ಜೆಡಿಎಸ್ ಗೆಲ್ಲಿಸಿ ಡಿಕೆ ಸಹೋದರರಿಗೆ ತಕ್ಕ ಉತ್ತರ ನೀಡಿ

ಕನಕಪುರ: ಅಧಿಕಾರ ಮತ್ತು ಹಣದ ಮದದಿಂದ ರಾಮನಗರ ಜಿಲ್ಲೆಯಿಂದಲೇ ಖಾಲಿ ಮಾಡಿಸುತ್ತೇನೆಂದು ದುರಹಂಕಾರದಿಂದ ಹೇಳುತ್ತಿರುವ ಡಿ.ಕೆ. ಸಹೋದರರಿಗೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವ ಮೂಲಕ ತಕ್ಕ ಉತ್ತರ ನೀಡಬೇಕೆಂದು ಜೆ.ಡಿ.ಎಸ್. ಪಕ್ಷದ ರಾಜ್ಯಾಧ್ಯಕ್ಷ, ಶಾಸಕ ಎಚ್.ಡಿ. ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲ್ಲೂಕಿನ ಹಾರೋಹಳ್ಳಿ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಕುರಿತು ಮಾತನಾಡಿದರು.
ಜೆ.ಡಿ.ಎಸ್. ಪಕ್ಷ ಹಣದಿಂದ, ರಾಜಕೀಯ ಲಾಭಕ್ಕಾಗಿ ಕಟ್ಟಿದ ಪಕ್ಷವಲ್ಲ, ಬಡವರ, ಶೋಷಿತರ ಧ್ವನಿಯಾಗಿ ರೈತಪರ ಚಿಂತನೆಯೊಂದಿಗೆ ಕಟ್ಟಿದ ಪಕ್ಷ, ಈ ಪಕ್ಷವನ್ನು ನಾಶ ಮಾಡುತ್ತೇನೆ ಎಂದು ಹೇಳುವುದು ಸುಲಭದ ಮಾತಲ್ಲ, ಪಕ್ಷದಲ್ಲಿ ಪ್ರತಿಯೊಬ್ಬ ಪ್ರಾಮಾಣಿಕ ಕಾರ್ಯಕರ್ತನ ಬೆವರಿದೆ, ಯಾವುದೆ ಹಣ ಆಮಿಷಗಳಿಗಾಗಿ ರಾಜ್ಯದ ಜನತೆ ಪಕ್ಷಕ್ಕೆ ಬಂದಿಲ್ಲ, ಸ್ವಾಭಿಮಾನದ ಸಂಕೇತವಾಗಿ ಜನತೆ ಪಕ್ಷ ಬೆಳಸುತ್ತಿದ್ದಾರೆಂದರು.
ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿಯನ್ನು ನಮ್ಮ ಅಧಿಕಾರದಲ್ಲಿ ಮಾಡಿದ್ದೇವೆ ಎಂದರು. ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ ಜೆ.ಡಿ.ಎಸ್. ಪಕ್ಷ ನಮ್ಮ ನಿಮ್ಮ ಪಕ್ಷ, ಇಲ್ಲಿ ಎಲ್ಲರೂ ಪಕ್ಷದ ನಾಯಕರೇ, ನೀವೇ ಈ ಪಕ್ಷದ ಕುಮಾರಸ್ವಾಮಿ, ದೇವೇಗೌಡರು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸೈಯದ್ ಮುದೀರ್ ಆಗಾ, ಮಾಜಿ ಸದಸ್ಯ ಮರಿಲಿಂಗೇಗೌಡ, ಮಾಜಿ ಶಾಸಕ ಸಿ.ಎಸ್. ಅಶ್ವತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಎಸ್.ಭುಜಂಗಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಾಮಕೃಷ್ಣ, ರಾಮು, ಈರೇಗೌಡ ಮುಖಂಡರಾದ ಮಲ್ಲಪ್ಪ, ಸೋಮು, ಪ್ರಭಾಕರರೆಡ್ಡಿ, ತಾಮಸಂದ್ರ ನಾಗೇಶ್, ರಾಜು, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.