ಜೆಡಿಎಸ್‌ಗೆ ಮರಳಿದ ಅಜೀಂ

7

ಜೆಡಿಎಸ್‌ಗೆ ಮರಳಿದ ಅಜೀಂ

Published:
Updated:

ಬೆಂಗಳೂರು: `ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಹಳಿ ತಪ್ಪಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಕೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿರಲಿಲ್ಲ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕಿಡಿಕಾರಿದರು.ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಜೀಂ ಗುರುವಾರ ಜೆಡಿಎಸ್‌ಗೆ ಮರು ಸೇರ್ಪಡೆಯಾದ ನಂತರ ಮಾತನಾಡಿದ ದೇವೇಗೌಡ, `ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ಜನರು ಇಟ್ಟ ನಿರೀಕ್ಷೆ, ವಿಶ್ವಾಸವನ್ನು ಉಳಿಸಿಕೊಳ್ಳದಿದ್ದರೆ ಸರ್ಕಾರ ಇದ್ದರೂ ಒಂದೇ; ಹೋದರೂ ಒಂದೇ' ಎಂದು ತಿಳಿಸಿದರು.`ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದಾಗಿ ಅಜೀಂ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದರು. ಆದರೆ, ಬೇರೆ ಪಕ್ಷಕ್ಕೆ ಹೋಗಿರಲಿಲ್ಲ. ಅವರು ನೀಡಿದ್ದ ರಾಜೀನಾಮೆಯನ್ನೂ ಅಂಗೀಕರಿಸಿಲ್ಲ. ಈಗ ಅವರು ವಾಪಸ್ ಬಂದಿದ್ದು, ಸಂತೋಷವಾಗಿ ಬರ ಮಾಡಿಕೊಂಡಿದ್ದೇನೆ' ಎಂದರು.ಇನ್ನು ಮುಂದೆ ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದ ಅವರು, `ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಾರೆ ಎಂಬ ವಿಶ್ವಾಸವಿದೆ. ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸೋಣ' ಎಂದರು.ಬಿಜೆಪಿ ಸರ್ಕಾರದ ಆಡಳಿತದಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಭ್ರಷ್ಟಾಚಾರದಿಂದಾಗಿ ಆಡಳಿತಯಂತ್ರ ಕುಸಿದು ಬಿದ್ದಿದೆ. ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಜೆಡಿಎಸ್‌ಗೆ ಮಾತ್ರ ಇದೆ ಎಂದು ಅಬ್ದುಲ್ ಅಜೀಂ ಹೇಳಿದರು.`ಮಾಧ್ಯಮಗಳಲ್ಲಿ ಬರುತ್ತಿರುವ ಸಮೀಕ್ಷೆಗಳು ವಾಸ್ತವಕ್ಕೆ ದೂರವಾಗಿವೆ. ಆ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಾನೂ ಸಹ ಸಮೀಕ್ಷೆ ಮಾಡಿಸಿ ಜನರ ನಾಡಿಮಿಡಿತವನ್ನು ತಿಳಿದುಕೊಂಡಿದ್ದೇನೆ' ಎಂದು ಕುಮಾರಸ್ವಾಮಿ ಹೇಳಿದರು.ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಬೇರೆ ಯಾವ ಪಕ್ಷಗಳೂ ಅಲ್ಪಸಂಖ್ಯಾತರಿಗೆ ಅಗತ್ಯ ನೆರವು ನೀಡಲಿಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್‌ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry