ಜೆಡಿಎಸ್ ಗಲ್ಲಿ ಪಕ್ಷ: ವಿಶ್ವನಾಥ್ ವ್ಯಂಗ್ಯ

7

ಜೆಡಿಎಸ್ ಗಲ್ಲಿ ಪಕ್ಷ: ವಿಶ್ವನಾಥ್ ವ್ಯಂಗ್ಯ

Published:
Updated:

ಮೈಸೂರು: `ಜೆಡಿಎಸ್ ಕುತಂತ್ರ ರಾಜಕಾರಣ ಮಾಡುವ ಮೂಲಕ ಪ್ರಾದೇಶಿಕ ಪಕ್ಷದಿಂದ ಗಲ್ಲಿ ಪಕ್ಷವಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಜೆಡಿಎಸ್ ನೇಪಥ್ಯಕ್ಕೆ ಸರಿಯುತ್ತಿದೆ' ಎಂದು ಸಂಸದ ಅಡಗೂರು ಎಚ್. ವಿಶ್ವನಾಥ್ ಕಿಡಿಕಾರಿದರು.`ಬಿಜೆಪಿ ಒಡೆಯುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಸುಪಾರಿ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿರುವುದು ಸರಿಯಲ್ಲ. ಅವರ ಆರೋಪ ಶುದ್ಧ ಸುಳ್ಳು. ಕಾಂಗ್ರೆಸ್‌ನಲ್ಲಿ ಸುಪಾರಿ ಕೊಡುವ ಸಂಸ್ಕೃತಿ ಇಲ್ಲ. ಅದು ಜೆಡಿಎಸ್‌ನಲ್ಲಿದೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೆ ಇಲ್ಲ' ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.`ಸುಮಾರು 40 ವರ್ಷಗಳ ಕಾಲ ಒಂದು ಪಕ್ಷದಲ್ಲಿ ಇದ್ದ ಯಡಿಯೂರಪ್ಪ ಅವರು ಮಾತೃಪಕ್ಷವನ್ನು ತೊರೆಯುವಾಗ ನೋವಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಬಗ್ಗೆ ಕುಮಾರಸ್ವಾಮಿ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಜೆಡಿಎಸ್ ಮರೆಗೆ ಸರಿಯುತ್ತಿರುವುದರಿಂದ ಕಂಗೆಟ್ಟು ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ' ಎಂದು ಹೇಳಿದರು.`ಕರ್ನಾಟಕ ಜನತಾ ಪಕ್ಷ ಬಲವರ್ಧನೆಯಾದ ನಂತರ ಜೆಡಿಎಸ್ ತಾನಾಗೆ ನೇಪಥ್ಯಕ್ಕೆ ಸರಿಯಲಿದೆ. ಜೆಡಿಎಸ್ ಕುತಂತ್ರ ರಾಜಕಾರಣದ ಬಗ್ಗೆ ಜನರಿಗೆ ಗೊತ್ತಿದೆ. ಬಿಜೆಪಿಗೆ ಹಗರಣಗಳು ಅಂಟಿಕೊಂಡಿವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಪಕ್ಷದ ಬೆಂಬಲ ಪಡೆಯದೆ ಸ್ಪಷ್ಟ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್‌ನಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ರೇಸ್‌ನಲ್ಲಿ ಇದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry