ಗುರುವಾರ , ನವೆಂಬರ್ 14, 2019
22 °C

ಜೆಡಿಎಸ್, ಕಾಂಗ್ರೆಸ್‌ನಲ್ಲಿ ನಿಲ್ಲದ ಬಂಡಾಯ

Published:
Updated:

ಮುಳಬಾಗಲು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರವೂ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಬಂಡಾಯ ಪ್ರಖರವಾಗಿ ಹೊಳೆಯಿತು.ಮೊದಲಿಗೆ ಜೆಡಿಎಸ್ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿದ್ದ ಆದಿನಾರಾಯಣ ಬದಲಾದ ಸನ್ನಿವೇಶದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮತ್ರ ಸಲ್ಲಿಸಿದರು. ಮುನಿಆಂಜಪ್ಪ ಅವರಿಗೆ ನೀಡಿದ್ದನ್ನು ಅವರು ಸ್ಪಷ್ಟವಾಗಿ ವಿರೋಧಿಸಿದರು. ಅವರ ಜೊತೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮತ್ತೊಬ್ಬ ಮುಖಂಡ ಸಿ.ವಿ.ಗೋಪಾಲ್ ಕೂಡ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಕಾಂಗ್ರೆಸ್‌ನ ಅಮರೇಶ್ ವಿರುದ್ಧ ಮುನಿಸಿಕೊಂಡಿರುವ ಪಕ್ಷದ ಮುಖಂಡರು ಜಿ.ಮಂಜುನಾಥ್ ಅವರಿಗೆ ಬೆಂಬಲ ಪ್ರಕಟಿಸಿದ್ದಾರೆ. ಬುಧವಾರ ಮಂಜುನಾಥ್ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರೊಡನೆ ಕಾಣಿಸಿಕೊಂಡು ಗಮನ ಸೆಳೆದರು.ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಮುನಿಆಂಜಪ್ಪ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆ ಹೊರಟು ಡಾ.ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿದ ನಂತರ ನಾಮಪತ್ರ ಸಲ್ಲಿಸಿದರು. ದಿವಂಗತ ಸಚಿವ ಅಲಂಗೂರು ಶ್ರೀನಿವಾಸ್ ಮಗಳು ಡಾ.ಭವಾನಿ, ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶ್ಯಾಮೇಗೌಡ ಹಾಜರಿದ್ದರು.ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ ಮತ್ತು ವಕೀಲ ಕೆ.ವಿ.ಶಂಕರಪ್ಪ ಈ ವೇಳೆ ಗೈರುಹಾಜರಾಗಿದ್ದರು. ಅವರು ಜೆಡಿಎಸ್ ವರಿಷ್ಠರ ಕರೆಯ ಮೇರೆಗೆ ಬೆಂಗಳೂರಿಗೆ ಹೋಗಿದ್ದು ಅವರ ಸಂಪೂರ್ಣ ಬೆಂಬಲ ತಮಗಿದೆ ಎಂದು ಮುನಿಆಂಜಪ್ಪ ಮಾಧ್ಯಮದವರಿಗೆ ತಿಳಿಸಿದರು.ಜೆಡಿಎಸ್ ಪಕ್ಷದಿಂದ ಬಂಡಾಯ ಅಭ್ಯರ್ಥಿಯಾಗಿ ಸಿ.ವಿ.ಗೋಪಾಲ್ ಮತ್ತು ಆದಿನಾರಾಯಣ್ ನಾಮಪತ್ರ ಸಲ್ಲಿಸಿದರು. ಆದಿನಾರಾಯಣ್ ಅವರಿಗೆ ಸೋಮವಾರವಷ್ಟೇ ಜೆಡಿಎಸ್ ಬಿ ಪಾರಂ ನೀಡಲಾಗಿತ್ತು. ನಂತರ ಅದನ್ನು ಮಂಗಳವಾರ ವಾಪಸ್ಸು ಪಡೆಯಲಾಗಿತ್ತು.ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯೆಂದು ಘೋಷಿಸಿಕೊಂಡ ಜಿ.ಮಂಜುನಾಥ್ ಕೂಡ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ತಾಲ್ಲೂಕು ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಜಿ.ರಾಮಲಿಂಗಾರೆಡ್ಡಿ ಮತ್ತು ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹನಾಜ್ ಹಾಗೂ ಕೋಲಾರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಅಶೋಕ್ ಕೃಷ್ಣಪ್ಪ ಹಾಗೂ ನೀಲಕಂಠೇಗೌಡ ಹಾಜರಿದ್ದರು.ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಅವರು, ಪಕ್ಷದ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುವುದಾಗಿ ತಿಳಿಸಿದರು.ಪಟ್ಟಣದ ಸೋಮೇಶ್ವರಪಾಳ್ಯದಿಂದ ಅಂಬೇಡ್ಕರ್ ಪ್ರತಿಮೆವರೆಗೂ ಮಂಜುನಾಥ್ ಪರವಾಗಿ ಸಾವಿರಾರು ಬೆಂಬಲಿಗರು ಮೆರವಣಿಗೆಯಲ್ಲಿ ಬಂದರು.ಸಿಪಿಐನಿಂದ ಅಂಬರೀಶ್, ಜೆಡಿಯು ಪಕ್ಷದಿಂದ ಎಚ್.ಎ.ಲಕ್ಷ್ಮಯ್ಯ, ಬಿಎಸ್‌ಆರ್‌ನಿಂದ ಸಿ.ಕೆ.ಜಗದೀಶ್, ಕೆಜೆಪಿಯಿಂದ ದೊಡ್ಡಚೌಡಪ್ಪ, ಪಕ್ಷೇತರರಾಗಿ ವಜ್ರನಾಗೇನಹಳ್ಳಿ ರಾಮಚಂದ್ರಪ್ಪ, ವಿ.ಮಾರಪ್ಪ, ನಾಗಮಂಗಲ ಚಲಪತಿ, ಸರ್ವೊದಯ ಪಕ್ಷದಿಂದ ರಂಜೀತ್‌ಕುಮಾರ್, ತೊರಡಿ ಶಿವಣ್ಣ. ಗುಜ್ಜಹಳ್ಳಿ ಚೌಡಪ್ಪ, ಕೊತ್ತೂರು ವೆಂಕಟರವಣ, ಎನ್.ಶ್ರೀನಿವಾಸ್, ಹನುಮಂತ್, ಕಗ್ಗನಹಳ್ಳಿ ಶ್ರೀನಿವಾಸ್, ಕೆ.ಜಯರಾಮ್, ಸುಬ್ರಮಣಿ, ಬಾಲಕೃಷ್ಣ, ಗಂಗಿರೆಡ್ಡಿ, ಸಿಂಗಪೂರ್ ಗೋವಿಂದ್ ನಾಮಪತ್ರಗಳನ್ನು ಸಲ್ಲಿಸಿದರು.ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಸಾವಿರಾರು ಮಂದಿ ಕಾರ್ಯಕರ್ತರು ಜೆಡಿಎಸ್ ಕಚೇರಿಯ ಮುಂದೆ ಹಾಜರಾಗಿದ್ದರು. ಅವರ ದಾಹ ತಣಿಸಲು ಮಜ್ಜಿಗೆ ಹೊತ್ತು ತಂದ ಟ್ರಕ್‌ಗೆ ಕಾರ್ಯಕರ್ತರು ಸುತ್ತುವರಿದು ಮಜ್ಜಿಗೆ ಪಡೆಯಲು ಸಾಹಸ ಮಾಡಿದರು.

ಸಾಮಾನ್ಯ ಕ್ಷೇತ್ರವಾಗಿದ್ದಾಗಲೂ ಮೀಸಲಾತಿ ಅಡಿಯಲ್ಲಿ ಸ್ಪರ್ಧಿಸುತ್ತಿದ್ದ ಸಿಂಗಪೂರ್ ಗೋವಿಂದ್ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಸುಮಾರು ಇಪ್ಪತೈದಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದವು.ವೀಕ್ಷಕರ ಭೇಟಿ:

ಚುನಾವಣಾ ವಿಕ್ಷಕರಾದ ಆರ್.ಎನ್.ಲಾಲ್, ಕೇಶವಮೂರ್ತಿ ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿ, ಚುನಾವಣೆ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ಡಾ.ವಿಶ್ವನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್‌ನಿವಾಸ್ ಸೆಪಟ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)