ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಪ್ಪ

7

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಪ್ಪ

Published:
Updated:
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಪ್ಪ

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಎ.ಕೃಷ್ಣಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.­ದೇವೇಗೌಡ ಸಮ್ಮುಖದಲ್ಲಿ ಬುಧವಾರ ಇಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಈ ಆಯ್ಕೆ ನಡೆಯಿತು.ಮುಖಂಡರ ಸಭೆಯ ನಂತರ ಸುದ್ದಿಗಾರ­ರೊಂದಿಗೆ ಮಾತನಾಡಿದ ದೇವೇಗೌಡ, ಅಧ್ಯಕ್ಷ ಸ್ಥಾನಕ್ಕೆ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದ ರಾಜೀ­ನಾಮೆ ಅಂಗೀಕರಿಸಿ, ಆ ಸ್ಥಾನಕ್ಕೆ ಕೃಷ್ಣಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಘೋಷಿಸಿದರು.ಕೋರ್‌ ಕಮಿಟಿ (ಪ್ರಮುಖರ ಸಮಿತಿ) ರಚನೆಗೆ ಪಕ್ಷದ ಸಂವಿಧಾನದಲ್ಲಿ ಅವಕಾಶ ಇಲ್ಲ. ರಾಜಕೀಯ ವ್ಯವಹಾರ­ಗಳ ಸಮಿತಿ ರಚಿಸಲಾ­ಗುವುದು. ಪ್ರಮುಖ ತೀರ್ಮಾನಗಳನ್ನು ಅಲ್ಲಿಯೇ ತೆಗೆದು­ಕೊಳ್ಳ­ಲಾಗುತ್ತದೆ ಎಂದರು. ಕುಮಾರಸ್ವಾಮಿ ಅಧ್ಯಕ್ಷರಾಗಿ ಮುಂದುವರಿಯ­ಬೇಕು ಎಂದು ಸಭೆಯಲ್ಲಿ ಮಾತನಾಡಿದ ಮುಖಂಡರು ಒತ್ತಾಯ ಮಾಡಿದರು. ಆದರೆ, ಕುಮಾರಸ್ವಾಮಿ ಒಪ್ಪಲಿಲ್ಲ. ಹೀಗಾಗಿ ಹೊಸಬರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.ಕೃಷ್ಣಪ್ಪ ನೇಮಕಕ್ಕೆ ಯಾರ ವಿರೋಧವೂ ಇಲ್ಲ. ಸಣ್ಣಪುಟ್ಟ ಅಸಮಾಧಾನಗಳು ಇದ್ದರೆ ಪದಾಧಿ­ಕಾರಿಗಳ ನೇಮಕ ಸಂದರ್ಭದಲ್ಲಿ ಸರಿಪಡಿಸಲಾಗು­ವುದು ಎಂದು ಪ್ರಶ್ನೆ­ಯೊಂದಕ್ಕೆ ಉತ್ತರಿಸಿದರು.ಸಾಮೂಹಿಕ ನಾಯಕತ್ವ:  ಸಾಮಾಜಿಕ ನ್ಯಾಯ ಮತ್ತು ಸಾಮೂಹಿಕ ನಾ್ಯಯದ ಆಧಾರದ ಮೇಲೆ ಪಕ್ಷ ಸಂಘಟಿಸಲಾಗುವುದು ಎಂದು ನೂತನ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು. ‘ನನ್ನ ಅನುಭವ ಮತ್ತು ಶಕ್ತಿಯನ್ನು ಪಕ್ಷದ ಸಂಘಟನೆಗೆ ಧಾರೆ ಎಳೆಯುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ’ ಎಂದರು. ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಮುಂಬರುವ ಲೋಕ­ಸಭಾ ಚುನಾವಣೆಯನ್ನು ದಿಟ್ಟತನದಿಂದ ಎದುರಿಸುತ್ತೇವೆ’ ಎಂದು ತಿಳಿಸಿದರು.ಹಿನ್ನೆಲೆ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣ ಆ ಪಕ್ಷಕ್ಕೆ ರಾಜೀನಾಮೆ ನೀಡಿದ ಕೃಷ್ಣಪ್ಪ ಜೆಡಿಎಸ್‌ ಸೇರಿದ್ದರು. ಯಾದವ ಜನಾಂಗಕ್ಕೆ ಸೇರಿದ ಅವರು ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಹಿಂದೆ ಎಸ್‌.ಎಂ.ಕೃಷ್ಣಪ್ಪ ಸರ್ಕಾರದಲ್ಲಿ ಪಶುಸಂಗೋಪನಾ ಸಚಿವರಾಗಿದ್ದ ಅವರು ಕಾಂಗ್ರೆಸ್‌ ಪಕ್ಷದಲ್ಲೇ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್‌ ಸಭೆಗೆ ಗೈರು ಹಾಜರಾ­ಗಿದ್ದರು. ಶಾಸಕರಾದ ಎನ್‌.ಚೆಲುವ­ರಾಯಸ್ವಾಮಿ, ಜಮೀರ್‌ ಅಹಮದ್‌ ಅವರೂ ಬಂದಿರಲಿಲ್ಲ. ವಿಜಾಪುರ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಯತ್ನಾಳ್‌ ಸಭೆಗೆ ಬಂದಿರಲಿಲ್ಲ ಎನ್ನಲಾಗಿದೆ.ಮತ್ತೊಬ್ಬ ಆಕಾಂಕ್ಷಿ ಪಿ.ಜಿ.­ಆರ್‌.ಸಿಂಧ್ಯ ಅವರು ಸ್ವಲ್ಪಹೊತ್ತು ಹಾಜರಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಗಳ್ಳಲು ಹೊರಟರು ಎಂದು ಗೊತ್ತಾಗಿದೆ. ಸಿಂಧ್ಯ ಹೆಸರೂ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ, ರಾಜಕೀಯ ಲೆಕ್ಕಾಚಾರ ಹಾಗೂ ದೇವೇಗೌಡರ ಆಶಯದಂತೆ ಕೃಷ್ಣಪ್ಪ ಆಯ್ಕೆಗೆ ಸಭೆ ಅನುಮೋದನೆ ನೀಡಿತು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry