ಗುರುವಾರ , ಆಗಸ್ಟ್ 22, 2019
21 °C
ಮಂಡ್ಯ ಲೋಕಸಭೆ ಉಪಚುನಾವಣೆ

ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ನಾಮಪತ್ರ ಸಲ್ಲಿಕೆ

Published:
Updated:

ಮಂಡ್ಯ: ಜಿಲ್ಲೆಯ ಜೆಡಿಎಸ್ ಜನಪ್ರತಿನಿಧಿಗಳು ಹಾಗೂ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ                  ಸಿ.ಎಸ್. ಪುಟ್ಟರಾಜು ಶುಕ್ರವಾರ ಮಂಡ್ಯ ಲೋಕಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದರು.ನಗರದ ವಿದ್ಯಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಉದ್ಯಾನದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್‌ರಾಂ, ಸರ್ ಎಂ.ವಿ. ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿ ಚುನಾವಣಾಧಿಕಾರಿ ಬಿ.ಎನ್. ಕೃಷ್ಣಯ್ಯ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ನಂತರ ಹೊರಬಂದು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ಎನ್. ಚಲುವರಾಯಸ್ವಾಮಿ, ಪುಟ್ಟರಾಜು ಅವರು ಪಕ್ಷದ ಒಮ್ಮತ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರವನ್ನು ಜೆಡಿಎಸ್ ಬಳಿಯೇ ಉಳಿಸಿಕೊಳ್ಳಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.ಜನರು ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ನೋಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನೂ ನೋಡಿದ್ದಾರೆ. ಇವುಗಳ ಬಗೆಗೆ ತಿಳಿಸಿ, ಜೆಡಿಎಸ್‌ಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದರು.ಪುಟ್ಟರಾಜು ಅವರನ್ನು ಗೆಲ್ಲಿಸುವ ಮೂಲಕ ರೈತರ ಪರವಾಗಿ ಸದಾ ಹೋರಾಟ ಮಾಡುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.ಶಾಸಕ ಡಿ.ಸಿ. ತಮ್ಮಣ್ಣ ಮಾತನಾಡಿ, ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಪುಟ್ಟರಾಜು ಅವರ ಗೆಲ್ಲಿಸುವ ಮೂಲಕ ಜೆಡಿಎಸ್ ಕೋಟೆಯನ್ನು ಭದ್ರ ಪಡಿಸಬೇಕು ಎಂದರು.ಶಾಸಕರಾದ ಮರಿತಿಬ್ಬೇಗೌಡ, ಬಿ. ರಾಮಕೃಷ್ಣ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಕೆ.ಸಿ. ನಾರಾಯಣಗೌಡ, ಮಾಜಿ ಶಾಸಕರಾದ ಎಂ. ಶ್ರೀನಿವಾಸ್,         ಕೆ.ಟಿ. ಶ್ರೀಕಂಠೇಗೌಡ, ಪ್ರಭಾವತಿ ಜಯರಾಂ,              ಜಿ.ಬಿ. ಶಿವಕುಮಾರ್, ಎಚ್.ಬಿ. ರಾಮು,                        ಕೆ. ಅನ್ನದಾನಿ ಮುಖಂಡ ದೇವರಾಜ್, ಅಶೋಕ ಜಯರಾಂ, ಭಾರತಿ ಕೃಷ್ಣಮೂರ್ತಿ, ಕೆ.ಎಸ್. ವಿಜಯಾನಂದ, ಕೆರೆಗೋಡು ಸೋಮಶೇಖರ್, ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.ನಾಲ್ಕು ನಾಮಪತ್ರಗಳ ಸಲ್ಲಿಕೆ : ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಶುಕ್ರವಾರ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎಸ್. ಪುಟ್ಟರಾಜು ಎರಡು ಪ್ರತಿ, ಪಕ್ಷೇತರ ಅಭ್ಯರ್ಥಿಗಳಾಗಿ ಐಎನ್‌ಆರ್ ಗೌಡ ನಂದೀಶ್ ಹಾಗೂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಎನ್. ಕೃಷ್ಣಯ್ಯ ತಿಳಿಸಿದ್ದಾರೆ.

Post Comments (+)