ಜೆಪಿಸಿ ಮುಂದೆ ನಿಲ್ಲಲೂ ಸಿದ್ಧ- ಪ್ರಧಾನಿ ಸಿಂಗ್

7

ಜೆಪಿಸಿ ಮುಂದೆ ನಿಲ್ಲಲೂ ಸಿದ್ಧ- ಪ್ರಧಾನಿ ಸಿಂಗ್

Published:
Updated:

ನವದೆಹಲಿ: 2ಜಿ ತರಂಗಾಂತರ ಹಗರಣದ ತನಿಖೆಗೆ ಸಂಬಂಧಿಸಿದಂತೆ ತಾವು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಎದುರು ಹಾಜರಾಗಲೂ ಸಿದ್ಧ ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್, ಪ್ರಸಕ್ತ ವಿವಾದಗಳಿಗೆ ಸಂಬಂಧಿಸಿದಂತೆ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.ಬುಧವಾರ ಟಿ ವಿ ವಾಹಿನಿಗಳ  ಸಂಪಾದಕರ ಜತೆಗಿನ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ನಿಭಾಯಿಸುವ ಸಂದರ್ಭದಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ ಎಂದು ಒಪ್ಪಿಕೊಂಡರು. ಆದರೆ ತಮ್ಮ ಸರ್ಕಾರ ಯಾವುದೇ ಹಗರಣದಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಬದ್ಧವಾಗಿದೆ ಎಂದೂ ಸ್ಪಷ್ಟಪಡಿಸಿದರು.ಹಗರಣಗಳಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ಕೈಗೊಳ್ಳದೇ ಇರುವಷ್ಟು ತಮ್ಮ ಸರ್ಕಾರವಾಗಲೀ, ತಾವಾಗಲೀ ದುರ್ಬಲರಲ್ಲ, ಹಗರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸುವುದು ಸರ್ಕಾರದ ಕರ್ತವ್ಯ, ಅದು ನಡೆಯುತ್ತಿದೆ ಎಂದರು. ಎಚ್ಚರಿಕೆ ನೀಡಲಾಗಿತ್ತು:2-ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ, ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಪಾಲಿಸಲು ರಾಜಾ ಅವರಿಗೆ ಮೊದಲೇ ತಿಳಿಸಲಾಗಿತ್ತು,  ಜತೆಗೆ ದೂರ ಸಂಪರ್ಕ ಮತ್ತು ಹಣಕಾಸು ಸಚಿವಾಲಯ ಸಹ ರೂಢಿಯಲ್ಲಿದ್ದ ಪದ್ಧತಿಯಂತೆ ನಡೆದುಕೊಳ್ಳಲು ಸಮ್ಮತಿಸಿದ್ದವು. ಇದನ್ನು ತಜ್ಞರನ್ನು ಒಳಗೊಂಡ ಟ್ರಾಯ್ ಮತ್ತು ಟೆಲಿಕಾಂ ಕಮಿಷನ್ ಸಹ ಬೆಂಬಲಿಸಿದ್ದವು ಎಂದು ವಿವರಣೆ ನೀಡಿದರು.ದೂರುಗಳಿದ್ದರೂ ರಾಜಾ ಅವರನ್ನು ಪುನಃ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಮಾತನಾಡಿದ ಸಿಂಗ್, ಮೈತ್ರಿ ಸರ್ಕಾರದಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಎನ್ನುವ ವಿಚಾರದಲ್ಲಿ ಪ್ರಧಾನಿಗೆ ಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ಇಂತಹವರನ್ನೇ ಸೂಚಿಸುವಂತೆ ಸಲಹೆ ಮಾಡಲೂ ಸಾಧ್ಯವಿಲ್ಲ. ಪಕ್ಷಗಳು ಸೂಚಿಸಿದ ವ್ಯಕ್ತಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳ ಬೇಕಾಗುತ್ತದೆ. ರಾಜಾ ಮತ್ತು ದಯಾನಿಧಿ ಮಾರನ್ ವಿಚಾರದಲ್ಲಿಯೂ ಹೀಗೆಯೇ ಆಗಿದೆ. ಇದರ ಅರ್ಥ ಡಿಎಂಕೆ ಹೆಸರು ಸೂಚಿಸುವಾಗ ತಪ್ಪು ಮಾಡಿದೆ ಎಂದೇನೂ ಅಲ್ಲ ಎಂದರು.ತರಂಗಾಂತರ ಹಂಚಿಕೆಯಲ್ಲಿ ಅನುಕೂಲ ಪಡೆದುಕೊಳ್ಳಲು ಆಗದ ಕಂಪೆನಿಗಳು ರಾಜಾ ವಿರುದ್ಧ ದೂರಿದ್ದವು. ಆ ಆಧಾರದ ಮೇಲೆ ರಾಜಾ ಅವರ ಸೇರ್ಪಡೆಯನ್ನು ವಿರೋಧಿಸಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡರು.ಮೈತ್ರಿ ಧರ್ಮ: ‘‘ಸಮ್ಮಿಶ್ರ ಸರ್ಕಾರದಲ್ಲಿ ‘ಮೈತ್ರಿ ಧರ್ಮ’ ಇರುತ್ತದೆ. ನನಗೆ ಅನಿಸಿದ ರೀತಿಯಲ್ಲಿ ಬೇರೆಯವರೂ ಇರಬೇಕು ಎಂದು ನಿರೀಕ್ಷಿಸುವಂತಿಲ್ಲ” ಎಂದು ಮಾರ್ಮಿಕವಾಗಿ ನುಡಿದ ಸಿಂಗ್, ದೇಶದ ಜನರು ಮೈತ್ರಿ ಸರ್ಕಾರವನ್ನು ಮುನ್ನಡೆಸಲು ತಮ್ಮ ಪಕ್ಷಕ್ಕೆ ಮತ ನೀಡಿದ್ದಾರೆ. ಇನ್ನೂ ಅನೇಕ ಕೆಲಸಗಳು ಬಾಕಿ ಇವೆ. ಅವುಗಳನ್ನು ಅರ್ಧದಲ್ಲಿಯೇ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದರು.ಸುಮಾರು 70 ನಿಮಿಷಗಳ ಕಾಲ ನಡೆದ ಸಂವಾದದಲ್ಲಿ ಪ್ರಮುಖವಾಗಿ ಇಸ್ರೋದ ಎಸ್-ಬ್ಯಾಂಡ್ ಸೇರಿದಂತೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳ ಸುತ್ತಲೇ ಪ್ರಧಾನಿ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಸುಸೂತ್ರ ಬಜೆಟ್ ಅಧಿವೇಶನ ನಡೆಸಲು ಅಗತ್ಯವಾದ ವಾತಾವರಣ ನಿರ್ಮಿಸಲು ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆದಿದೆ ಎಂದೂ ಅವರು ತಿಳಿಸಿದರು.ದೊಡ್ಡ ಅಪರಾಧಿಯಲ್ಲ: ಹಗರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯಸ್ಥರಾಗಿ ನೈತಿಕ ಹೊಣೆ ಹೊರುವಿರಾ ಎನ್ನುವ ಪ್ರಶ್ನೆಗೆ, ‘ನಾನು ತಪ್ಪು ಮಾಡಿಯೇ ಇಲ್ಲ ಎಂದು ಹೇಳುವುದಿಲ್ಲ. ಆದರೆ ಈಗಾಗಲೇ ಬಿಂಬಿಸಿರುವಷ್ಟು ದೊಡ್ಡ ಅಪರಾಧಿಯಲ್ಲ. ವೈಯಕ್ತಿಕ ಜವಾಬ್ದಾರಿಯ ಬಗ್ಗೆ ಅರಿವು ಇದೆ. ಆದರೆ ಪ್ರತಿ ಆರು ತಿಂಗಳಿಗೊಂದು ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ದೇಶ ಇಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.ಮಾಧ್ಯಮಗಳು ಹೊರಗೆಳೆದಿರುವ ಹಗರಣಗಳ ಬಗ್ಗೆ ಮಾತನಾಡಿದ ಅವರು, ಭಾರತ ಹಗರಣಗಳ ತವರು ಎಂದು ಬಿಂಬಿಸಬೇಡಿ ಎಂದು ಮನವಿ ಮಾಡಿದರು.ಈಗ ನಡೆದಿರುವ ಅಕ್ರಮಗಳು ಮುಂದೆ ನಡೆಯದಂತೆ ನೋಡಿಕೊಳ್ಳುವುದು ಪ್ರಸಕ್ತ ಸರ್ಕಾರದ ಗುರಿ ಎಂದರು.ಆಡಳಿತ ನಡೆಸುವವರೊಂದಿಗೆ (ಸಚಿವ ಸಂಪುಟದಲ್ಲಿ) ಹೊಂದಾಣಿಕೆ ಕೊರತೆ ಇದೆ ಎಂದ ಗೃಹ ಸಚಿವ ಪಿ. ಚಿದಂಬರಂ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಿಂಗ್, ‘ಖಂಡಿತವಾಗಿ ಕೆಲವು ನ್ಯೂನತೆಗಳು ಇರುತ್ತವೆ. ಆದರೆ ಎಲ್ಲರೂ ಅವುಗಳನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ’ ಎಂದು ಹೇಳಿದರು.

ಬಜೆಟ್ ನಂತರ ಸಂಪುಟ ಪುನಾರಚನೆ

ನವದೆಹಲಿ (ಪಿಟಿಐ):
ಬಜೆಟ್ ಅಧಿವೇಶನದ ನಂತರ ತಾವು ಸಂಪುಟ ಪುನಾರಚನೆ ಮಾಡುವುದಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದರು. ಪುನಾರಚನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುವುದೇ ಎನ್ನುವ ಪ್ರಶ್ನೆಗೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. 

 ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನವಿರಲಿ

ನವದೆಹಲಿ (ಪಿಟಿಐ): ಸರ್ಕಾರದ ಉತ್ತಮ ಕೆಲಸಗಳು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಗಮನ ಹರಿಸಿ ಎಂದು ಪ್ರಧಾನಿ ಸಿಂಗ್ ಅವರು ಸಂಪಾದಕರಲ್ಲಿ ಮನವಿ ಮಾಡಿಕೊಳ್ಳುತ್ತಾ ‘ಎಲ್ಲವನ್ನೂ ನಕಾರಾತ್ಮಕ ದೃಷ್ಟಿಕೋನದಿಂದಲೇ ನೋಡುವುದನ್ನು ಕಡಿಮೆ ಮಾಡಿ’ ಎಂದೂ ವಿನಯದಿಂದಲೇ ಹೇಳಿದ್ದು ವಿಶೇಷವಾಗಿತ್ತು.

ಸಂಪಾದಕರಲ್ಲಿ ಕೆಲವರು ‘ಯಾವ ಟೀವಿ ವಾಹಿನಿಯನ್ನು ನೀವು ಹೆಚ್ಚಾಗಿ ನೋಡುತ್ತೀರಿ’ ಎಂದು ಪ್ರಶ್ನಿಸಿದ್ದಕ್ಕೆ, ಸಿಂಗ್ ‘ಟಿವಿ ನೋಡಲು ನನಗೆ ಪುರುಸೊತ್ತೆಲ್ಲಿದೆ ಹೇಳಿ’ ಎಂದು ನಕ್ಕರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry