ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನದ ಹೊಗೆ

7

ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನದ ಹೊಗೆ

Published:
Updated:

ತುಮಕೂರು: ಬುಧವಾರ ಬೆಳಿಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಹೆಸರು ಹೊತ್ತ ಲಕೋಟೆ ತಂದ ಶಾಸಕಿ ಅನಿತಾ ಕುಮಾರಸ್ವಾಮಿ ತೆರಳಿದ ಬಳಿಕ ಜೆಡಿಎಸ್ ಸಭೆಯಲ್ಲಿ ಸದಸ್ಯರ ಅಸಮಾಧಾನ, ದುಃಖ, ನಾಯಕರ ವಿರುದ್ಧ ಸೆಡವು, ಕೋಪತಾಪ ಜೋರಾಗಿತ್ತು.



ಸೌಜನ್ಯಕ್ಕಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಷಯವನ್ನು ಸದಸ್ಯರ ಬಳಿ ಪ್ರಸ್ತಾಪ ಮಾಡದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ವಿರುದ್ಧ ಸುಮಾರು 20 ಸದಸ್ಯರು ಮುಗಿಬಿದ್ದರು. ನಮ್ಮಗಳ ಸದಸ್ಯತ್ವಕ್ಕೆ ಗೌರವ ಕೊಡದ ಮೇಲೆ ಚುನಾವಣೆಗೆ ಯಾಕೆ ಬರಬೇಕೆಂದು ಪ್ರಶ್ನಿಸಿದರು. ಚುನಾವಣೆಗೆ ಬರುವುದಿಲ್ಲ ಎಂದು ಪಟ್ಟುಹಿಡಿದು ಕೂತರು.



ಸಭೆ ಮೊದಲಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಪಕ್ಷದ ಹಿತದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷೆ, ಉಪಾಧ್ಯಕ್ಷೆ ಹೆಸರನ್ನು ಅಂತಿಮಗೊಳಿಸಿದ್ದು, ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸದಸ್ಯರ ಮೌನಸಮ್ಮತಿ ಬಳಿಕ ಅನಿತಾ ತೆರಳಿದರು. ಅವರು ಅತ್ತ ತೆರಳುತ್ತಿದ್ದಂತೆ ಇತ್ತ ಸದಸ್ಯರ ಕೋಪದ ಕಟ್ಟೆ ಒಡೆಯಿತು

.

ಮೊದಲಿಗೆ ಕಡಬಾ ಕ್ಷೇತ್ರದ ಸದಸ್ಯೆ ಗೌರಮ್ಮ ಮಾತನಾಡಿ, ಹೊಸಬರಿಗೆ ಅಧಿಕಾರದ ಮಣೆ ಹಾಕಿದರೆ ಹಳಬರು ಎಲ್ಲಿಗೆ ಹೋಗಬೇಕು. ಹಳಬರಿಗೆ ಅವಕಾಶ ನೀಡಬೇಕಿತ್ತು ಎಂದು ಪ್ರತಿಭಟಿಸಿದರು.



ಸೌಜನ್ಯಕ್ಕಾದರೂ ಸದಸ್ಯರ ಅಭಿಪ್ರಾಯ ಆಲಿಸುವ ಕೆಲಸ ಮಾಡಲಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ಹುಲಿನಾಯ್ಕರ್ ಅವರನ್ನು ಕೆಲ ಸದಸ್ಯರು ಪ್ರಶ್ನಿಸಿದರು. ಸದಸ್ಯರಾದ ಎಚ್.ಟಿ.ಕೃಷ್ಣಪ್ಪ, ಸಿ.ಆರ್.ಉಮೇಶ್, ಡಾ.ರವಿ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು. ಇದರಿಂದ ವಿಚಲಿತರಾದ ಹುಲಿನಾಯ್ಕರ್ ಇನ್ನೂ ಮುಂದೆ ಈ ರೀತಿಯ ತಪ್ಪು ಆಗದಂತೆ ಸರಿಪಡಿಸಿಸುವುದಾಗಿ ಹೇಳಿದರು.



ಜಿ.ಪಂ. ಸಾಮಾನ್ಯ ಸಭೆಗಳಿಗೆ ಪಕ್ಷದ ಶಾಸಕರು ಬರುತ್ತಿಲ್ಲ. ಶಾಸಕರು ಸದಸ್ಯರಿಗೆ ಮಾರ್ಗದರ್ಶನ ನೀಡುತ್ತಿಲ್ಲ ಎಂಬ ಆರೋಪ ಕೂಡ ಸದಸ್ಯರಿಂದ ಕೇಳಿಬಂತು. ಮುಂದಿನ ಸಭೆಗಳಲ್ಲಿ ಪಕ್ಷದ ಶಾಸಕರಿಗೆ ಭಾಗವಹಿಸುವಂತೆ ಸೂಚಿಸುವುದಾಗಿ ಹುಲಿನಾಯ್ಕರ್ ಭರವಸೆ ನೀಡಿದರು.



ಸಭೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಸಚಿವ ಸತ್ಯನಾರಾಯಣ್ ಇದ್ದರು. ಸದಸ್ಯರ ಕೋಪ ತಗ್ಗಿಸಲು ಮಾಡುವ ಪ್ರಯತ್ನ ಯಶ ಸಿಗಲಿಲ್ಲ. ಸುಮಾರು 20ಕ್ಕೂ ಹೆಚ್ಚು ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಹಟ ತೊಟ್ಟು ಪಕ್ಷದ ಕಚೇರಿಯಲ್ಲೇ ಕುಳಿತರು.



ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚನೆ ಮೇರೆಗೆ ಮೂವರು ಹಿರಿಯ ಸದಸ್ಯರು ಇತರ ಸದಸ್ಯರನ್ನು ಮನವೊಲಿಸಿ ಕರೆದುಕೊಂಡು ಹೋಗಬೇಕಾಯಿತು.

 

`ನಮ್ಮದೇ ಸಹಿ, ನಮ್ಮದೇ ಅಧಿಕಾರ~

ತುಮಕೂರು:
`ಕಡತಗಳಿಗೆ ಸಹಿಯೂ ನಮ್ಮದೆ. ಅಧಿಕಾರವೂ ನಮ್ಮದೇ. ಗಂಡಂದಿರು ಹಿಂಬಾಗಿಲ ಅಧಿಕಾರ ನಡೆಸಲು ಬಿಡೆವು~.



ಇದು ಜಿ.ಪಂ. ನೂತನ ಅಧ್ಯಕ್ಷೆ ಪ್ರೇಮಾ ಮಹಾಲಿಂಗಯ್ಯ ಖಡಕ್ ಉತ್ತರ.ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಹೆಸರಿನಲ್ಲಿ ಪತಿ ಅಧಿಕಾರ ನಡೆಸಲು ಬಿಡೆನು ಎಂದರು. ಬರಗಾಲದಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

 

ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಹಣ ಪೂರ್ಣ ಬಳಕೆ ಆಗಿಲ್ಲ. ಈ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವುದಾಗಿ ಹೇಳಿದರು.ಉಪಾಧ್ಯಕ್ಷೆ ಮಮತಾ ಪ್ರತಿಕ್ರಿಯಿಸಿ ಬರದ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry