ಜೆಪಿಸಿ ತನಿಖೆಗೆ ಪ್ರತಿಪಕ್ಷಗಳ ಪಟ್ಟು

7
ಕೋಲಾಹಲ ಎಬ್ಬಿಸಿದ ವಾಲ್‌ಮಾರ್ಟ್ ಲಾಬಿ

ಜೆಪಿಸಿ ತನಿಖೆಗೆ ಪ್ರತಿಪಕ್ಷಗಳ ಪಟ್ಟು

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರದ ಚಿಲ್ಲರೆ ಮಾರುಕಟ್ಟೆ ಪ್ರವೇಶಿಸಲು ಅಮೆರಿಕದ ವಾಲ್‌ಮಾರ್ಟ್ ಕಂಪೆನಿ ಲಂಚ ನೀಡಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ ತನಿಖೆ) ಅಥವಾ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿ ಪಕ್ಷಗಳು ಮಂಗಳವಾರ ಕೋಲಾಹಲ ಎಬ್ಬಿಸಿದ್ದರಿಂದ ಸಂಸತ್ತಿನ ಎರಡೂ ಸದನಗಳಲ್ಲಿ ಎರಡನೇ ದಿನವೂ ಕಲಾಪ ನಡೆಯಲಿಲ್ಲ.ಯುಪಿಎಗೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳು ಕೂಡ ತನಿಖೆಗಾಗಿ ಧ್ವನಿ ಎತ್ತಿದ ಪಕ್ಷಗಳಲ್ಲಿ ಸೇರಿದ್ದವು. ಚಿಲ್ಲರೆ ಉದ್ಯಮ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವ ಕುರಿತು ಕಳೆದ ವಾರ ಸಂಸತ್ತಿನಲ್ಲಿ ಮತದಾನ ನಡೆದಾಗ, ಈ ಪಕ್ಷಗಳು ಸರ್ಕಾರಕ್ಕೆ ನೆರವು ನೀಡಿದ್ದವು.

ಬಿಜೆಪಿ, ಜೆಡಿಯು, ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್, ಆರ್‌ಜೆಡಿಗಳು ಜಂಟಿ ಸಂಸದೀಯ ತನಿಖೆಗೆ ಆಗ್ರಹಿಸಿದವು. `ವಾಲ್‌ಮಾರ್ಟ್ ಲಾಬಿಯು ರಾಷ್ಟ್ರಕ್ಕೆ ಅಪಮಾನಕರ' ಎಂದ ಸಿಪಿಐ, ಈ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿತು. ಎಲ್ಲ ಪಕ್ಷಗಳೂ ಕಾಲಮಿತಿಯಲ್ಲಿ ತನಿಖೆ ನಡೆಯಬೇಕೆಂದು ಪಟ್ಟುಹಿಡಿದವು.ವಾಲ್‌ಮಾರ್ಟ್ ಕಂಪೆನಿಯು, ಭಾರತ ವಲಯದ ಮುಖ್ಯ ಹಣಕಾಸು ಅಧಿಕಾರಿ ಹಾಗೂ ಇತರ ಏಳು ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಅಮೆರಿಕದಲ್ಲಿ ಅವರ ವಿರುದ್ಧ ವಿಚಾರಣೆ ನಡೆಯುತ್ತಿದೆ. ಇದು ವಾಲ್ ಮಾರ್ಟ್‌ನಲ್ಲಿ ಭಾರಿ ಅವ್ಯವಹಾರಗಳು ನಡೆದಿರುವುದನ್ನು ಸೂಚಿಸುತ್ತದೆ ಎಂದು  ಬಿಜೆಪಿ ನಾಯಕ ಯಶವಂತ್ ಸಿನ್ಹಾ ಪ್ರಹಾರ ಮಾಡಿದರು.ಈ ಕುರಿತು ಅಮೆರಿಕದಲ್ಲಿ ತನಿಖೆ ನಡೆಯುತ್ತಿದೆ.  ಭಾರತದಲ್ಲಿ ತನಿಖೆ ನಡೆಯುತ್ತಿಲ್ಲ. ಲಂಚ ಪಡೆದವರು ಸುರಕ್ಷಿತವಾಗಿ ಇದ್ದಾರೆ ಎಂದು ಮಾಜಿ ವಿದೇಶಾಂಗ ಸಚಿವರೂ ಆದ ಸಿನ್ಹಾ ವ್ಯಂಗ್ಯವಾಡಿದರು.ಸರ್ಕಾರವು ಜೆಪಿಸಿ ತನಿಖೆಗೆ ಅಥವಾ ನ್ಯಾಯಾಂಗ ತನಿಖೆಗೆ ಆದೇಶಿಸದಿದ್ದರೆ ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಬೆದರಿಕೆ ಹಾಕಿದರು.ಅಮೆರಿಕದಲ್ಲಿ ಲಾಬಿ ನಡೆಸುವುದು ಅಕ್ರಮವಲ್ಲ. ಆದರೆ ಭಾರತದಲ್ಲಿ ಅದು ಲಂಚ ನೀಡಿಕೆಗೆ ಸಮನಾಗಿದ್ದು, ಕಾನೂನುಬಾಹಿರವಾಗಿದೆ ಎಂದು ಸಿಪಿಎಂ ಸದಸ್ಯ ವಸುದೇವ ಆಚಾರ್ಯ ಹೇಳಿದರು.ಎಫ್‌ಡಿಐಗೆ ಅನುಮತಿ ನೀಡಿರುವ ಕುರಿತು ಕಳೆದ ವಾರ ಸಂಸತ್ತಿನಲ್ಲಿ ಮತದಾನ ನಡೆದಾಗ, ಕಾಂಗ್ರೆಸ್ ಪಕ್ಷವು ಬಹುಮತ ಖರೀದಿಸಲು ವಾಲ್‌ಮಾರ್ಟ್ ನೆರವು ಪಡೆದಿತ್ತೇ ಎಂಬ ಸಂಶಯ ಈಗ ಮೂಡಿದೆ ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ದೂಷಿಸಿದರು.ವಾಲ್‌ಮಾರ್ಟ್ ಅಮೆರಿಕ ಸೆನೆಟ್‌ಗೆ ಸಲ್ಲಿಸಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್ ಅವರು ಹೇಳಿದ ನಂತರವೂ ಪ್ರತಿಪಕ್ಷಗಳ ಒತ್ತಾಯ ಮುಂದುವರಿಯಿತು.

`ವಿಷಯದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ತನಿಖೆ ನಡೆಸಲು ಸರ್ಕಾರ ಹಿಂಜರಿಯುವುದಿಲ್ಲ.ಈ ಸಂಬಂಧ ಸರ್ಕಾರದ ಮುಂದಿನ ನಡೆ ಏನು ಎಂಬುದನ್ನು ಸದನದಲ್ಲೇ ಇವತ್ತೇ ಪ್ರಕಟಿಸಲಾಗುವುದು' ಎನ್ನುವ ಮೂಲಕ ಕಮಲ್‌ನಾಥ್ ಪ್ರತಿಪಕ್ಷಗಳನ್ನು ಸಮಾಧಾನಗೊಳಿಸಲು ಯತ್ನಿಸಿದ್ದೂ ಫಲ ನೀಡಲಿಲ್ಲ. ರಾಜ್ಯಸಭೆಯಲ್ಲಿ ಕೂಡ ಇದೇ ವಿಷಯವಾಗಿ, ಬಿಜೆಪಿ, ಎಡ ಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್‌ಗಳ ಪದೇಪದೇ ದನಿ ಎತ್ತಿದ್ದರಿಂದ ಕಲಾಪ ಭಂಗವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry