ಬುಧವಾರ, ಜೂನ್ 23, 2021
22 °C
ಅರಿವೆ ಹಾವಲ್ಲ; ಹೆಬ್ಬಾವೂ ಆಗಬಹುದು: ಶಾಮನೂರಿಗೆ ಮಹಿಮ ತಿರುಗೇಟು

ಜೆಡಿಎಸ್‌ ಸುಂಟರಗಾಳಿಗೆ ಕಾಂಗ್ರೆಸ್‌, ಬಿಜೆಪಿ ನಡುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಜಿಲ್ಲೆಯಲ್ಲಿ ಎರಡು ದಿನಗಳಿಂದ ಎದ್ದಿರುವ ಸುಂಟರಗಾಳಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ನಡುಕ ಉಂಟುಮಾಡುತ್ತಿದೆ’ ಎಂದು ಲೋಕಸಭಾ ಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ಮಹಿಮ ಪಟೇಲ್‌ ಹೇಳಿದರು.ನಗರದಲ್ಲಿ ಭಾನುವಾರ ನಡೆದ ರಾಮಮನೋಹರ ಲೋಹಿಯ ಜನ್ಮದಿನಾಚರಣೆ ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.‘ಈ ಹಿಂದೆ ತುಮಕೂರಿನಲ್ಲಿ ನಡೆದಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿಯೇ ಸುಂಟರಗಾಳಿಗೆ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಭಾವಚಿತ್ರಗಳು ಹಾರಿಹೋಗಿದ್ದವು. ಅದೇ ರೀತಿಯಲ್ಲಿ ಇದೀಗ ಎದ್ದಿರುವ ಜೆಡಿಎಸ್‌ನ ಸುಂಟರಗಾಳಿಗೆ ಕಾಂಗ್ರೆಸ್‌, ಬಿಜೆಪಿಯ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಹಾರಿಹೋಗಲಿದ್ದಾರೆ’ ಎಂದು ಲೇವಡಿ ಮಾಡಿದರು.ಸಚಿವ ಶಾಮನೂರು ಶಿವಶಂಕರಪ್ಪ ಅವರ ಅರಿವೆ ಹಾವು; ಮಹಿಮ ಲೆಕ್ಕಕ್ಕೆ ಇಲ್ಲ ಎಂಬ ಟೀಕೆಗೆ ಉತ್ತರಿಸಿದ ಅವರು, ‘ನಾನು ಅರಿವೆ ಹಾವೊ; ನಾಗರಹಾವೊ ಅಥವಾ ಹೆಬ್ಬಾವೊ ಎಂಬುದು ಇನ್ನು 15 ದಿನಗಳ ಒಳಗೆ ಗೊತ್ತಾಗಲಿದೆ’ ಎಂದು ತಿರುಗೇಟು ನೀಡಿದರು.‘ಜೆಡಿಎಸ್‌ಗೆ ಸೇರಿದ ಬಳಿಕ ನನ್ನ ವ್ಯಕ್ತಿತ್ವವೇ ಬದಲಾಗಿದೆ. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸೇರಿದ್ದು ಮನೆಗೆ ಬಂದಂತಹ ಅನುಭವ ಉಂಟಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಗುಲಾಮಗಿರಿ ಸಂಸ್ಕೃತಿ ಇನ್ನೂ ಇದೆ. ಯಾವುದೇ ನಿರ್ಧಾರಕ್ಕೂ ಹೈಕಮಾಂಡ್‌ ಅನ್ನೇ ಕೇಳಬೇಕು. ನನಗೂ ನಾಯಕರ ಮನೆಯ ಬಾಗಿಲು ಕಾದು ಸಾಕಾಗಿ ಹೋಗಿತ್ತು. ಇಲ್ಲಿ ನಾನೇ ರಾಜ, ನಾನೇ ನಾಯಕ’ ಎಂದು ಹೇಳಿದರು.‘ಈ ಚುನಾವಣೆಯಲ್ಲಿ ಗೆಲುವು ಪಡೆಯುವುದು ನಮ್ಮ ಅಸ್ತಿತ್ವದ ಪ್ರಶ್ನೆ ಮಾತ್ರ ಅಲ್ಲ; ಮರ್ಯಾದೆ, ಆತ್ಮಗೌರವದ ಪ್ರಶ್ನೆಯೂ ಹೌದು. ನನಗೂ ಇದೀಗ ಆಶಾಭಾವನೆ ಬಂದಿದೆ. ನಿಮ್ಮ ಧೈರ್ಯದಿಂದ ನನಗೆ ಆತ್ಮವಿಶ್ವಾಸ ಬಂದಿದೆ. ಕೆಲವರು ಧೈರ್ಯ ಕೆಡಿಸುವ ಕೆಲಸ ಮಾಡುತ್ತಾರೆ. ಅದನ್ನು ಮೆಟ್ಟಿನಿಲ್ಲುವ ತಾಕತ್ತು ಬೆಳೆಸಿಕೊಳ್ಳಿ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸೋಣ. ಇದೇ 25ರಂದು ನಾಮಪತ್ರ ಸಲ್ಲಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು’ ಎಂದು ಕೋರಿದರು.ಹಣ ಇರುವವರೇ ಚುನಾವಣೆಯಲ್ಲಿ ಗೆಲುವು ಸಾಧಿಸಿವುದೇ ಆಗಿದ್ದರೆ ಟಾಟಾ ಬಿರ್ಲಾ, ಅಂಬಾನಿ ಪ್ರಧಾನಿ ಆಗಬೇಕಿತ್ತು. ಯಾವ ಪಕ್ಷ, ಯಾವ ಮುಖಂಡರು ಜನರ ಬೇಡಿಕೆಗೆ, ನೋವಿಗೆ, ಸಂತೋಷಕ್ಕೆ ಸ್ಪಂದಿಸುತ್ತಾರೆಯೊ ಅವರೇ ಗೆಲುವು ಪಡೆಯುತ್ತಾರೆ. ಎಂಎಲ್‌ಸಿ ಚುನಾವಣೆ ಆದ ಬಳಿಕ ಹಣ ಇರುವವರೇ ಗೆಲುವು ಪಡೆಯುತ್ತಾರೆ ಎಂದು ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ನಾನೂ ಸತ್ತಂತೆ ಆಗಿದ್ದೆ; ಜೆಡಿಎಸ್‌ಗೆ ಸೇರಿದ ಬಳಿಕ ಉತ್ಸಾಹ ಮರುಕಳಿಸಿದೆ. ಕೆಟ್ಟದ್ದು ಮಾತನಾಡದೇ ಗೆಲುವಿಗೆ ಶ್ರಮಿಸೋಣ’ ಎಂದು ಹೇಳಿದರು.ಮುಖಂಡ ಸೈಯದ್‌ ಸೈಫುಲ್ಲಾ ಮಾತನಾಡಿ, ಲೋಕಸಭಾ ಚುನಾವಣೆಗೆ ಒಳ್ಳೆಯ ಅಭ್ಯರ್ಥಿಗೆ ಹುಡುಕಾಟ ನಡೆಯುತ್ತಿತ್ತು. ಈಗ ಉತ್ತಮ ವ್ಯಕ್ತಿ ಪಕ್ಷಕ್ಕೆ ಮರಳಿದ್ದು, ಗೆಲುವಿಗೆ ಶ್ರಮಿಸುವುದು ಮಾತ್ರ ಉಳಿದಿರುವ ಕೆಲಸ. ಕಾಂಗ್ರೆಸ್‌, ಬಿಜೆಪಿ ಯಾವ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ಗೆ ಬಿಜೆಪಿ ಸೋಲಿಸುವ ಶಕ್ತಿ ಇಲ್ಲ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಶಕ್ತಿ ಇರುವುದು ಜೆಡಿಎಸ್‌ಗೆ ಮಾತ್ರ. ಮಹಿಮ ಪಟೇಲ್‌ ಉತ್ತಮ ಚಾರಿತ್ರ್ಯ ಹೊಂದಿರುವ ಸಜ್ಜನ ರಾಜಕಾರಣಿ. ಅವರನ್ನು ಮತದಾರರು ಕೈಬಿಡುವುದಿಲ್ಲ ಎಂದ ಅವರು, ರಾಷ್ಟ್ರೀಯ ಪಕ್ಷಗಳಿಗೆ ಜನರ ಹಿತಕಾಯಲು ಸಾಧ್ಯವೇ ಇಲ್ಲ. ಪ್ರಾದೇಶಿಕ ಪಕ್ಷಗಳಿಗೆ ಜನರು ಮನ್ನಣೆ ನೀಡಬೇಕು’ ಎಂದು ಕೋರಿದರು.ಮುಖಂಡ ಅಸ್ಗರ್‌ ಮಾತನಾಡಿ, ಈ ಚುನಾವಣೆಯಲ್ಲಿ ಮಾವ ಅಳಿಯನ ಆಟ ನಡೆಯುವುದಿಲ್ಲ. ಈಗೇನಿದ್ದರೂ ಜೆಡಿಎಸ್‌ ಯುಗ ಎಂದು ಹೇಳಿದರು.ಕಾನೂನು ತಜ್ಞ ಎಸ್‌.ಎಚ್‌ಪಟೇಲ್‌ ಮಾತನಾಡಿ, ‘ನಮ್ಮ ದೇಶಕ್ಕೆ ಇಂಗ್ಲೆಂಡ್‌ ಅಥವಾ ಚೀನಾ ವೈರಿ ಅಲ್ಲ; ಬಡತನವೇ ದೊಡ್ಡವೈರಿ. ಸರ್ಕಾರದ ಅಂಕಿ–ಅಂಶದ ಪ್ರಕಾರವೇ ಭಾರತದಲ್ಲಿ 40 ಕೋಟಿ ಬಡವರಿದ್ದಾರೆ. ಫಲಾನುಭವಿಗಳಿಗೆ ₨ 1ನಲ್ಲಿ 20 ಪೈಸೆಯಷ್ಟು ಮಾತ್ರ ಸೌಲಭ್ಯ ಸಿಗುತ್ತಿದೆ.ನೀವೇ ಊಹೆ ಮಾಡಿ ದೇಶ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು. ಇದೀಗ ಮತದಾರರೇ ತೀರ್ಮಾನ ತೆಗೆದುಕೊಳ್ಳುವ ಕಾಲ ಬಂದಿದೆ. ಪ್ರಜ್ಞಾವಂತಿಕೆಯಿಂದ ಚಿಂತನೆ ನಡೆಸಿ ಅನುಷ್ಠಾನಕ್ಕೆ ತನ್ನಿ’ ಎಂದು ಸೂಚ್ಯವಾಗಿ ಹೇಳಿದರು.ಹಳೆ ದಾವಣಗೆರೆ ಭಾಗದಲ್ಲಿ ನಾಯಿ, ಹಂದಿಗಳ ಜತೆಗೆ ಜನರು ವಾಸ ಮಾಡುವ ಸ್ಥಿತಿಯಲ್ಲಿ ಇದ್ದಾರೆ. ಸಹಬಾಳ್ವೆ, ಸಹ ಜೀವನ ನಮ್ಮ ಆಶಯ ಆಗಬೇಕು. ಬಡವರನ್ನು ಸಂಘಟಿಸಿ, ಪ್ರಜಾಪ್ರಭುತ್ವದ ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದು ಕೋರಿದರು.ಚುನಾವಣೆಗಳು ಪ್ರಜಾಪ್ರಭುತ್ವದ ಆತ್ಮ. ಪ್ರಸ್ತುತ ನಡೆಯುತ್ತಿರುವ ಚುನಾವಣೆಗಳು ಹೇಗೆ ನಡೆಯಬೇಕೊ ಹಾಗೆ ನಡೆಯುತ್ತಿಲ್ಲ. ರಾಮಮನೋಹರ ಲೋಹಿಯ ಪ್ರಜಾಪ್ರಭುತ್ವದ ಆಶಯಗಳ ಅನುಷ್ಠಾನಕ್ಕೆ ಜೀವನ ಮೀಸಲಿಟ್ಟಿದ್ದರು. ಆರ್ಥಿಕ ಅಸಮಾನತೆಗಿಂತ ಸಾಮಾಜಿಕ ಅಸಮಾನತೆ ಕ್ರೂರ. ಈಗಲೂ ಅಸ್ಪೃಶ್ಯತೆ ಜೀವಂತವಾಗಿದೆ. ಅಸ್ಪೃಶ್ಯತೆ ಇಲ್ಲ ಎಂದು ಹೇಳಿದರೆ ಕಾಲಿಗೆ ಬೀಳುತ್ತೇನೆ. ದೇಶ, ಸಮಾನತೆಗಿಂತ ನಮಗೇನು ಸಿಕ್ಕಿದೆ ಎಂದು ನೋಡುವವರೇ ಹೆಚ್ಚಾಗಿದ್ದಾರೆ ಎಂದು ನೋವು ತೋಡಿಕೊಂಡರು.ಜಿಲ್ಲಾ ಘಟಕದ ಅಧ್ಯಕ್ಷ ಟಿ.ದಾಸಕರಿಯಪ್ಪ, ಎಚ್‌.ಸಿ.ಗುಡ್ಡಪ್ಪ, ಹೂವಿನಮಡು ಚಂದ್ರಪ್ಪ, ಕಲ್ಲೇರುದ್ರೇಶ್‌, ರಮೇಶ್‌, ಗುರುಸಿದ್ದನಗೌಡ, ಬಾತಿ ಶಂಕರ್‌, ಅನಸೂಯಮ್ಮ, ನಾಗೇಶ್‌, ಪುಷ್ಪಾ, ಪಾಪಣ್ಣ ಮೊದಲಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.