ಮಂಗಳವಾರ, ಆಗಸ್ಟ್ 20, 2019
27 °C

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪಷ್ಟನೆ

Published:
Updated:

ರಾಮನಗರ: `ಬಿಜೆಪಿ ಜತೆ ಯಾವುದೇ ರೀತಿಯ ಮೈತ್ರಿ ಇಲ್ಲ. ಅದೆಲ್ಲ ವಿರೋಧಿಗಳು ಎಬ್ಬಿಸುತ್ತಿರುವ ವದಂತಿ' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಯೂ ಆಗಿರುವ ಸೊಸೆ ಅನಿತಾ ಕುಮಾರಸ್ವಾಮಿ ಅವರೊಂದಿಗೆ ರಾಮನಗರದ ಜಿಲ್ಲಾ ಕಂದಾಯ ಭವನಕ್ಕೆ ಬಂದಿದ್ದ ಅವರು, ನಂತರ ಸುದ್ದಿಗಾರರ ಜತೆ ಮಾತನಾಡಿದರು.`ನಮಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಶತ್ರುಗಳು. ಈ ಚುನಾವಣೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ನೇರ ಹೋರಾಟ' ಎಂದು ಪ್ರತಿಕ್ರಿಯಿಸಿದರು.`ದೇವೇಗೌಡರ ಕುಟುಂಬಕ್ಕೂ ಈ ಭಾಗದ ಜನರಿಗೂ ಅವಿನಾಭಾವ ಸಂಬಂಧ ಇದೆ. ನಾನು ಹಾಸನದಿಂದ ರಾಜಕೀಯ ಆರಂಭಿಸಿದೆ. ರಾಜಕಾರಣದಲ್ಲಿ ನಾನು ಎಡವಿದಾಗೆಲ್ಲ ಕನಕಪುರ, ರಾಮನಗರ ಭಾಗದ ಜನ ಕೈ ಹಿಡಿದು ಮೇಲಕ್ಕೆತ್ತಿದ್ದಾರೆ. ಹಾಗಾಗಿ ನಾನೇನು ಎಂಬುದು ಇಲ್ಲಿನ ಜನರಿಗೆ ಗೊತ್ತಿದೆ' ಎಂದರು.`ಈ ಉಪ ಚುನಾವಣೆಯನ್ನು ದೇವೇಗೌಡ ಅವರ ಕುಟುಂಬ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬದ ನಡುವಿನ ಹೋರಾಟ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಯಾವುದೇ ಕುಟುಂಬದ ವಿರುದ್ಧದ ಹೋರಾಟ ಅಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಹೋರಾಟ' ಎಂದು ಉತ್ತರಿಸಿದರು.ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, `ಇದು ದೇವೇಗೌಡರ ಕುಟುಂಬ ಮತ್ತು ಕಾಂಗ್ರೆಸ್ ನಡುವಿನ ಹೋರಾಟವಾಗಿದೆ. ಅಲ್ಲದೆ ಜನಬಲ ಮತ್ತು ಹಣಬಲವುಳ್ಳವರ ನಡುವಿನ ಹೋರಾಟವಾಗಿದೆ. ಇದರಲ್ಲಿ ಜೆಡಿಎಸ್ ಬಳಿ ಜನ ಬಲವಿದೆ' ಎಂದರು.ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮಾತನಾಡಿ, `ಈ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ' ಎಂದು ತಿಳಿಸಿದರು.

Post Comments (+)