ಸೋಮವಾರ, ಜನವರಿ 27, 2020
24 °C

ಜೆಡಿಎಸ್, ಕಾಂಗ್ರೆಸ್‌ಗೆ ಫಲಿಸಿದ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: `ಆಪರೇಷನ್ ಕಮಲ~ದ ಮೂಲಕ ನಗರಸಭೆ ಅಧಿಕಾರದ ಗಾದಿ ಹಿಡಿದಿದ್ದ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ತನ್ನ ಎಲ್ಲ `ಸಾಹಸ~, `ಯತ್ನ~ಗಳ ನಡುವೆಯೂ ಜೆಡಿಎಸ್, ಕಾಂಗ್ರೆಸ್ ಸದಸ್ಯರಿಗೆ ಶುಕ್ರವಾರ ತಲೆಬಾಗಲೇ ಬೇಕಾಯಿತು.ಕಳೆದ ಆರು ತಿಂಗಳಿಂದ ಅಧ್ಯಕ್ಷೆ ಯಶೋಧಾಗಂಗಪ್ಪ ಅವರನ್ನು ಅವಿಶ್ವಾಸದ ಮೂಲಕ ಕೆಳಗಿಳಿಸಲು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಮಾಡುತ್ತಿದ್ದ ಯತ್ನಕ್ಕೆ ಕೊನೆಗೂ ತೆರೆಬಿತ್ತು. ಅವಿಶ್ವಾಸದ ಮೂಲಕ ಯಶೋಧಾ ಅವರನ್ನು ಶುಕ್ರವಾರ ಪದಚ್ಯುತಗೊಳಿಸಲಾಯಿತು. ಅವಿಶ್ವಾಸದ ಪರವಾಗಿ 25 ಮತಗಳು ಬಿದ್ದರೆ, ಬಿಜೆಪಿ ಸದಸ್ಯರು ಗೈರು ಹಾಜರಿಯಿಂದ ಯಶೋಧಾ ಪರ ಒಂದೂ ಮತವು ಬೀಳಲಿಲ್ಲ.ಕಳೆದ ತಿಂಗಳು ಸದಸ್ಯರು ಸಲ್ಲಿಸಿದ ಅವಿಶ್ವಾಸ ಸೂಚನೆ ಕಾನೂನು ಬದ್ಧವಾಗಿಲ್ಲ ಎಂದು ಯಶೋಧಾ ಗಂಗಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೂಚನೆಯಂತೆ ಎರಡನೇ ಬಾರಿಗೆ ಸದಸ್ಯರು ಅವಿಶ್ವಾಸ ಮಂಡನೆ ತಂದಿದ್ದರು. ನಿಗದಿತ ದಿನಾಂಕದೊಳಗೆ ಸಭೆ ಕರೆಯಲು ಅಧ್ಯಕ್ಷೆ ವಿಫಲರಾದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಅಸ್ಲಾಂ ಪಾಷಾ ಅಧ್ಯಕ್ಷೆತೆಯಲ್ಲಿ ಸಭೆ ನಡೆಯಿತು. ಬೆಳಿಗ್ಗೆ ಹನ್ನೊಂದು ಗಂಟೆಗೆ ಸಭೆ ಆರಂಭವಾಗಬೇಕಿದ್ದರೂ ಆಯುಕ್ತೆ ಸಾವಿತ್ರಿ ಅವರ `ನಿಗೂಢ ಕಣ್ಮರೆ~ಯ ಕಾರಣ ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಯಿತು.ಅವಿಶ್ವಾಸ ಸಭೆಯಲ್ಲಿ ಗದ್ದಲ ನಡೆಯಬಹುದೆಂಬ ಕಾರಣದಿಂದ ಸಭೆಗೂ ಮುನ್ನವೇ ನಗರಸಭೆಯನ್ನು ಪೊಲೀಸರು ಸುತ್ತುವರೆದಿದ್ದರು. ನಗರಸಭೆಯೊಳಗೆ ಮಾಧ್ಯಮದವರು, ಸದಸ್ಯರನ್ನು ಹೊರತುಪಡಿಸಿ ಯಾರನ್ನು ಬಿಡಲಿಲ್ಲ.ಮಧ್ಯಾಹ್ನ 1 ಗಂಟೆಗೆ ಪೊಲೀಸರ ರಕ್ಷಣೆಯಲ್ಲಿ ಸಭೆಗೆ ಆಗಮಿಸಿದ ಆಯುಕ್ತೆ ಸಾವಿತ್ರಿ, `ಬೆಂಗಳೂರಿನಲ್ಲಿ ಪೌರಾಡಳಿತ ನಿರ್ದೇಶನಾಲಯ ಸಭೆಗೆ ತೆರಳಿದ್ದೆ. ತಮ್ಮ ಅನುಪಸ್ಥಿತಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ್ ಅವರಿಗೆ ಸಭೆ ನಡೆಸಲು ಲಿಖಿತವಾಗಿ ಅನುಮತಿ ನೀಡಿದ್ದೆನು. ಅಲ್ಲದೆ ಬೆಳಿಗ್ಗೆ ಕೂಡ ದೂರವಾಣಿ ಮೂಲಕ ಅವಿಶ್ವಾಸ ಸಭೆ ನಡೆಸುವಂತೆ ಸೂಚಿಸಿದ್ದೆ~ ಎಂದು ತಮ್ಮ `ನಿಗೂಢ ಕಣ್ಮರೆ~ಯ ಕುರಿತು ವಿವರ ನೀಡಿದರು.ಸಭೆ ನಿಗದಿತ ಸಮಯಕ್ಕೆ ನಡೆದಿಲ್ಲ. ಹೀಗಾಗಿ ಸಭೆಯನ್ನು ಮುಂದೂಡಿ ಎಂದು ಅಧ್ಯಕ್ಷೆ ಯಶೋಧಾ ಗಂಗಪ್ಪ, ಬಿಜೆಪಿ ಸದಸ್ಯರಾದ ಸುಜಾತಾ ಚಂದ್ರಶೇಖರ್, ವಿಜಯಾರುದ್ರೇಶ್, ಗೌಸಿಯಾ ಒತ್ತಾಯಿಸಿದರು.ಆದರೆ ಇದಕ್ಕೆ ಆಯುಕ್ತರು ಬೆಲೆ ಕೊಡಲಿಲ್ಲ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಉಪಾಧ್ಯಕ್ಷ ಅಸ್ಲಾಂ ಪಾಷಾ, ಸದಸ್ಯರು ಗೌರವದಿಂದ ಆಸನದಲ್ಲಿ ಕುಳಿತುಕೊಳ್ಳದಿದ್ದರೆ ಸಭೆಯಿಂದ ಹೊರಹಾಕುವುದಾಗಿ ಕೂಗಿದರು.

 

ಈ ನಡುವೆ ತಮಗೆ ಮಾತನಾಡಲು ಅವಕಾಶ ಕೊಡುವಂತೆ ಸುಜಾತಾ ಚಂದ್ರಶೇಖರ್ ಒತ್ತಾಯಿಸಿದರು. ಮಾತನಾಡಲು ಮೈಕ್ ತೆಗೆದುಕೊಳ್ಳುತ್ತಿರುವಾಗ ಸದಸ್ಯ ನಯಾಜ್ ಅದನ್ನು ಕಿತ್ತುಕೊಂಡರು. ತಕ್ಷಣ ನಯಾಜ್ ಬಳಿ ಧಾವಿಸಿದ ಯಶೋಧಾ ಗಂಗಪ್ಪ ಮೈಕ್ ಕಿತ್ತುಕೊಂಡು ಸುಜಾತಗೆ ನೀಡಿದರು. `ಮಹಿಳಾ ಸದಸ್ಯೆಯಿಂದ ಮೈಕ್ ಕಿತ್ತುಕೊಳ್ಳಲು ನಾಚಿಕೆಯಾಗುವುದಿಲ್ಲವೇ~ ಎಂದು ನಯಾಜ್ ವಿರುದ್ಧ ಹರಿಹಾಯ್ದರು.ಅವಿಶ್ವಾಸ: ಕೈ ಎತ್ತುವ ಮೂಲಕ ಅವಿಶ್ವಾಸದ ಪರ ಮತ ಚಲಾಯಿಸಿದರು. 24 ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್.ಹುಲಿನಾಯ್ಕರ್ ಅವಿಶ್ವಾಸದ ಪರ ಮತ ಹಾಕಿದರು. ಬಿಜೆಪಿ ಶಾಸಕ ಎಸ್.ಶಿವಣ್ಣ ಸೇರಿದಂತೆ ಬಿಜೆಪಿ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಯಶೋಧಾ ಗಂಗಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆರವು ಮಾಡಲಾಗಿದೆ. ಆದರೆ ಈಗ ಮಂಡಿಸಿರುವ ಅವಿಶ್ವಾಸ ಜ. 30ರ       ಹೈಕೋರ್ಟ್‌ನ ತೀರ್ಪಿಗೆ ಬದ್ಧವಾಗಿರುತ್ತದೆ ಎಂದು ಆಯುಕ್ತೆ ಸಾವಿತ್ರಿ ಪ್ರಕಟಿಸಿದರು. ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷ ಅಸ್ಲಾಂ ಪಾಷಾ ಅಧಿಕಾರ ವಹಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)