ಜೆಡಿಎಸ್‌ಗೆ ವರವಾದ ಪಕ್ಷೇತರರ ನೆರವು

7

ಜೆಡಿಎಸ್‌ಗೆ ವರವಾದ ಪಕ್ಷೇತರರ ನೆರವು

Published:
Updated:

ಜಿ.ಪಂ: ಚೌಡೇಶ್ವರಿ ಅಧ್ಯಕ್ಷೆ- ರತ್ನಮ್ಮ ಉಪಾಧ್ಯಕ್ಷೆ

ಕೋಲಾರ: ಎರಡನೇ ಅವಧಿಗೆ ಇಲ್ಲಿನ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಇಬ್ಬರು ಪಕ್ಷೇತರರು ಮತ್ತು ಒಬ್ಬ ಬಿಜೆಪಿ ಸದಸ್ಯೆಯ ಬೆಂಬಲ ಪಡೆದ ಜೆಡಿಎಸ್ ಮೇಲುಗೈ ಸಾಧಿಸಿತು.ಸಚಿವ ವರ್ತೂರು ಪ್ರಕಾಶ್ ಬಣವನ್ನು ತ್ಯಜಿಸಿ ಜೆಡಿಎಸ್‌ಗೆ ಬೆಂಬಲ ನೀಡಿ ವಕ್ಕಲೇರಿ ಕ್ಷೇತ್ರದ ಪಕ್ಷೇತರ ಸದಸ್ಯೆ ಚೌಡೇಶ್ವರಿ ಅಧ್ಯಕ್ಷೆಯಾಗಿ ಆಯ್ಕೆಯಾದರು. ಜೆಡಿಎಸ್‌ನ ದಳಸನೂರು ಕ್ಷೇತ್ರದ ಸದಸ್ಯೆ ರತ್ನಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.ಜಿಪಂನಲ್ಲಿ ಒಟ್ಟು 12 ಸದಸ್ಯರ ಬಲವಿರುವ ಜೆಡಿಎಸ್‌ಗೆ ಪಕ್ಷೇತರರಾದ ಚಿಕ್ಕಅಂಕಂಡಹಳ್ಳಿ ಕ್ಷೇತ್ರದ ಎಂ.ಎಸ್.ಆನಂದ್, ವಕ್ಕಲೇರಿ ಕ್ಷೇತ್ರದ ಚೌಡೇಶ್ವರಿ ಮತ್ತು ಬಿಜೆಪಿಯ ಕಾಮಸಮುದ್ರಂ ಕ್ಷೇತ್ರದ ಸಿಮೌಲ್ ಬೆಂಬಲ ನೀಡಿದ ಪರಿಣಾಮ ಅಧ್ಯಕ್ಷ, ಉಪಾಧ್ಯಕ್ಷರಿಬ್ಬರಿಗೂ ಗೆಲ್ಲಲು ಬೇಕಾದ 15 ಬಹುಮತ ನಿರಾಯಾಸವಾಗಿ ದೊರಕಿತು.ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಹುತ್ತೂರು ಕ್ಷೇತ್ರದ ಡಿ.ವಿ.ಹರೀಶ್, ಬೇತಮಂಗಲ ಕ್ಷೇತ್ರದ ಎ.ಎಂ.ಲಕ್ಷ್ಮಿನಾರಾಯಣ, ನರಸಾಪುರ ಕ್ಷೇತ್ರದ ಪಕ್ಷೇತರ ಸದಸ್ಯ, ವರ್ತೂರು ಬಣದ ಜಿ.ಎಸ್.ಅಮರನಾಥ್, ಜೆಡಿಎಸ್‌ನ ಗೌನಿಪಲ್ಲಿ ಕ್ಷೇತ್ರದ ಸದಸ್ಯ ಆರ್.ನಾರಾಯಣಸ್ವಾಮಿ ಮತ್ತು ಚೌಡೇಶ್ವರಿ ನಾಮಪತ್ರ ಸಲ್ಲಿಸಿದ್ದರು.

ಚುನಾವಣಾಧಿಕಾರಿ, ಬೆಂಗಳೂರು ಪ್ರಾದೇಶಿಕ ಆಯುಕ್ತ ಕೆ.ಶಿವರಾಂ ನೇತೃತ್ವದಲ್ಲಿ ಮಧ್ಯಾಹ್ನ 2 ಗಂಟೆಗೆ ಚುನಾವಣೆ ಶುರುವಾದಾಗ ಅಮರನಾಥ್, ಹರೀಶ್ ಮತ್ತು ನಾರಾಯಣಸ್ವಾಮಿ ನಾಮಪತ್ರಗಳನ್ನು ವಾಪಸು ಪಡೆದರು.ಚೌಡೇಶ್ವರಿ ಮತ್ತು ಲಕ್ಷ್ಮಿನಾರಾಯಣ ಕಣದಲ್ಲಿ ಉಳಿದರು. ನಂತರ ಕೈ ಎತ್ತುವ ಮೂಲಕ ಮತದಾನಕ್ಕೆ ಅವಕಾಶ ನೀಡಲಾಯಿತು. ಚೌಡೇಶ್ವರಿ ಪರವಾಗಿ 15 ಸದಸ್ಯರು ಕೈ ಎತ್ತುವ ಮೂಲಕ ಅವರ ಗೆಲುವಿಗೆ ಕಾರಣರಾದರು. 13 ಸದಸ್ಯರ ಬೆಂಬಲ ಪಡೆದ ಲಕ್ಷ್ಮಿನಾರಾಯಣ ಸೋತರು. ಚೌಡೇಶ್ವರಿ ಅವರ ಗೆಲುವನ್ನು ಶಿವರಾಂ ಘೋಷಿಸಿದರು.ಉಪಾಧ್ಯಕ್ಷ: ಉಪಾಧ್ಯಕ್ಷ ಸ್ಥಾನಕ್ಕೆ ಐದು ನಾಮಪತ್ರ ಸಲ್ಲಿಕೆಯಾಗಿತ್ತು. ಬಿಜೆಪಿಯ ಕುಡಿಯನೂರು ಕ್ಷೇತ್ರದ ಯಲ್ಲಮ್ಮ, ಕ್ಯಾಸಂಬಳ್ಳಿಯ ಮುತ್ಯಾಲಮ್ಮ, ಜೆಡಿಎಸ್‌ನ ದಳಸನೂರು ಕ್ಷೇತ್ರದ ರತ್ನಮ್ಮ ಮತ್ತು ಬೈರಕೂರಿನ ಅಲಮೇಲಮ್ಮ ನಾಮಪತ್ರ ಸಲ್ಲಿಸಿದ್ದರು. ರತ್ನಮ್ಮ ಎರಡು ನಾಮಪತ್ರ ಸಲ್ಲಿಸಿದ್ದರು. ಮುತ್ಯಾಲಮ್ಮ ಮತ್ತು ಅಲಮೇಲಮ್ಮ ನಾಮಪತ್ರ ವಾಪಸ್ ಪಡೆದರು. ರತ್ನಮ್ಮನವರಿಗೆ 15 ಬಹುಮತ ದೊರೆತು ಆಯ್ಕೆಯಾದರು. 13 ಮತ ಪಡೆದ ಯಲ್ಲಮ್ಮ  ಸೋತರು.ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯನ್ನು ಚುನಾವಣಾಧಿಕಾರಿ ಶಿವರಾಂ, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಹೆಚ್ಚುವರಿ ಆಯುಕ್ತ ಬಿ.ವೆಂಟೇಶ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝಲ್ಫಿಕರ್ ಉಲ್ಲಾ ಅಭಿನಂದಿಸಿದರು.ಗದ್ದಲ: ಚುನಾವಣೆ ಆರಂಭವಾಗುವ ವೇಳೆಗೆ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯರನ್ನು ಒಟ್ಟಿಗೆ ಕೂರಿಸುವ ಜೆಡಿಎಸ್‌ನ ಪ್ರಯತ್ನವನ್ನು ಕಾಂಗ್ರೆಸ್‌ನ ಡಿ.ವಿ.ಹರೀಶ್ ಸೇರಿದಂತೆ ಹಲವರು ವಿರೋಧಿಸಿದರು.ಚೌಡೇಶ್ವರಿ ಪರವಾಗಿ ಜೆಡಿಎಸ್‌ನ ಎಲ್ಲ ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸುವ ಸಂದರ್ಭದಲ್ಲಿ ಅದೇ ಪಕ್ಷದ ರಾಯಲ್ಪಾಡು ಕ್ಷೇತ್ರದ ಸದಸ್ಯ ಜಿ.ಕೆ.ನಾಗರಾಜ್ ಹಿಂಜರಿದರು. ಅವರನ್ನು ಆರ್.ನಾರಾಯಾಣಸ್ವಾಮಿ ಕೈ ಎತ್ತುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲೂ ಇತರೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಚುನಾವಣಾಧಿಕಾರಿ ಶಿವರಾಂ, ಸದಸ್ಯರ ಮೇಲೆ ಒತ್ತಡ ಹೇರಬಾರದು ಎಂದ ಎಚ್ಚರಿಕೆ ನೀಡಿದರು. ಚುನಾವಣೆ ಆರಂಭವಾದರೂ ಹಲವು ಸದಸ್ಯರು ಮೊಬೈಲ್‌ಫೋನ್‌ಗಳಲ್ಲಿ ಮಾತನಾಡುತ್ತಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಫೋನ್ ಕಸಿದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.`ಅಧಿಕಾರ ಬೇಕಿತ್ತು~ಕೋಲಾರ: ಸಮಾಜಸೇವೆ ಮಾಡಲೆಂದೇ ನಾನು ರಾಜಕಾರಣಕ್ಕೆ ಬಂದೆ. ಅದಕ್ಕೆ ಇನ್ನಷ್ಟು ಅವಕಾಶ -ಅಧಿಕಾರ ಬೇಕಿತ್ತು. ಹೀಗಾಗಿ ಪಕ್ಷೇತರ ಸದಸ್ಯೆಯಾದ ನಾನು ಜೆಡಿಎಸ್ ಸೇರಿ ಅಧ್ಯಕ್ಷ ಸ್ಥಾನ ಪಡೆದಿರುವೆ ಎಂದು ಚೌಡೇಶ್ವರಿ ತಿಳಿಸಿದರು.ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಈ ಮುಂಚೆ ಸಚಿವ ವರ್ತೂರು ಪ್ರಕಾಶ್ ಬಣದಲ್ಲಿದ್ದಾಗ ನನಗೆ ಒಳ್ಳೆಯದಾಗಿದೆ- ಕೆಟ್ಟದಾಗಿದೆ ಎಂದು ಸ್ಪಷ್ಟವಾಗಿ ಏನನ್ನೂ ಹೇಳಲಾಗುವುದಿಲ್ಲ. ಪ್ರತಿಯೊಬ್ಬರಿಗೂ ಅಧಿಕಾರದ ಅವಕಾಶ ಬೇಕು. ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಜೆಡಿಎಸ್ ಅವಕಾಶ ನೀಡಿದೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಇದೊಂದು ಉತ್ತಮ ಅವಕಾಶ. ಗುರುವಾರ ರಾತ್ರಿಯಷ್ಟೆ ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿರುವೆ ಎಂದರು.ಅಧಿಕಾರಕ್ಕಾಗಿ ಸ್ವಾರ್ಥ ರಾಜಕಾರಣವನ್ನು ಎಲ್ಲರೂ ಮಾಡುತ್ತಿದ್ದಾರೆ. ಅದನ್ನು ಮತ್ತೆ ಮತ್ತೆ ಒಬ್ಬ ಮಹಿಳಾ ಪ್ರತಿನಿಧಿಯ ಬಳಿ ಕೇಳುವುದು ಎಷ್ಟು ಸಮಂಜಸ? ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದರು. ಅವರೆಲ್ಲರಿಗೂ ಕೃತಜ್ಞಳಾಗಿರುವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry