ಮಂಗಳವಾರ, ನವೆಂಬರ್ 12, 2019
28 °C

ಜೆಡಿಎಸ್ ಸೇರಿದ ನಮೋಶಿ, ಬೇಳೂರು

Published:
Updated:

ಬೆಂಗಳೂರು: ಬಿಜೆಪಿ ಶಾಸಕರಾದ ಶಶಿಲ್ ನಮೋಶಿ ಮತ್ತು ಬೇಳೂರು ಗೋಪಾಲಕೃಷ್ಣ ಅವರು ಶನಿವಾರ ಜೆಡಿಎಸ್ ಸೇರಿದರು.ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಇಬ್ಬರೂ ಜೆಡಿಎಸ್ ಸೇರಿದರು. ನಮೋಶಿ ಅವರು ಗುಲ್ಬರ್ಗ ದಕ್ಷಿಣ ಕ್ಷೇತ್ರದಿಂದ ಹಾಗೂ ಬೇಳೂರು ಅವರು ಸಾಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.ಬೇಳೂರು ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರವಾನಿಸಿದ್ದಾರೆ. ಆದರೆ, ಅದು ಇನ್ನೂ ಅಂಗೀಕಾರ ಆಗಿಲ್ಲ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಅವರು ರಾಜೀನಾಮೆ ನೀಡಿದ್ದಾರೆ.ನಮೋಶಿ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡದೆ, ಜೆಡಿಎಸ್ ಸೇರಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಈ ಬಗ್ಗೆ ವಿಧಾನ ಪರಿಷತ್ ಸಭಾಪತಿ ಅವರಿಗೆ ಯಾರಾದರೂ ದೂರು ನೀಡಿದರೆ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.ಬಿಜೆಪಿಯ ಮತ್ತೊಬ್ಬ ಶಾಸಕ ಡಾ.ಸಾರ್ವಭೌಮ ಬಗಲಿ ಅವರು ಸದ್ಯದಲ್ಲೇ ಜೆಡಿಎಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂಡಿ ಕ್ಷೇತ್ರದಲ್ಲಿ ಅವರಿಗೆ ಬಿಜೆಪಿ ಟಿಕೆಟ್ ದೊರೆಯುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಅವರು ಜೆಡಿಎಸ್ ಸೇರಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)