲಿಯ ಕಿರಿಯ ಪ್ರತಿಭೆಗಳಿಗೆ ಉನ್ನತ ಮಟ್ಟದ ಸೌಲಭ್ಯ ಸಿಗಬೇಕು. ಇವತ್ತು ಇಲ್ಲಿ ಅಭ್ಯಾಸ ಮಾಡುವ ಹುಡುಗರು ಮುಂದೊಂದು ದಿನ ತನ್ನ ಪ್ರತಿಭೆಯಿಂದ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದರೆ ಅಲ್ಲಿ ಆಡುವಾಗ ತೊಂದರೆಯಾಗಬಾರದು. ಮ್ಯಾಟಿಂಗ್ ಮತ್ತು ಟರ್ಫ್ ವಿಕೆಟ್‌ಗಳಲ್ಲಿ ಆಡುವ ಆಟಕ್ಕೆ ಅಜಗಜಾಂತರ ವ್ಯತ್ಯಾಸವಿದೆ~ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ಉಪಾಧ್ಯಕ್ಷ ರೋಜರ್ ಬಿನ್ನಿ, ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್, ಖಜಾಂಚಿ ತಲ್ಲಂ ವೆಂಕಟೇಶ್, ಮೈಸೂರು ವಲಯ ಅಧ್ಯಕ್ಷ ಅಶ್ವಿನಿ ರಂಜನ್, ನಿಮಂತ್ರಕ ವಿಜಯಪ್ರಕಾಶ್,  ಜೆಎಸ್‌ಎಸ್ ಕಾರ್ಯದರ್ಶಿ ಬಿ.ಎನ್. ಬೆಟ್‌ಕೆರೂರ್, ನಿರ್ದೇಶಕ ಪ್ರೊ. ಎಂ.ಎಚ್. ಧನಂಜಯ್, ಎಸ್‌ಜೆಸಿ ಕಾಲೇಜು ಪ್ರಾಚಾರ್ಯ ಬಿ.ಜಿ. ಸಂಗಮೇಶ್ವರ್ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.